Jul 8, 2013

ದೇವರ ಆಟ....!!!!



ಡಾಕ್ಟರ್ ಕೊಟ್ಟ ಸಮಯ ಮುಗಿದಿತ್ತು... ಎದೆಯ ಬಡಿತವೂ ಹೆಚ್ಚಿತ್ತು... ಅವರು ಹೇಳಿದಂತೆಯೇ ಆದರೆ ಖುಷಿ ಪಡುವುದೋ, ದುಖಃ ಪಡುವುದೋ ಅರ್ಥವಾಗಲಿಲ್ಲ...
... ಭಾರವಾದ ಮನಸ್ಸಿನಿಂದ ಕುಲದೇವರನ್ನು ನೆನೆಸಿದೆ... ಬದುಕಿಸಿ ಕೊಡು ಅಂತಲೋ, ಸಾಯಿಸಿ ಬಿಡು ಅಂತಲೋ ನನಗೂ ಗೊತ್ತಿರಲಿಲ್ಲ... ದೊಡ್ಡದೊಂದು ಉಸಿರು ಬಿಟ್ಟು ಎದ್ದೆ... ಅಕ್ಕ ಪಕ್ಕದಲ್ಲಿ ಏನೂ ಕಾಣುತ್ತಿರಲಿಲ್ಲ... ಐ.ಸಿ.ಯು. ಎಂದು ಬರೆದ ಬಾಗಿಲಿನ ಕಡೆ ನಡೆಯುತ್ತಿದ್ದೆ... ಗಡಿಬಿಡಿಯಿಂದ ಬರುವಾಗ ಹಾಕಿಕೊಂಡು ಬಂದ ಹವಾಯಿ ಚಪ್ಪಲಿಯ ಸದ್ದು ದೊಡ್ಡದಾಗಿ ಕೇಳಿಸುತ್ತಿತ್ತು... ಬಾಗಿಲಿನ ಹತ್ತಿರ ಬಂದು ಬಾಗಿಲು ತಳ್ಳುವವನಿದ್ದೆ........ ತನ್ನಷ್ಟಕ್ಕೆ ಬಾಗಿಲು ತೆರೆದುಕೊಂಡಿತು... ಒಳಗಡೆಯಿಂದ ಒಬ್ಬರು ನರ್ಸ್ ಬಂದರು... "ಡಾಕ್ಟರ್ ನಿಮಗೆ ಸ್ವಲ್ಪ ಸಮಯ ಕಾಯಲು ಹೇಳಿದ್ದಾರೆ... ಅವರೂ ಬರ್ತಾರಂತೆ ನಿಮ್ಮ ಜೊತೆ" ಅಂದರು ಆಕೆ... ಸ್ವಲ್ಪ ಸಮಾಧಾನವಾಯಿತು.. ಹೊರಗಡೆಯೇ ನಿಂತೆ... ನನ್ನ ಪಕ್ಕದಲ್ಲಿ ಒಬ್ಬರು ಹೊಸದಾಗಿ ಮದುವೆಯಾದ ಜೋಡಿ ನಿಂತಿದ್ದರು... ಅವರನ್ನು ನೋಡುತ್ತಲೇ ನಾನು ನನ್ನ ಕಥೆ ನೆನಪಿಸಿಕೊಂಡೆ....
                                                                                      *********
ಮದುವೆಯಾಗಿ ಆಗಷ್ಟೇ ವರುಷ ಕಳೆದಿತ್ತು.... ಹೆಂಡತಿಯ ಡೆಲಿವರಿ ದಿನಾಂಕವೂ ಹತ್ತಿರ ಬಂದಿತ್ತು.. ಡಾಕ್ಟರ್ ಹೇಳಿದ ದಿನವೇ ಅವರ ಹತ್ತಿರ ಹೋಗಿದ್ದೆವು..."ಇನ್ನೆರಡು ದಿನದಲ್ಲೇ ಹೆರಿಗೆ ಆಗತ್ತೆ, ಏನೂ ತೊಂದರೆ ಇಲ್ಲ.. ಹೆದರಬೇಡಿ... ನೋವು ಬಂದಾಗ ಬನ್ನಿ " ಎಂದರು..ನಮಗೆ ಅಳುಕು.. " ಮೇಡಮ್, ಏನೂ ತೊಂದರೆ ಇಲ್ಲಾ ತಾನೆ..?" ಎಂದೆ ನಾನು.. ಅವರು ಆರಾಮಾಗಿಯೇ ಹೇಳಿದರು.." ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ... ಹೆದರಬೇಡಿ" ಎಂದರು... ನಾವು ವಾಪಸ್ ಬಂದೆವು.. ಮನೆಗೆ ಬಂದು ತಲುಪುವಷ್ಟರಲ್ಲೇ ನನ್ನಾಕೆಗೆ ಹೆರಿಗೆ ನೋವು ಬಂತು...

ಕೂಡಲೇ ಅದೇ ರಿಕ್ಷಾದಲ್ಲೇ ವಾಪಸ್ ಆಸ್ಪತ್ರೆಗೆ ಬಂದೆವು.. ಡಾಕ್ಟರ್ ಮೆಡಮ್ ಇನ್ನೊಂದು ಡೆಲಿವರಿ ಕೇಸ್ ನಲ್ಲಿ ಇದ್ದರು.. ನಾವು  ಅಡ್ಮಿಟ್ ಆದೆವು... ನನ್ನಾಕೆಯ ನೋವು ವಿಪರೀತವಾಗಿತ್ತು... ನನಗೆ ಆಕೆಯ ನೋವು ನೋಡಲಾಗಲಿಲ್ಲ .. ಹೊರ ಬಂದೆ.. ಅಷ್ಟರಲ್ಲೇ ನನ್ನಾಕೆಯ ಅಮ್ಮ ಮತ್ತು ನನ್ನಮ್ಮ ಇಬ್ಬರೂ ಬಂದರು... ನನ್ನಾಕೆಯ ಅಮ್ಮನನ್ನು ಅವಳ ಹತ್ತಿರ ಕಳಿಸಿದೆ... ಎಷ್ಟಾದರೂ ಅಮ್ಮನಿಗೆ ಅರ್ಥ ಆಗೋದು ಅಮ್ಮನಾಗುವ ನೋವು ಅಲ್ವಾ...?

ಅಲ್ಲಿದ್ದ ನರ್ಸ್ ಹತ್ತಿರ ಕೇಳುತ್ತಾ ಇದ್ದೆ, ನನ್ನಾಕೆಯ ಸ್ಥಿತಿ.. ಅವರಿಗೋ, ಎಂದಿನಂತೆ ಇದೂ ಒಂದು ಡೆಲಿವರಿ ಕೇಸ್ ಅಷ್ಟೆ... ನಮಗೆ ಇದು ಜೀವನ್ಮರಣದ ಪ್ರಶ್ನೆಯಾಗಿತ್ತು.... ಮದುವೆಯಾಗಿ ಹೋದ ಮಗಳ ಮೊದಲನೇ ಹೆರಿಗೆಯನ್ನು ತವರು ಮನೆಯವರೇ ನೋಡಿಕೊಳ್ಳುವುದು ಕಾರಣ ಇದೂ ಇರಬಹುದೇನೋ... ಹೆರಿಗೆ ಎಂದರೆ ಮರಣದ ವಿರುದ್ದ ಹೋರಾಟವೇ ಸೈ ಎನ್ನುತ್ತಾರೆ... ನನ್ನಾಕೆಯ ನರಳಾಟ, ಕೂಗಾಟ ನನ್ನ ಕಿವಿಗೆ ಕೇಳಿಸುತ್ತಿತ್ತು...  ನನಗೂ ನೋವು ತರುತ್ತಿತ್ತು.. ಪಕ್ಕದಲ್ಲೇ ಇದ್ದ ಅಂಗಡಿಗೆ ಹೋದೆ... ಸಿಗರೇಟು ಸೇದೋಣ ಎಂದು... 

ಈ ಮಧ್ಯೆ ಆಸ್ಪತ್ರೆಯ ಒಳಗಡೆ ಹೋಗಿ ಡಾಕ್ಟರ್ ಹತ್ತಿರ ಮಾತನಾಡಿ ಬಂದಿದ್ದೆ... " ನೋವು ಬರ್ತಾ ಇದೆ ಆದರೆ ನಿಮ್ಮಾಕೆಯೂ ಒತ್ತಡ ಹಾಕಬೇಕು ಮಗು ಹೊರ ಬರಲು... ಇಲ್ಲದಿದ್ದರೆ ತೊಂದರೆ ಆಗತ್ತೆ.. ನಿಮ್ಮಾಕೆ ಸುಸ್ತಾಗಿದ್ದಾಳೆ " ಎಂದರು.. ನನಗೆ ಗಾಬರಿ ಆಯ್ತು... " ಈಗ ಏನ್ಮಾಡೊದು ಮೇಡಮ್..? " ಎಂದೆ ಗಾಬರಿಯಿಂದ.. " ಹೆದರಬೇಡಿ, ನಿಮ್ಮಾಕೆಗೆ ಧೈರ್ಯ ಹೇಳಿ... ಒತ್ತಡ ಹಾಕಲು ಹೇಳಿ..ಎಲ್ಲಾ ಸರಿಯಾಗತ್ತೆ" ಎನ್ನುತ್ತಲೇ ಒಳಗೆ ಓಡಿದರು ಆಕೆ ಇನ್ನೊಂದು ಕೇಸಿನ ಸಲುವಾಗಿ... ನಾನು ಅಲ್ಲಿದ್ದ ಇನ್ನೊಂದು ನರ್ಸ್ ಹತ್ತಿರ ಕೇಳಿದೆ... " ತೊಂದರೆ ಇದ್ದರೆ ಸೀಸರಿನ್ ಮಾಡಬಹುದು ಅಲ್ವಾ..? " ಎಂದೆ...

" ನಮ್ಮ ಹತ್ತಿರ ಅನೆಸ್ಥೇಷಿಯಾ ಡಾಕ್ಟರ್ ಇಲ್ಲಾ, ಅವರು ರಜೆ ಮೇಲಿದ್ದಾರೆ , ನೀವು ಹೆದರಬೇಡಿ, ನಾರ್ಮಲ್ ಡೆಲಿವರಿ ಆಗತ್ತೆ " ಎಂದು ಹೇಳಿದರು ಆಕೆ.. ನನಗೆ ಇನ್ನೂ ಗಾಬರಿ...ಮತ್ತದೇ ಪಕ್ಕದ ಅಂಗಡಿಗೆ ಹೋದೆ... ಬಿಸಿ ಗಾಳಿಗಾಗಿ.... ನಾಲ್ಕು ತಾಸು..... ನಾಲ್ಕು ತಾಸು.. ಅಂಡು ಸುಟ್ಟ ಬೆಕ್ಕಿನ ಹಾಗೆ ಅಲ್ಲಿಂದ ಇಲ್ಲಿಗೆ , ಇಲ್ಲಿಂದ ಅಲ್ಲಿಗೆ ಓಡಾಡಿದೆ.... ನನ್ನ ಅಮ್ಮ ಓಡುತ್ತಾ ಬಂದರು... " ಆ ನರ್ಸ್ ಹೇಳ್ತಾ ಇದ್ದಾರೆ, ಡೆಲಿವರಿ ಆಗಿದೆಯಂತೆ... ಮಗುವಿಗೆ ಉಸಿರಾಟದ ತೊಂದರೆ ಆಗಿದೆಯಂತೆ... ಡಾಕ್ಟರ್ ಹತ್ತಿರ ಮಾತನಾಡೋಣ ಬಾ... ಅಗತ್ಯ ಬಿದ್ದರೆ ಮಣಿಪಾಲಿಗೆ ಕರೆದುಕೊಂಡು ಹೋಗೋಣ" ಎನ್ನುತ್ತಲೇ ಆಕೆ ಅಳಲು ಶುರು ಮಾಡಿದರು...

ನಾನು ಓಡುತ್ತಾ ಆಸ್ಪತ್ರೆಗೆ ಬಂದೆ... ಅಲ್ಲಿದ್ದ ಮಕ್ಕಳ ಡಾಕ್ಟರ್ ಹತ್ತಿರ ಕೇಳಿದೆ... ಅವರು " ನಿಮ್ಮಾಕೆ ಮಗು ಹೊರ ಬರುವ ಸಮಯದಲ್ಲೇ ಸುಸ್ತಾಗಿದ್ದರು.. ಅವರಿಗೆ ಸಾಕಷ್ಟು ಒತ್ತಡ ಕೊಡಲು ಆಗಲೇ ಇಲ್ಲ.. ಮಗು ಅರ್ಧ ಹೊರ ಬಂದಾಗ ಇವರಿಗೆ ಎಚ್ಚರ ಇರಲಿಲ್ಲ.. ಹಾಗಾಗಿ ಮಗುವಿಗೆ ಉಸಿರಾಟದ ತೊಂದರೆ ಆಗಿದೆ... ಇನ್ನೊಂದು ವಿಷಯ ಎಂದರೆ ಹೊಕ್ಕಳ ಬಳ್ಳಿ ಮಗುವಿನ ಕುತ್ತಿಗೆಯ ಸುತ್ತಲೂ ಬಂದು ಮಗು ಗರ್ಭದಲ್ಲೇ ಇರುವಾಗ ವಿಸರ್ಜನೆ ಮಾಡಿಕೊಂಡಿದೆ ಮತ್ತು ಅದು ಮಗುವಿನ ಮೂಗಿನ ಮೂಲಕ ಶ್ವಾಸಕೋಶ ಸೇರಿದೆ... ಮೆದುಳಿಗೆ ಆಮ್ಲಜನಕದ ಸರಬರಾಜು ಆಗಿದೆಯೋ ಇಲ್ಲವೋ ಎನ್ನುವ ಅನುಮಾನವೂ ನಮಗಿದೆ..." ಎಂದರು..

ನಿಂತ ನೆಲ ಕುಸಿದ ಅನುಭವ ನನಗೆ... ಕೈಯಿ ಸಿಗರೇಟು ಹುಡುಕುತ್ತಿತ್ತು... ಅವರೇ ಮುಂದುವರಿದು " ಈಗ ಏನೂ ಹೇಳಲು ಬರುವುದುಲ್ಲ... ಆಕ್ಷಿಜನ್ ಬಾಕ್ಸ್ ನಲ್ಲಿ ಇಟ್ಟಿದ್ದೇನೆ... ಈ ಸಮಯದಲ್ಲಿ ಯಾವುದೇ ಆಸ್ಪತ್ರೆಗೆ ಹೋದರೂ ಮಾಡುವುದು ಇದನ್ನೇ... ಹಾಗಾಗಿ ಇನ್ನೂ ಸ್ವಲ್ಪ ಹೊತ್ತು ಕಾಯೋಣ... ಉಸಿರಾಟ ಸರಿಯಾದ ಬಳಿಕ ಮಣಿಪಾಲಿಗೆ ಕರೆದುಕೊಂಡು ಹೋಗಿ " ಎಂದರು ಅವರು... ನಾನು ಆಗಲೇ ಡೆಲಿವರಿ ಮಾಡಿದ ಡಾಕ್ಟರ್ ಹುಡುಕಿಕೊಂಡು ಹೊರಟೆ... ಮಗು ಹೊಟ್ಟೆಯಲ್ಲೇ ವಿಸರ್ಜನೆ ಮಾಡಿಕೊಂಡರೆ, ಹೊಕ್ಕಳ ಬಳ್ಳಿ ಸುತ್ತು ಹಾಕಿಕೊಂಡರೆ ಸ್ಕ್ಯಾನಿಂಗ್ ಮಾಡಿದಾಗ ಗೊತ್ತಾಗುವುದಿಲ್ಲವಾ...? ಇವರ ಆಸ್ಪತ್ರೆಯ ಸ್ಕ್ಯಾನಿಂಗ್ ಮಸಿನ್ ಕೆಟ್ಟಿದ್ದರೆ ಬೇರೆಯವರ ಬಳಿ ಕಳಿಸಬಹುದಿತ್ತಲ್ಲ....? ತಲೆ ತುಂಬಾ ಪ್ರಶ್ನೆಗಳೇ ತುಂಬಿತ್ತು.... ಉತ್ತರ ಹೇಳುವವರು ಯಾರೂ ಇರಲಿಲ್ಲ...

ಅಷ್ಟರಲ್ಲೇ ಅದೇ ಮಕ್ಕಳ ಡಾಕ್ಟರ್ ಕರೆದರು... " ಮಗುವಿನ ಉಸಿರಾಟ ಸರಿಯಾಗುತ್ತಾ ಇದೆ... ಕೂಡಲೇ ಮಣಿಪಾಲಿಗೆ ಕರೆದುಕೊಂಡು ಹೋಗಿ" ಎಂದ ಅವರು ಅಂಬುಲನ್ಸ್ ಗೆ ಕರೆ ಮಾಡಿದರು... ಮುಂದಿನ ಮೂರೇ ತಾಸಿನಲ್ಲಿ ಮಣಿಪಾಲಿನ ಐ.ಸಿ.ಯು ನಲ್ಲಿ ನನ್ನ ಮಗುವಿತ್ತು... ನನ್ನಾಕೆ ಇನ್ನೂ ಊರಲ್ಲೇ ಇದ್ದಳು... ಇಲ್ಲಿಗೆ ತಂದ ಒಂದು ವಾರದ ತನಕವೂ ನಮಗೆ ಮಗುವಿಗೆ ಏನಾಗಿದೆ, ಯಾಕೆ ಹೀಗಾಯ್ತು ಎನ್ನುವ ಸರಳ ಪ್ರಶ್ನೆಗಳಿಗೂ ಉತ್ತರ ದೊರಕಲಿಲ್ಲ... ನನಗೆ ನನ್ನ ಮಗು ಸರಿಯಾಗಬೇಕಿತ್ತು ಅಷ್ಟೇ... ನನ್ನ ಮಗುವಿನ ಮುಂದೆ ಮತ್ತೆಲ್ಲಾ ಪ್ರಶ್ನೆಗಳೂ ಗೌಣವಾಗಿದ್ದವು...

ಮಣಿಪಾಲ್ ಡಾಕ್ಟರ್ ಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರು.... ಅವರ ಪ್ರಯತ್ನ ಕೈಗೂಡುವ ಲಕ್ಷಣ ಒಂದು ದಿನ ಕಂಡರೆ , ಇನ್ನೊಂದು ದಿನ ಕಾಣುತ್ತಿರಲಿಲ್ಲ... ದಿನಾಲೂ ಹೋಗಿ ಮಗುವನ್ನು ನೋಡಿ ಬರುತ್ತಿದ್ದೆ... ಮಗುವಿನಲ್ಲಿ ಏನೂ ಚಲನೆ ಇರಲಿಲ್ಲ.. ಕಣ್ಣು ಮುಚ್ಚೇ ಇತ್ತು... ಮಗು ಅಳುತ್ತಲೂ ಇರಲಿಲ್ಲ..
ಡಾಕ್ಟರ್ ಕೇಳಿದರೆ " ಈಗ ಏನೂ ಹೇಳಲು ಬರುವುದಿಲ್ಲ, ಸ್ವಲ್ಪ ದಿನ ಕಾಯಬೇಕು.. ಸ್ವಲ್ಪ ಟೆಸ್ಟ್ ಸಹ ಮಾಡಲಿಕ್ಕಿದೆ.... ಎಂದು ಹೇಳುತ್ತಿದ್ದರು..

ಇಲ್ಲಿಗೆ ಬಂದ ಹದಿನೈದು ದಿನದ ನಂತರ ನನ್ನನ್ನು ಒಳಗೆ ಕರೆದುಕೊಂಡು ಹೋದ ಡಾಕ್ಟರ್ ನನ್ನ ಮಗುವನ್ನು ತೋರಿಸಿದರು.. ಪ್ರಶಾಂತ ನಿದ್ರೆಯಲ್ಲಿತ್ತು ನನ್ನ ಮಗು... ಈಗಷ್ಟೇ ಸ್ನಾನ ಮಾಡಿಸಿ ಮಲಗಿಸಿದ ಹಾಗಿತ್ತು... ಆದರೆ ಚಲನೆ ಇರಲಿಲ್ಲ, ಉಸಿರಾಟದ ತೊಂದರೆ ಈಗಲೂ ಇತ್ತು... ಡಾಕ್ಟರ್ ನನಗೆ ಮಗುವಿನ ತಲೆಯ
 ಸುತ್ತ ತೊರಿಸಿ ಹೇಳಿದರು... " ಹೆರಿಗೆಯ ಸಮಯದಲ್ಲಿ ಮಗು ಅರ್ಧ ಹೊರ ಬಂದಾಗ ಮಗುವಿನ ತಲೆಯನ್ನು ಇಕ್ಕಳ ಉಪಯೋಗಿಸಿ ಹೊರ ತೆಗೆದಿದ್ದಾರೆ... ಹಾಗಾಗಿ, ಮಗುವಿನ ತಲೆಗೆ ಪೆಟ್ಟಾಗಿದೆ... ಹೊಕ್ಕಳ ಬಳ್ಳಿ ಕುತ್ತಿಗೆಗೆ ಸುತ್ತಿಕೊಂಡೆದೆ... ಮಗು ಗರ್ಭದಲ್ಲೇ ಮಲವಿಸರ್ಜನೆ ಮಾಡಿಕೊಂಡ ಕಾರಣ, ಮೂಗಿನಲ್ಲಿ ಹೋಗಿ ಶ್ವಾಸಕೋಶ ಬಂದ್ ಆಗಿದೆ... ಮೆದುಳಿಗೂ ಆಮ್ಲಜನಕ ಪೂರೈಕೆ ಆಗಿಲ್ಲ... ಹಾಗಾಗಿ ಮುಂದಕ್ಕೆ ಮಗುವಿನ ಬೆಳವಣಿಗೆ ಸರಿ ಆಗತ್ತೆ ಅನ್ನುವ ಬರವಸೆ ಇಲ್ಲಾ... "

ಕಾದ ಕಬ್ಬಿಣ ಸುರಿದ ಹಾಗೆ ಆಯ್ತು.... ಮಾತು ಹೊರಡಲಿಲ್ಲ... ಮೈ ಬೆವರುತ್ತಿತ್ತು ಅಂಥಹ ಏ.ಸಿ. ಯಲ್ಲೂ.... ಅವರೂ ಇನ್ನೂ ಮುಂದುವರಿದು " ಈಗ ಮಗು ಜೀವ  ಆಕ್ಷಿಜನ್ ಪೂರೈಕೆಯ ಮೇಲೆ ನಿಂತಿದೆ.. ಇದರ ಪೂರೈಕೆ ನಿಲ್ಲಿಸಿದರೆ.... " ಒಂದು ಕ್ಷಣ ನಿಂತು " ಮಗು ಸಾಯತ್ತೆ " ಅಂದರು...  ನನಗೆ ಅಳು ತಡೆಯಲಾಗಲಿಲ್ಲ... ಈ ಮಗುವನ್ನು ಎತ್ತಲಿಲ್ಲ...ಮುದ್ದಾಡಿರಲಿಲ್ಲ... ಮಗುವಿನ ಮುಖವನ್ನೂ ಸರಿಯಾಗಿ ನೋಡಿರಲಿಲ್ಲ... ಆದರೂ...ನನ್ನ ಅಂಶವನ್ನು ಹಂಚಿಕೊಂಡು ಹುಟ್ಟಿದ ಮಗುವಾಗಿತ್ತು... ಕಣ್ಣಲ್ಲಿ ನೀರು ತುಂಬಿ ಬಂತು.... ಡಾಕ್ಟರ್ ನನ್ನ ಹೆಗಲ ಮೇಲೆ ಕೈ ಹಾಕಿ ಹೇಳಿದರು... " ಸಮಾಧಾನ  ಮಾಡಿಕೊಳ್ಳಿ, ಇದೆಲ್ಲಾ ನಮ್ಮ ಕೈಯಲ್ಲಿ ಇರಲ್ಲ... ಮೇಲಿನವನು ಆಡಿಸುತ್ತಾನೆ, ನಾವು ಆಡಬೇಕು....  ಯಾರ ಹಣೆಬರಹದಲ್ಲಿ ಎಷ್ಟು ಆಯಸ್ಸು ಇರತ್ತೋ, ಅಷ್ಟೇ ದಿನ ಬದುಕಿರೋದು.... ಅದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ..."

ನಾನು ಡಾಕ್ಟರನ್ನ ತಬ್ಬಿ ಹಿಡಿದೆ.... ಕಣ್ಣಲ್ಲಿ ನೀರು ನಿಲ್ಲುತ್ತಿರಲಿಲ್ಲ.."ಈಗ ಒಂದು ವಿಷಯವನ್ನು ನಿಧಾನವಾಗಿ ಯೋಚಿಸಿ.... ಈ ಮಗು ಹೀಗೆ ಬೆಳೆದರೆ ಖಂಡಿತವಾಗಿಯೂ ಅಂಗವಿಕಲವಾಗಿಯೇ ಬೆಳೆಯತ್ತೆ.. ಇಂಥಾ ಮಗುವನ್ನು ನೋಡಿಕೊಳ್ಳಲೂ ನಿಮಗೆ ನಿಮ್ಮ ಕುಟುಂಬದವರಿಗೆ ತುಂಬಾ ತಾಳ್ಮೆ ಬೇಕು... ಆರ್ಥಿಕವಾಗಿಯೂ ಗಟ್ಟಿತನ ಬೇಕು... ಈಗ ಮಗು ಬರಿಯ ಆಮ್ಲಜನಕ ಸಹಾಯದಿಂದ ಅಷ್ಟೇ ಬದುಕಿದೆ.... ಅದನ್ನ ನಿಲ್ಲಿಸಿದರೆ ಖಂಡಿತ ಮಗು ಸಾಯತ್ತೆ..... ಇನ್ನು ನಿಮ್ಮ ನಿರ್ಧಾರ ಹೇಳಿ...ನೀವು ಹೇಳಿದಂತೆ ನಾವು ಕೇಳುತ್ತೇವೆ... " ಎಂದು ಹೇಳಿ ಅವರು ಹೊರಟರು.... ನಾನು ಹೊರಕ್ಕೆ ಬಂದೆ.. ಬರುವ ಮೊದಲೊಮ್ಮೆ ಮಗುವಿನತ್ತ ನೋಡಿದೆ... ಅದೇ ಪ್ರಶಾಂತ ನಿದ್ರೆ...

ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಶಬ್ಧ... ಕಣ್ಣಲ್ಲಿ ನೀರು ಇಂಗಿತ್ತು.... ಡಾಕ್ಟರ್ ಹೇಳಿದ ಕೊನೆಯ ಮಾತು ಮಾರ್ಧನಿಸುತ್ತಿತ್ತು.... ನನ್ನ ತೀರ್ಮಾನವೇ ಮಗುವಿನ ಹಣೆಬರಹ ನಿರ್ಧರಿಸುತ್ತದೆ ಎಂದಾದರೆ ದೇವರು ಬರೆದ ಹಣೆಬರಹದ ಗತಿ ಏನು..? ಮುಂದೆ ಅಂಗವಿಕಲವಾಗಿ ಬೆಳೆಯುವ ಮಗುವನ್ನು ದಿನಾಲೂ ನೋಡುತ್ತಾ ನೋವು ಅನುಭವಿಸಬೇಕಾ..? ನಾನು ನನ್ನಾಕೆ ಬದುಕಿರುವ ತನಕ ಈ ಮಗುವಿನ ಸೇವೆ ಮಾಡಬಹುದು... ನಮ್ಮ ನಂತರ.....??? ಮಗು ದೈಹಿಕವಾಗಿ ತಾನೂ ನೋವು ತಿನ್ನಬೇಕು, ಮಾನಸಿಕವಾಗಿ ನಮಗೂ ನೋವು ತಿನ್ನಿಸಬೇಕಾ..? ಇಂಥಹ ನರಕ ವೇದನೆಗಿಂತ ಮಗು ಕಣ್ಣು ಬಿಡುವ ಮೊದಲೇ ಅಂತ್ಯ ಕಂಡರೆ...? .. ಮನಸ್ಸು ಹೊಯ್ದಾಟಕ್ಕಿಳಿದಿತ್ತು.... ನನ್ನ ಅಂಶ ಹಂಚಿಕೊಂಡು ಹುಟ್ಟಿದ ಮಗುವನ್ನು ನನ್ನ ತೀರ್ಮಾನವೇ ಕೊಲ್ಲತ್ತಾ...?

ಗಟ್ಟಿ ನಿರ್ಧಾರ ಮಾಡಿ ಒಳ ಹೋದೆ... ಡಾಕ್ಟರ್ ನನ್ನತ್ತ ’ ಏನು ನಿಮ್ಮ ತೀರ್ಮಾನ .?’ ಎನ್ನುವಂತೆ ನೋಡಿದರು... ನನ್ನ ನಾಲಿಗೆ ಪಸೆ ಆರಿತ್ತು... ಆದರೂ ಧೈರ್ಯ ಮಾಡಿ " ಆಕ್ಷಿಜನ್ ಪೂರೈಕೆ ನಿಲ್ಲಿಸಿ ಡಾಕ್ಟರ್ " ಎಂದೆ , ಕಣ್ಣಲ್ಲಿ ನೀರು ನಿಲ್ಲಲಿಲ್ಲ.... ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನಾಕೆಯನ್ನೂ , ಅಪ್ಪ ಅಮ್ಮನನ್ನೂ ಕೇಳಲಿಲ್ಲ... ಅವರಲ್ಲಿ ಕೇಳಿದ್ದರೆ ಖಂಡಿತ ಅವರು ನನ್ನ ನಿರ್ದಾರವನ್ನು ಬೆಂಬಲಿಸುತ್ತಿರಲಿಲ್ಲ... ಕೆಲವೊಮ್ಮೆ ವ್ಯಾವಹಾರಿಕವಾಗಿ ಯೋಚಿಸಬೇಕಾಗುತ್ತದೆ... ಅದು ಜೀವದ ಪ್ರಶ್ನೆಯೇ ಆದರೂ........

ಡಾಕ್ಟರ್ ಮಗುವಿನ ಆಮ್ಲಜನಕದ ಲೆಕ್ಕ ನೋಡುತ್ತಿದ್ದರು.... ೯೫ ಅಂದಿತ್ತು... " ಸರ್, ಇನ್ನು ಎಷ್ಟು ಹೊತ್ತು....." ಅಂತ ಕೇಳಿದೆ... ಅವರಿಗೆ ಅರ್ಥವಾಯಿತು ಅನ್ಸತ್ತೆ.... " ಸಾಮಾನ್ಯವಾಗಿ ಆಮ್ಲಜನಕದ ಪ್ರಮಾಣ ೯೫ ಕ್ಕಿಂತ ಹೆಚ್ಚಿರಬೇಕು.... ಕ್ರಮೇಣ ಇದರ ಪ್ರಮಾಣ ಕಡಿಮೆಯಾಗುತ್ತಾ ಬಂದು ೫೦ ಕ್ಕಿಂತ ಕಡಿಮೆಗೆ ಬರುತ್ತದೆ... ಹೆಚ್ಚೆಂದರೆ ಇನ್ನು ಒಂದು ತಾಸು..." ಎಂದರು ಅವರು... ಆಮ್ಲಜನಕದ ಪೂರೈಕೆ ನಿಲ್ಲಿಸಿದರು..ನಾನು ಒಮ್ಮೆ ಮಗುವನ್ನು ನೋಡಿದೆ, ಕೊನೆಯ ಬಾರಿ ಎಂಬಂತೆ... ಆಮ್ಲಜನಕ ಸಿಗದೇ ಮಗು ಸಣ್ಣಗೆ ನಡುಗಿತು.... ನಾನು ಅವಳಿದೆ ಚುಚ್ಚಿದ್ದ ಕಂಪ್ಯೂಟರ್ ಪರದೆ ನೋಡಿದೆ...
೯೨ ಎಂದಿತ್ತು.....
ಅಲ್ಲೇ ನಿಂತೆ....
ನಾನು ಮಾಡುತ್ತಿದ್ದುದು ಸರೀನಾ... ತಪ್ಪಾ....
ಇನ್ನೊಮ್ಮೆ ನೋಡಿದೆ...
೮೮....
ಮಗು ಕಡೆ ನೋಡಿದೆ...
ಕೈ ಕಾಲು ಆಡಿಸುತ್ತಿತ್ತು....
ಧುಖಃ ಉಮ್ಮಳಿಸುತ್ತಿತ್ತು....
ಆಮ್ಲಜನಕ ಇದ್ದಾಗ ಕೈ ಕಾಲು ಆಡಿಸಿರಲಿಲ್ಲ..ಈಗ ಕಡಿಮೆ ಆದಾಗ ಕೈ ಕಾಲು ಆಡಿಸುತ್ತಿತ್ತು...

ನನಗೆ ಅಲ್ಲಿ ನಿಲ್ಲಲಾಗಲಿಲ್ಲ.... ಅದೇ ಸಮಯಕ್ಕೆ ಡಾಕ್ಟರ್ " ನೀವು ಹೊರಗೆ ಬನ್ನಿ, ಆಮ್ಲಜನಕ ಇಳಿಕೆಯ ಗತಿ ನೋಡಿದರೆ ಹೆಚ್ಚೆಂದರೆ ಒಂದು ತಾಸು.... ಬನ್ನಿ ಹೊರಗೆ ಕುಳಿತುಕೊಳ್ಳಿ... ನಾನು ಆಫಿಸಿಗೆ ಹೋಗಿ ಬರುತ್ತೇನೆ.... ಅಲ್ಲಿಯವರೆಗೆ ಹೊರಗೆ ಕುಳಿತಿರಿ " ಎಂದು ನನ್ನನ್ನು ಹೊರಗೆ ಕರೆದುಕೊಂಡು ಬಂದರು... ನನಗೂ ಅದೇ ಬೇಕಾಗಿತ್ತು.... ಕೊನೆಯ ಸಾರಿ ಮಗುವಿನ ಮುಖ ನೋಡುವ ಮನಸ್ಸಾದರೂ ನೋಡಲಿಲ್ಲ....
 
                                                        ******************
’ಡಾಕ್ಟರ್ ಬಂದರು ’ ಎನ್ನುವ ಮಾತು ಕೇಳಿ ವಾಸ್ತವಕ್ಕೆ ಬಂದೆ... ಅಲ್ಲಿದ್ದ ನವ ಜೋಡಿ ಹೊರಟು ಹೋಗಿತ್ತು.... ಡಾಕ್ಟರ್ ಬರುತ್ತಾ ಇದ್ದರು.... " ಒಳಗೆ ಬರುವ ಧೈರ್ಯ ಇದ್ದರಷ್ಟೇ ಬನ್ನಿ.... ಇಲ್ಲದಿದ್ದರೆ ಬೇಡ... ಮುಂದಿನ ಕಾರ್ಯ ನಾವೇ ಮಾಡುತ್ತೇವೆ.... " ಎಂದರು.... " ಇಲ್ಲ, ನಾನು ಬರುತ್ತೇನೆ.." ಎಂದು ಹೇಳಿ ಅವರ ಹಿಂದೆಯೇ ಹೋದೆ... ಮಗುವಿನತ್ತ ನೋಡುವ ಧೈರ್ಯ ಇರಲಿಲ್ಲವಾದರೂ ನೋಡಿದೆ.... ಮಗು ನಿಷ್ಚಲವಾಗಿತ್ತು.... ಆಮ್ಲಜನಕ ಪೂರೈಕೆ ಇರಲಿಲ್ಲ.... ಕಂಪ್ಯೂಟರ್ ಕಡೆ ನೋಡಿದೆ..... ಆಶ್ಚರ್ಯ....೯೫ ಎಂದಿತ್ತು..... ನಾನು ಡಾಕ್ಟರ್ ಕಡೆ ನೋಡಿದೆ... ಅವರೂ ನನ್ನತ್ತ ನೋಡುತ್ತಿದ್ದರು..... ಅಲ್ಲಿದ್ದ ನರ್ಸ್ ಕರೆದು ಕೇಳಿದರು... " ಸರ್, ಮಗುವಿಗೆ ಆಕ್ಷಿಜನ್ ನಿಲ್ಲಿಸಿದಾಗ ಅದರ ಲೆವೆಲ್ ೯೫ ಇತ್ತು.... ಕ್ರಮೇಣ ಅದು ೭೫ ರ ತನಕ ಬಂತು... ಅದಾದ ನಂತರ ಮಗು ಒಮ್ಮೆ ಸೀನಿತು... ಅದಾದ ನಂತರ ಆಕ್ಷಿಜನ್ ಲೆವೆಲ್ ಮೇಲೇರುತ್ತಾ ಬಂತು.... ನಮ್ಗೂ ಅರ್ಥ ಆಗ್ತಾ ಇಲ್ಲಾ ಸರ್.." ಎಂದರು ಆಕೆ.... ಡಾಕ್ಟರ್ ನನ್ನತ್ತ ತಿರುಗಿ... " ಈ ಮಗುವಿನ ಆಯುಶ್ಯ ನಮ್ಮ ಕೈಲಿ ಇಲ್ಲ ಅಂತ ನಿರೂಪಿಸಿದ ಹಾಗೆ ಆಯಿತು.... ಕ್ಷಣ ಕಾಲ ನಾವು ಮೇಲಿನವನನ್ನು ಮರೆತೆವು.... ನಾವೇ ಹಣೆಬರಹ ತಿದ್ದಲು ಹೊರಟೆವು.... ಆದ್ರೆ ಸೋತೆವು..." ಎಂದರು... ನಾನು ಮಗುವಿನ ಕಡೆ ನೋಡಿದೆ.... ಮಗು ಕಣ್ಣು ತೆರೆದ ಹಾಗಾಯಿತು... ಕಪಾಳಕ್ಕೆ ಹೊಡೆದ ಅನುಭವ....