Jun 11, 2013

ಅಕ್ರಮ-ಸಕ್ರಮ.....

                   
  

    ತಲೆ ಎತ್ತಿ ನೋಡಿದೆ.... ಸರಿಯಾಗಿ ಓದಲಾಗಲಿಲ್ಲ ... ವಯಸ್ಸು ನಿವ್ರತ್ತಿಯ ಅಂಚಿಗೆ ಬಂದಿತ್ತು.... ಕಣ್ಣೂ ಕನ್ನಡಕದ ಸಹಾಯ ಪಡೆದಿತ್ತು... ಕನ್ನಡಕದ ಹಿಂದಿನ ಕಣ್ಣನ್ನು ಇನ್ನೂ ಕಿರಿದು ಮಾಡಿ ನೋಡಿದೆ.... ’ ವಿಶ್ವಾಯುಕ್ತ ಕಛೇರಿ ’ ಎಂದು ದೊಡ್ಡದಾಗಿ ಬರೆದಿತ್ತು... ಒಳಗೆ ಹೋದೆ.. ಯಾರೂ ಬಂದಿರಲಿಲ್ಲ... ಅಲ್ಲೇ ಇದ್ದ ಖಾಲಿ ಖುರ್ಚಿ ಮೇಲೆ ಕುಳಿತೆ... ನಾನೆಂದೂ ಈ ಕಛೇರಿಗೆ , ಈ ಕೆಲಸಕ್ಕಾಗಿ ಬರಬೇಕಾಗಿ ಬರಬಹುದು ಎಣಿಸಿರಲಿಲ್ಲ... ಆದರೂ ಬರಬೇಕಾಗಿ ಬಂತು... ಎಲ್ಲಾ ನನ್ನ ವಿಧಿ... ಕಛೇರಿಯ ಗುಮಾಸ್ತ ಬಂದ ಎನಿಸತ್ತೆ.... ನಾನು ಎದ್ದು ನಿಂತೆ... ಈ ಕಛೇರಿಯಲ್ಲಿ ಕೆಲಸ ಮಾಡುವ ಕತ್ತೆಗೂ ನಾವು ಗೌರವ ಕೊಡಬೇಕು..ಇಲ್ಲದಿದ್ದರೆ ಅವೂ ಒದೆಯುತ್ತವೆ, ಹಿಂದಿನಿಂದ...

  "ಯಾರಿಗೆ ಸಿಗಬೇಕಿತ್ತು...?” ಕೇಳಿದ ಆತ... ನಾನು ಅವರ ಹೆಸರು ಹೇಳಿದೆ... (ನಿಮಗ್ಯಾಕೆ ಬಿಡಿ , ಅವರ ಹೆಸರು..) . " ಅಲ್ಲಿ ಕುಳಿತುಕೊಳ್ಳಿ, ಇನ್ನರ್ಧ ಘಂಟೆಯಲ್ಲಿ ಬರ್ತಾರೆ" ಎಂದ ಆತ.... ನಾನು ಆತ ಹೇಳಿದಲ್ಲಿಯೇ ಹೋಗಿ ಕುಳಿತೆ... ನಾನು ಕುಳಿತೆನಾದರೂ  ಮನಸ್ಸು ಎರಡು ತಿಂಗಳ ಹಿಂದಕ್ಕೆ ಓಡಿತು....  

                                                                                                                             
                    *********************************

      ಇದೊಂದೇ ಕೆಲಸ ಬಾಕಿ ಇತ್ತು... ನಾಳೆಯಿಂದ ಐದು ದಿನ ರಜೆ ಹಾಕಿದ್ದೆ... ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ರಜೆಗೆ ಬರ ಇರಲಿಲ್ಲ... ನಾಡಿದ್ದು ಮಗಳ ನಿಶ್ಚಿತಾರ್ಥ ಇದೆ.. ಎಲ್ಲಾ ರೆಡಿಯಾಗಿತ್ತು.. ಅಂತಿಮ ಹಂತದಲ್ಲಿ ಹೆಂಡತಿಯ ಅಪೇಕ್ಷೆ ಮನೆಯ ಎದುರಿಗೆ ಶಾಮಿಯಾನಾ ಹಾಕುವುದಾಗಿತ್ತು... ಎಲ್ಲದ್ದಕ್ಕೂ ದುಡ್ಡು ಹೊಂದಿಸಿಕೊಂಡಿದ್ದೆ.. ಇದಕ್ಕೆ ಮಾತ್ರ ಸ್ವಲ್ಪ ಹೆಚ್ಚಿಗೆ ದುಡ್ಡು ಬೇಕಾಗಿತ್ತು.. ನಮ್ಮ ಆಫೀಸಿನಲ್ಲಿ ಒಂದೆರಡು ಜನರ ಹತ್ತಿರ ಸಾಲ ಪಡೆದಿದ್ದೆ.. ಆದ್ರೆ, ಮತ್ತೆ ಅವರಲ್ಲಿ ಹಣ ಕೇಳಲು ಮನಸ್ಸು ಬಂದಿರಲಿಲ್ಲ.. ಎರಡೇ ತಿಂಗಳಲ್ಲಿ ನನ್ನ ನಿವ್ರತ್ತಿಯೂ ಇತ್ತು... ಮದುವೆಗೂ ಸಾಲ ಕೇಳಬೇಕಿತ್ತಲ್ಲ.. ಅದಕ್ಕೇ ಮನಸ್ಸು ಹಿಂಜರಿದಿತ್ತು.. ಯಾವುದೇ ಕೆಲಸಕ್ಕೂ ನಾನು ಲಂಚ ಮುಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು.. ನನ್ನ ಮೇಲಧಿಕಾರಿ ಧಾರಾಳವಾಗಿ ಹಣ ತಿನ್ನುತ್ತಿದ್ದರೂ , ನಾನು ಅದನ್ನ ದೂರ ಇಟ್ಟಿದ್ದೆ.. 

   ಇವತ್ತಿನ ಒಂದು ಕೆಲಸ ಬೇಗನೇ ಮಾಡಿ, ಬೇಗ ಮನೆಗೆ ಹೊರಡಲು ತಯಾರಾಗಿದ್ದೆ.. ಕೆಲಸ ಮುಗಿದಿತ್ತು, ಮೇಲಧಿಕಾರಿ ಸಹಿ ಮಾಡಿಸಿ ಇಟ್ಟಿದ್ದೆ. ಆತ ಸಹಿ ಮಾಡುವಾಗ "ಈ ಕೆಲಸ  ಮಾಡಿ ಕೊಟ್ಟಿದ್ದಕ್ಕೆ ಅವರಿಂದ ಏನಾದರೂ  ತೆಗೆದುಕೊಳ್ಳಿ ರಾಯರೆ.. ನಿಮ್ಮ ಮಗಳ ಮದುವೆ ಕೆಲಸಕ್ಕೆ ಸಹಾಯ ಆದೀತು.." ಎಂದರು.. ನಾನು " ಬೇಡ ಸರ್, ಹಣ ಬೇಕಾದರೆ ನಿಮ್ಮನ್ನೇ ಕೇಳುತ್ತೇನೆ" ಎಂದಿದ್ದೆ..... ಅವರಿಗೆ ನನ್ನ ಗುಣ ಗೊತ್ತಿತ್ತು.. ಸುಮ್ಮನೆ ತಲೆಯಾಡಿಸಿದರು.... ನಾನು ಹೊರಗೆ ಬರುತ್ತಾ ಇರುವಾಗ " ಅವರನ್ನು ಹಾಗೆ ಕಳಿಸಬೇಡಿ, ನನ್ನ ಹತ್ತಿರ ಕಳಿಸಿ.... ಸ್ವಲ್ಪ ಮಾತನಾಡಬೇಕು ಅವರಲ್ಲಿ" ಎಂದಿದ್ದರು..... ನನಗೆ ಗೊತ್ತಿತ್ತು , ಅವರ ಹತ್ತಿರ ಮಾತನಾಡಲಿಕ್ಕೆ ಏನಿದೆ ಎನ್ನುವುದು.... ನಾನು ’ ಆಯ್ತು ಸರ್’ ಎಂದಿದ್ದೆ.....

   ಸ್ವಲ್ಪ ಹೊತ್ತಿನಲ್ಲೇ ಆತ ಬಂದಿದ್ದ.... ನನ್ನ ಹತ್ತಿರ ಬಂದು ಫೈಲ್ ಪಡೆದ ಆತ... ನನ್ನ ಕೈಯಲ್ಲಿ ಒಂದು ಕವರ್ ಕೊಟ್ಟ.... ’ ಏನೂ ಬೇಡ’ ಎಂದೆ..... ಆತ " ನನಗೆ ಗೊತ್ತು ಸರ್, ನೀವು ಏನೂ ತೆಗೆದುಕೊಳ್ಳುವುದಿಲ್ಲ ಎಂದು.. ನಿಮ್ಮ ಮಗಳ ಮದುವೆಗೆ ಏನಾದರೂ ಸಹಾಯ ಆಗತ್ತೆ ಸರ್... ಇದು ನಾನು ಪ್ರೀತಿಯಿಂದ ಕೊಡುತ್ತಿರುವುದು... ನೀವು ಹೆದರಿಸಿ ತೆಗೆದುಕೊಳ್ಳುತ್ತಿರುವುದಲ್ಲ..... ಇದು ತಪ್ಪಲ್ಲ ಸರ್...." ಎಂದರು.... ಮನೆಯಲ್ಲಿದ್ದ ಖರ್ಚು ನೆನಪಾಯಿತು...ಇಷ್ಟು ವರ್ಷ ನನ್ನ ನಿಯತ್ತಿನ ಕೆಲಸ, ಇವತ್ತಿನ ತುರ್ತು ಅವಶ್ಯಕತೆಯ ಮುಂದೆ ಗೌಣವಾಯಿತು..... ಕೈಲಿದ್ದ ಕವರ್ ನನ್ನ ಕೈಚೀಲ ಸೇರಿತು..... ಆತ ಖುಶಿಯಿಂದ ನನ್ನ ಮೇಲಧಿಕಾರಿಯನ್ನು ಭೇಟಿಯಾಗಲು ಹೊರಟ.... 

   ನಾನು ನನ್ನ ಕೆಲಸದಲ್ಲಿ ಮುಳುಗಿದೆ.... ಆಫೀಸಿನ ಹೊರಗಡೆ ಗೌಜಿ ಕೇಳಿಸುತ್ತಿತ್ತು..... ಹತ್ತು ಜನ ಒಳಗಡೆ ಬಂದರು... ಸೀದಾ ನನ್ನ ಮೇಲಧಿಕಾರಿಯ ಕೊಠಡಿಗೆ ಹೊಕ್ಕರು... ಅವರಲ್ಲಿ ಇಬ್ಬರು ಹೊರಗೆ ಬಂದು ನನ್ನ ಟೇಬಲ್ ಹುಡುಕುತ್ತಿದ್ದರು.... ನಾನು "ಏನು ಬೇಕು ನಿಮಗೆ, ಯಾರು ನೀವು.." ಕೇಳಿದೆ....  ಅವರು ಕೂಲ್ ಆಗಿ " ವಿಶ್ವಾಯುಕ್ತ  " ಎಂದರು... ಬೆನ್ನ ಹಿಂದೆ ಬೆವರಿಳಿಯುತ್ತಿತ್ತು... ಎಂದೂ ಹಣ ತೆಗೆದುಕೊಳ್ಳದ ನಾನು ಇವತ್ತು ಜಾರಿ ಬಿದ್ದಿದ್ದೆ... ದೇವರನ್ನು ಪ್ರಾರ್ಥಿಸುತ್ತಿದ್ದೆ.... ನನ್ನ ಟೇಬಲ್ ನಲ್ಲಿ ಏನೂ ಸಿಗಲಿಲ್ಲ....ಏನೂ ಇರಲಿಲ್ಲ ಕೂಡ..... ಆತ ನನ್ನ ಪಕ್ಕದ ಟೇಬಲ್ ಕಡೆ ಹೋದ... ನಾನು ಬಚಾವಾದೆ ಎನಿಸಿತು.... 

   ನನ್ನ ಮೇಲಧಿಕಾರಿ ಕೊಠಡಿಗೆ ಹೋದವರು ಹೊರಕ್ಕೆ ಬಂದರು....ನನ್ನ ಮೇಲಧಿಕಾರಿಯನ್ನು ಬಂಧಿಸಿದ್ದರು.... ನನಗೆ ಹಣ ಕೊಟ್ಟವನೇ ದೂರು ನೀಡಿದ್ದನಂತೆ.... ಆತನೂ ಅವರ ಪಕ್ಕದಲ್ಲಿದ್ದ.... ಆತನ ಮುಖದಲ್ಲಿ ನಗು ಇತ್ತು.... ವಿಶ್ವಯುಕ್ತದ ಹಿರಿಯ ಅಧಿಕಾರಿ ಅವರ ಕಿರಿಯ ಅಧಿಕಾರಿಯನ್ನು ಕರೆದು ಕೇಳಿದ.." ಇಲ್ಲೇನಾದರು ಸಿಕ್ಕಿತಾ...?" ಅವರು ’’ಇಲ್ಲಾ ಸಾರ್, ಏನೂ ಇಲ್ಲ’ ಅಂದರು.... ಆತ "ಎಲ್ಲಾ ಬ್ಯಾಗ್ ಗಳನ್ನು ಚೆಕ್ ಮಾಡಿದ್ರಾ..?" ಕೇಳಿದರು ಆತ.... ಅವರ ಕಣ್ಣು ನನ್ನ ಬ್ಯಾಗ್ ಮೇಲೆ ಬಿತ್ತು.... ನನ್ನ ಬ್ಯಾಗನ್ನು ಎಳೆದು ಬಿಚ್ಚಿದರು... ನನ್ನ ಉಸಿರು ಸಿಕ್ಕಿಹಾಕಿಕೊಂಡ ಹಾಗಾಯಿತು... ನನ್ನ ಬ್ಯಾಗಿನಲ್ಲಿ ಇದ್ದ ಕವರ್ ತೆಗೆದು ಅದರಲ್ಲಿದ್ದ ಹಣ ತೆಗೆದರು.... "ಇದು ಯಾರು ಕೊಟ್ಟಿದ್ದು ...?" ಕೇಳಿದರು.... ನನ್ನ ಜೀವ ಬಾಯಿಗೆ ಬಂದಿತ್ತು....."ನನ್ನದೇ ಸರ್... ಮನೆಯಿಂದ ತಂದಿದ್ದು...." ಎಂದೆ... ನಾಲಿಗೆಯ ಪಸೆ ಆರಿತ್ತು... "ಹಣ ಎಷ್ಟಿದೆ ಇದರಲ್ಲಿ..?" ನನ್ನ ಎದೆ ಬಡಿತ ಒಂದು ಕ್ಷಣ ನಿಂತೇ ಬಿಟ್ಟಿತು.... ಆತ ಕೊಟ್ಟ ಕವರನಲ್ಲಿ ಎಷ್ಟಿದೆ ಅಂತ ನೋಡದೆ ತೆಗೆದುಕೊಂಡಿದ್ದೆ... ನನ್ನ ಬಾಯಿ ಹೊರಳಲಿಲ್ಲ...ಏನಂತ ಹೇಳಲಿ.... ಎಷ್ಟಿದೆ ಅಂತ ಹೇಳಲಿ.... ಬಾಯಿ ತೆರೆಯುವವನಿದ್ದೆ... ಅಷ್ಟರಲ್ಲೇ ಆತ ನನಗೆ ಕವರ್ ಕೊಟ್ಟವರಲ್ಲಿ ಕೇಳಿದ "ಇವರಿಗೂ ಕೊಟ್ಟಿದ್ದೀರೇನ್ರಿ..? ಈ ಕವರ್ ನಿಮ್ಮದೇನಾ.....? ನೀವೇ ಕೊಟ್ಟಿದ್ದಾ..?" 

     ನಾನು ಆತನ ಮುಖವನ್ನೇ ನೋಡುತ್ತಿದ್ದೆ... ಮರಣದಂಡಣೆ ಶಿಕ್ಷೆ ಕೊಡುವ ನ್ಯಾಯಾಧೀಶನ ಸ್ಥಾನ ಆತನದಾಗಿತ್ತು ನನ್ನ ಪಾಲಿಗೆ.... ಆತ ಸಾವಧಾನವಾಗಿ ನನ್ನ ಕಡೆ ತಿರುಗಿದ.... "ಇಲ್ಲಾ ಸಾರ್, ನಾನು ಇವರಿಗೆ ಕೊಡಲಿಲ್ಲ.... ಇವರು ತುಂಬಾ ಪ್ರಾಮಾಣಿಕರು ಸಾರ್" ಎಂದ... ನನಗೆ ಹೋದ ಪ್ರಾಣ ವಾಪಸ್ ಬಂದ ಅನುಭವ... ಆತನೆಡೆಗೆ ಭಕ್ತಿ ಭಾವದಿಂದ ನೋಡಿದೆ.... ಆತ ನನ್ನ ಪಾಲಿಗೆ ದೇವರಾಗಿ ಬಿಟ್ಟಿದ್ದ... ಅಷ್ಟರಲ್ಲೇ ವಿಶ್ವಾಯುಕ್ತ ಹಿರಿಯ ಅಧಿಕಾರಿ ” ಅವರು ಪ್ರಾಮಾಣಿಕರೋ  ಅಲ್ಲವೋ ಅಂದ ನಿರ್ಧಾರ ಮಾಡಬೇಕಾದವರು ನಾವು....ನೀವಲ್ಲ.... ಬನ್ನಿ ಇಲ್ಲಿ.... ಇದನ್ನೂ ಸೀಝ್ ಮಾಡಿ" ಎಂದವರೇ ಆ ಕವರ್ ನ್ನು ತಮ್ಮ ಕಿರಿಯ ಅಧಿಕಾರಿಗೆ ಹಸ್ತಾಂತರಿಸಿದರು..... ನನ್ನ ಪರಿಸ್ಥಿತಿ ಯಾರಿಗೂ ಬೇಡವಾಗಿತ್ತು... ಅಧಿಕಾರಿಗಳು ಮಹಜರ್ ಬರೆದು "ನಮ್ಮ ಆಫೀಸಿಗೆ ಬಂದು ಹೋಗಿ, ಮುಂದಿನ ಕೆಲಸಗಳು ಬೇಗನೇ ಮುಗಿಸಬೇಕು" ಎಂದು ಹೇಳುತ್ತಲೇ ಹೊರಟರು... ನಾನು ಅವರ ಹಿಂದೆಯೇ ಓಡಿದೆ.... ಅವರ ಜೀಪ್ ಧೂಳೆಬ್ಬಿಸುತ್ತಾ ಹೊರಟೇ ಹೋಯಿತು.... 
                                                                                                                     
        ಮಾರನೇ ದಿನ ಬೆಳಿಗ್ಗೆಯೆ ವಿಶ್ವಾಯುಕ್ತ ಆಫೀಸಿಗೆ ಹೋದೆ... ಇನ್ನೂ ಯಾರೂ ಬಂದಿರಲಿಲ್ಲ... ಅಲ್ಲೇ ಇದ್ದ ಖಾಲಿ ಖುರ್ಚಿ ಮೇಲೆ ಕುಳಿತೆ... ನಮ್ಮ ಆಫೀಸಿನ ಮೇಲೆ ದಾಳಿ ಮಾಡಿದ ಅಧಿಕಾರಿ ಬರುತ್ತಿದ್ದ.. ನಾನು ಅವನತ್ತಲೇ ಓಡಿದೆ.... ಆತ ನನ್ನನ್ನು ನೋಡಿ ನಕ್ಕ... ಅವಮಾನ ಎನ್ನಿಸಿತು.. ನಿವ್ರತ್ತಿಗೆ ಎರಡು ತಿಂಗಳಿರುವಾಗ ಪುಡಿಗಾಸಿಗೆ ಆಶೆಪಟ್ಟು , ಸಿಕ್ಕಿಬಿದ್ದು, ಇಲ್ಲಿಗೆ ಬರುವ ದರ್ದು ಇತ್ತಾ ಎನಿಸಿತು.... ಅದಕ್ಕೆಲ್ಲಾ ಯೋಚಿಸುವ ಹೊತ್ತು ಇದಲ್ಲ ಎನಿಸಿ ಆತನ ಹಿಂದೆಯೇ ಹೋದೆ... ಆತ ತನ್ನ ರೂಮಿಗೆ ಹೋದ , ನನಗೂ ಒಳಗೆ ಬರಲು ಸನ್ನೆ ಮಾಡಿದ... ನಾನು ಅವರ ಎದುರಿಗೆ ಕುಳಿತೆ...

    "ಏನು ನಿಮ್ಮ ಕಥೆ ಹೇಳಿ... ಸರಕಾರ ನಿಮಗೆ ಸಂಬಳ ಕೊಡತ್ತಲ್ವಾ..? ಆದ್ರೂ ಯಾಕೆ ಎಂಜಲು ಕಾಸಿಗೆ ಕೈಯೊಡ್ಡುತ್ತೀರಾ...? ಈಗ ಜೈಲಿಗೆ ಹೋಗಬೇಕಾಗಿ ಬಂದಾಗ ಕಾಲು ಹಿಡಿಲಿಕ್ಕೆ ಬರ್ತೀರಾ.."  ನನಗೆ ಇವರ ಮೇಲೆ ನಂಬಿಕೆ ಬಂತು.. ನನ್ನ ನಿಜ ಕಥೆ ಇವರಿಗೆ ಹೇಳಿಕೊಂಡರೆ ನನಗೆ ಸಹಾಯ ಮಾಡಬಹುದು ಎನಿಸಿತು... ನನ್ನ ಎಲ್ಲಾ ಕಥೆಯನ್ನೂ, ಎಲ್ಲೂ ತಪ್ಪದೇ ಹೇಳಿದೆ... ಆತ ಜೋರಾಗಿ ನಗಾಡಿದ.... ನನಗೆ ಪಿಚ್ಚೆನಿಸಿತು.... ಈತ ನನ್ನನ್ನು ನಂಬಿದರಾ ಅಥವಾ ನನ್ನ ಪರಿಸ್ಥಿತಿ ನೋಡಿ ನಗುತ್ತಿದ್ದಾರಾ ಎಂದು ತಿಳಿಯಲಿಲ್ಲ... 

  "ನೀವೇನ್ ಕಾಗಕ್ಕ ಗೂಬಕ್ಕನ ಕಥೆ ಹೇಳ್ತಾ ಇದೀರಾ ನಂಗೆ... ನಾನಿದನ್ನ ನಂಬಬೇಕಾ..? ನಿಮ್ಮ ಇಲಾಖೆಯಲ್ಲಿ ನಡೆಯುವಷ್ಟು ಭ್ರಷ್ಟಾಚಾರ ಇನ್ನೆಲ್ಲೂ ನಡೆಯಲ್ಲ.. ನೀವೆಲ್ಲಾ ಮನೆ ಮೇಲೆ ಮನೆ ಕಟ್ಟಿಸಿರ್ತೀರಾ ಅಲ್ವಾ...? ನಾವು ನಿಮ್ಮನ್ನು ಹಿಡಿದಾಗ ಸತ್ಯ ಹರಿಶ್ಚಂದ್ರನ ಪೋಸು ಕೊಡ್ತೀರಾ..ನಿಮ್ಮಂಥವರನ್ನು ಎಷ್ಟೋ ಜನರನ್ನ ನೋಡಿದ್ದೀನಿ ನಾನು...." ಕೂಗಲಿಕ್ಕೆ ಶುರು ಮಾಡಿದ ಆತ... ನನಗೆ ಅಳುವೇ ಬಂದಿತ್ತು... " ಸಾರ್ ನನ್ನ ನಿವ್ರತ್ತಿಗೆ ಇನ್ನು ಎರಡೇ ತಿಂಗಳಿದೆ... ಈಗ ಈ ಕೇಸಿನಲ್ಲಿ ಸಿಕ್ಕಿದರೆ ನನ್ನ ಪಿಂಚಣಿಗೆ , ಭವಿಷ್ಯನಿಧಿಗೆ ಎಲ್ಲದಕ್ಕೂ ತೊಂದರೆಯಾಗತ್ತೆ.. ದಯವಿಟ್ಟು ಯಾರನ್ನಾದರೂ ವಿಚಾರಿಸಿ ನನ್ನ ಬಗ್ಗೆ... ಅದರಲ್ಲೂ ನನ್ನ ಬಗ್ಗೆ ಯಾರೂ ನಿಮಗೆ ದೂರೇ ಕೊಟ್ಟಿಲ್ಲ.. ಆದರೂ ನನ್ನನ್ನ ಈ ಕೇಸಿನಲ್ಲಿ ಸಿಕ್ಕಿಸಿದ್ದೀರಾ ಸರ್..." ಬೇಡುವ ದನಿಯಲ್ಲಿ ಹೇಳಿದೆ.... 

   ಆತ  ಖುರ್ಚಿ ಮುಂದೆ ತಂದ... ನನ್ನಲ್ಲೇನೋ ಆಸೆ ಹುಟ್ಟಿತು... ಆತ ಸಣ್ಣ ದನಿಯಲ್ಲಿ " ನಿಮ್ಮನ್ನು ಈ ಕೇಸಿನಲ್ಲಿ ಬಿಡುತ್ತೇನೆ, ನನಗೆ ಒಂದು ಲಕ್ಷ ಕೊಡಿ" ಪಕ್ಕದಲ್ಲಿ ಬಾಂಬ್ ಬಿದ್ದ ಹಾಗಾಯಿತು... ಯಾರನ್ನು ನಾವು ನ್ಯಾಯ, ಸತ್ಯ ಕಾಪಾಡುತ್ತಾರೆ ಎಂದು ನಂಬಿದ್ದೇವೆಯೋ , ಅವರೇ ಹಣಕ್ಕಾಗಿ ಸತ್ಯವನ್ನು, ನ್ಯಾಯವನ್ನು ಮಾರುತ್ತಾರೆ ಎಂದೆಣಿಸಿದಾಗ ಆದ ಆಘಾತ ನನಗಾಗಿತ್ತು... ನನಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯ್ತು... " ಏನ್ ಹೇಳ್ತಾ ಇದೀರಾ ಸರ್, ನನ್ನದಲ್ಲದ ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲು ನಾನು ನಿಮಗೆ ಹಣ ಕೊಡಬೇಕಾ..? ನನ್ನ ಮಗಳ ಮದುವೆ ಇದೆ ಮುಂದಿನ ತಿಂಗಳು.. ನಿಮಗೆ ನನ್ನ ಕೈ ಚೀಲದಲ್ಲಿ ಸಿಕ್ಕ ಹಣ ನೀವೇ ತೆಗೆದುಕೊಂಡು ಬಿಡಿ.. ಎಷ್ಟಿದೆಯೆಂದೂ ನೋಡಲಿಲ್ಲ ನಾನು... ನೀವು ಹೇಳಿದ್ದಷ್ಟು ಕೊಡಲು ನನ್ನಲ್ಲಿಲ್ಲ ... ಸ್ವಲ್ಪ ಹೊತ್ತು ಮೊದಲು ನನಗೆ ಬೋಧನೆ ಮಾಡಿದ ತಾವು ಈಗ ಅದರ ವಿರುದ್ಧ ಮಾತನಾಡುತ್ತಾ ಇದ್ದೀರಲ್ಲ ಸರ್..? " ಎಂದೆ ಮೆತ್ತಗೆ...

   ಆತ " ಒಳ್ಳೆತನ ಇರೋದು ಬೋಧನೆ ಮಾಡೊದಕ್ಕೆ ಮಾತ್ರ... ನೀವು ಮಾತ್ರ ನಿಮ್ಮ ಇಲಾಖೆಯಲ್ಲಿ ಬರ್ಜರಿಯಾಗಿ ಕುಳಿತು ಬಿರಿಯಾನಿ ತಿನ್ನಿ... ನಾವು ಮಾತ್ರ ಇಲ್ಲೇ ಇದ್ದು ಕೊಡುವ ಸಂಬಳದಲ್ಲಿ ಗಟ್ಟಿ ರೊಟ್ಟಿ ತಿನ್ನಿ ಅನ್ನುತ್ತೀರಾ... ನಾವು ಸನ್ಯಾಸಿಗಳಲ್ಲ... ನಮಗೂ ಆಶೆಗಳಿರುತ್ತವೆ... ನಾನು ಹೇಳಿದ ಪ್ರಕಾರ ನೀವು ಕೊಟ್ಟರೆ ನಿಮ್ಮ ಹೆಸರನ್ನು ಈ ಕೇಸಿನಿಂದ ಬಿಡುತ್ತೇನೆ... ಇಲ್ಲದಿದ್ದರೆ ನಿಮಗೆ ಬಿಟ್ಟಿದ್ದು" ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು... ನನಗೇನೂ ತೋಚಲಿಲ್ಲ... " ಯೋಚಿಸಿ ಬರುತ್ತೇನೆ ಸರ್" ಎಂದು ಹೇಳಿ ಹೊರಬಿದ್ದೆ.. 

    ಯೋಚಿಸಿ ಬರುತ್ತೇನೆ ಅಂತೇನೋ ಹೇಳಿದ್ದೆ ಆದರೆ ಅವರಿಗೆ ಕೊಡಲು ಹಣವಾಗಲೀ, ಅವರ ವಿರುದ್ದ ದೂರು ಕೊಡಲು ಅವರ ಮೇಲಧಿಕಾರಿಯ ಹುದ್ದೆ ಖಾಲಿ ಇತ್ತು.... ಈ ಪ್ರಕರಣ ನಡೆದು ಎರಡೇ ದಿನದಲ್ಲಿ ನನ್ನ ಮಗಳ ನಿಷ್ಚಿತಾರ್ಥ ಇದ್ದುದರಿಂದ ನನಗೆ ಮತ್ತೆ ಆ ಅಧಿಕಾರಿಯನ್ನು ಭೇಟಿ ಆಗಲು ಅವಕಾಶ ಸಿಗಲಿಲ್ಲ... ಆದರೆ.... ಮಾರನೇ ದಿನ ನನಗೆ ಖುಶಿ ಕೊಡುವ ಸುದ್ದಿ ಸಿಕ್ಕಿತು... 

    ನನ್ನಿಂದ ಹಣ ಕೇಳಿದ ಅಧಿಕಾರಿಯ ಮೇಲಧಿಕಾರಿ ನಿಯುಕ್ತಿ ಆಗಿತ್ತು ಮತ್ತೆ ಅದೇ ದಿನ ನನ್ನ ಹತ್ತಿರ ಹಣ ಕೇಳಿದ ಅಧಿಕಾರಿಯ ಮೇಲೆ ದಾಳಿ ನಡೆದಿತ್ತು... ಅವರ ವಿರುದ್ದ ಇದೇ ರೀತಿಯ ತುಂಬಾ ದೂರುಗಳು ಇದ್ದವಂತೆ.... ನಾನೂ ಸಹ ಈ ಕೇಸಿನ ಮೇಲೆ ಆಸೆಯನ್ನೇ ಬಿಟ್ಟಿದ್ದೆ... ಎಂದಾದರೂ ಸತ್ಯ ಗೆದ್ದೇ ಗೆಲ್ಲತ್ತೆ ಎನ್ನುವ ವಿಶ್ವಾಸದ ಜೊತೆ ಹೋರಾಡುವ ಶಕ್ತಿಯೂ ಕುಂದಿತ್ತು ಎನ್ನಿ... ಆ ಅಧಿಕಾರಿಯ ಮೇಲೆ ದಾಳಿ ನಡೆದ ಮರುದಿನವೇ ನಾನು ವಿಶ್ವಾಯುಕ್ತ ಕಚೇರಿಯ ಬಾಗಿಲಿಗೆ ಬಂದಿದ್ದೆ... ಮೇಲಧಿಕಾರಿಗಾಗಿ ಕಾದು ಕುಳಿತಿದ್ದೆ....
                             
                       **************************

     ಬೂಟಿನ ’ಟಕ್ ಟಕ್’ ಸದ್ದು ನನ್ನನ್ನು ವಾಸ್ತವಕ್ಕೆ ಕರೆ ತಂದಿತ್ತು...  ಬರುತ್ತಿದ್ದ 
ವ್ಯಕ್ತಿಯನ್ನು ಪೇಪರ್ ನಲ್ಲಿ ಮತ್ತು ಟಿ.ವಿ ಯಲ್ಲಿ ನೋಡಿದ್ದೆ.. ಆವರೇ ವಿಶ್ವಯುಕ್ತದ
ಮೇಲಧಿಕಾರಿಯಾಗಿದ್ದರು... ಅವರು ಕಚೇರಿಯ ಕೋಣೆಯನ್ನು ಹೊಕ್ಕೊಡನೆಯೇ ನಾನು ಅವರ ಸಹಾಯಕನಿಗೆ ಹೇಳಿ ಒಳ ಹೋದೆ... ನನ್ನನ್ನು ನೋಡಿ ಅವರು ಕುಳಿತುಕೊಳ್ಳಲು ಹೇಳಿದರು... ನಾನು ಕುಳಿತುಕೊಂಡೆ... ನನ್ನೆಲ್ಲ ಕಥೆ ಹೇಳಿದೆ... ಅವರಿಗೆ ನನ್ನ ಮೇಲೆ ನಂಬಿಕೆ ಬಂತು ಅನಿಸತ್ತೆ... ಅವರ ಸಹಾಯಕನಿಗೆ ನನ್ನ ವಿರುದ್ದದ ಕಡತ ತರಲು ಹೇಳಿದರು... ಅದನ್ನ ಬಿಚ್ಚಿ ಓದಿದರು.. " ರಾಯರೇ, ನಿಮ್ಮ ವಿರುದ್ಧ ಆಗಲೇ ಎಫ್. ಐ. ಆರ್. ಫೈಲ್ ಆಗಿದೆ... ಈಗ ಏನೂ ಮಾಡುವ ಹಾಗಿಲ್ಲ...ನೀವು ಕೋರ್ಟ್ ಗೆ ಹೋಗಿ  " ಎಂದರು ಅವರು... ನನಗೆ ಏನೂ ಹೇಳಲು ತೋಚಲಿಲ್ಲ... ಆದರೂ ಧೈರ್ಯ ಮಾಡಿ ಹೇಳಿದೆ...

   " ಸರ್, ಅವರು ಮಾಡಿದ್ದು ಸುಳ್ಳು ಕೇಸ್ ಮತ್ತು ಅದನ್ನು ಮಾಡಿದ್ದು ಸಹ ಸರಿಯಾದ ವ್ಯಕ್ತಿ ಅಲ್ಲ.... ಆತ ತನ್ನ ಲಾಭ ನೋಡಿಕೊಂಡು ದೂರು ದಾಖಲಿಸುತ್ತಿದ್ದ.. ಅವರಿಗೆ ಹಣ ಕೊಟ್ಟಿದ್ದಿದ್ದರೆ ನನ್ನ ವಿರುದ್ದದ ದೂರನ್ನು ಬಿಡುತ್ತಿದ್ದ.. ಆತನೇ ಸರಿ ಇರದಿದ್ದ ಮೇಲೆ ಆತನ ಕೇಸ್ ಹೇಗೆ ಸಾಚಾ ಆಗಿರತ್ತೆ ಸರ್..?” ಎಂದೆ ನಿಧಾನವಾಗಿ... ಅವರಿಗೂ ಮುಜುಗರವಾಯಿತು ಅನಿಸತ್ತೆ... ಅವರು ಹೇಳಿದ ಮಾತು ನಮ್ಮ ವ್ಯವಸ್ಥೆಯ ಮುಖಕ್ಕೆ ಹೊಡೆದಂತಿತ್ತು.. " ಇಲ್ಲಿ ದಾಖಲಾಗುವ ಕೇಸು, ವಿಧಾನಸಭೆಯಲ್ಲಿ ರಚಿಸಲ್ಪಡುವ ಕಾನೂನು ಎಷ್ಟೇ ಅಕ್ರಮ ಮಾಡಿದ ವ್ಯಕ್ತಿಯಿಂದಲೇ ಆಗಿರಬಹುದು.... ಅದು ಸಕ್ರಮವೇ ಆಗಿರತ್ತೆ.... "

ನಾನು ತಲೆ ತಗ್ಗಿಸಿದೆ.... ನನ್ನ ದುರದ್ರಷ್ಟಕ್ಕೊ... ಮಾಡಿದ ತಪ್ಪಿಗೋ.... ತಿಳಿಯಲಿಲ್ಲ...  


(ಇದು ಕಲ್ಪನೆ ಅಷ್ಟೆ...)