Aug 15, 2012

ವಾಸ್ತವ........



ವೇದಿಕೆಯನ್ನು ಬಹಳ ಸುಂದರವಾಗಿ ಸಿಂಗರಿಸಿದ್ದೆ..... ನಾನೇ ಕಾಲೇಜಿನ ವಿಧ್ಯಾರ್ಥಿ ಮುಖ್ಯ ಕಾರ್ಯದರ್ಶಿಯಾಗಿದ್ದರಿಂದ ತುಂಬಾ ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದೆ...... ಇದೇ ನನ್ನ ಅಂತಿಮ ವರ್ಷದ ಎಮ್. ಬಿ.ಬಿ.ಎಸ್. ಆದುದರಿಂದಲೂ ಇರಬಹುದು...... ಒಬ್ಬರು ವಿಶೇಷ ವ್ಯಕ್ತಿಗೆ ಸನ್ಮಾನ ಇದೆಯೆಂದು ತಿಳಿದಿತ್ತು......ಆದರೆ ಆವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ... 

ಸರಿಯಾಗಿ ಹತ್ತಕ್ಕೇ ಕಾರ್ಯಕ್ರಮ ಶುರು ಆಗುವುದಿತ್ತು....... ಎಲ್ಲಾ ಗಣ್ಯರೂ ವೇದಿಕೆ ಮೇಲೆ ಇದ್ದರು..... ನಮ್ಮ ಕಾಲೇಜಿನ ಪ್ರಿನ್ಸಿಪಾಲ್, ನಮ್ಮ ಊರಿನ  ಎಂ. ಎಲ್. ಎ, ಯುವ ವೇದಿಕೆಯ ಅಧ್ಯಕ್ಷರು, ನಮ್ಮೂರ ಹಿರಿಯರೂ ಆದ ಸ್ವಾತಂತ್ರ್ಯ ಹೋರಾಟಗಾರರು, ಅವರ ಪಕ್ಕದಲ್ಲಿ ಒಬ್ಬರು ಮಹಿಳೆ ಕುಳಿತಿದ್ದರು..... ತಲೆ ಮೇಲೆ ಸೆರಗು ಎಳೆದಿದ್ದರು.... ಕಿವಿಯಲ್ಲಿ ದೊಡ್ಡ ಜುಮುಕಿ ಇತ್ತು..... ಗಮನಿಸಿದಾಗ ಅವರು ಒಬ್ಬರು ಮುಸ್ಲಿಂ ಮಹಿಳೆ ಎಂದು ತಿಳಿದು ಬರುತ್ತಿತ್ತು..... ಅವರು ಯಾರು ನನಗೆ ತಿಳಿದಿರಲಿಲ್ಲ......  ನನ್ನ ಕೆಲಸ ವೇದಿಕೆ ವ್ಯವಸ್ಥೆಗೆ ಸೀಮಿತವಾಗಿದ್ದರಿಂದ ನಾನು ಎದುರಿನ ಸಾಲಲ್ಲೇ ಕುಳಿತಿದ್ದೆ...... ನಮ್ಮ ಪ್ರಿನ್ಸಿಪಾಲರು ಪ್ರಾಸ್ಥಾವಿಕ ಭಾಷಣ ಮಾಡಿ, ಬಂದ ಗಣ್ಯರನ್ನು ಸ್ವಾಗತಿಸಿದರು.....  ವೇದಿಕೆ ಮೇಲಿದ್ದ ಮಹಿಳೆ ಹೆಸರು ಅಲೀಮಾ ಎಂದು ಆಗಲೇ ತಿಳಿಯಿತು...... ಆದರೆ ಅವರನ್ನು ವೇದಿಕೆ ಮೇಲೆ ಯಾಕೆ ಕುಳ್ಳಿರಿಸಿದ್ದಾರೆ ಎಂದು ತಿಳಿಯಲಿಲ್ಲ..... ನಂತರ ಮಾತಾಡಿದ ನಮ್ಮೂರ ಎಮ್.ಎಲ್.ಎ ಸಾಹೇಬರು, ’ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಹೇಳಿದರು..... " ಇಲ್ಲಿ ಕುಳಿತ ಮಹಿಳೆಗೆ ಎಲ್ಲರೂ ಎದ್ದು ನಿಂತು ಗೌರವಿಸಿ...... ಈ ಮಹಿಳೆ ಮಾಡಿದ ಹೋರಾಟ, ಯಾವ ಸ್ವಾತಂತ್ರ್ಯ ಹೋರಾಟಕ್ಕೂ ಕಮ್ಮಿ ಇಲ್ಲ...... ಈ ಮಹಿಳೆಯಿಂದಾಗಿ ಎಷ್ಟೋ ಜನರ ಪ್ರಾಣ ಉಳಿಯಿತು....... ತನ್ನ ಪ್ರಾಣದ ಬಗ್ಗೆ ಚಿಂತೆ ಮಾಡದೇ ಪರರ ಬಗ್ಗೆ ಯೋಚಿಸಿದ ಈ ಹೋರಾಟಗಾರ್ತಿಗೆ ಸಲ್ಲುವ ಎಲ್ಲಾ ಗೌರವಕ್ಕಾಗಿ ನಾನು ಸರಕಾರಕ್ಕೆ ಕೇಳಿಕೊಳ್ಳುತ್ತೇನೆ...... ನಾನು ಇವರಿಗೆ ಸನ್ಮಾನ ಮಾಡುವುದು ನನ್ನ ಪೂರ್ವಜನ್ಮದ ಪುಣ್ಯ...." ಎಂದರು...... ಹಣ್ಣು ಹಂಪಲ ಕೊಟ್ಟು ಶಾಲು ಹೊದೆಸಿ ಸನ್ಮಾನ ಮಾಡಿದರು............ನನಗೆ ಈಕೆಯ ಬಗ್ಗೆ ಇನ್ನೂ ಕುತೂಹಲ ಹೆಚ್ಚಿತು......

                  
ನಂತರ ಎದ್ದು ನಿಂತವರು ಆ ಮುಸ್ಲಿಂ ಮಹಿಳೆ.... ಸುಮಾರು ಮುವತ್ತೈದು ವರ್ಷವಿರಬಹುದು ಆಕೆಗೆ.......  ನನಗೆ ಆಕೆಯ ಬಗ್ಗೆ ಎನೂ ತಿಳಿದಿರಲಿಲ್ಲ...... ಇಡೀ ಸಭಾಂಗಣ ನಿಶ್ಯಬ್ಧವಾಗಿತ್ತು........ " ನಮಸ್ಕಾರ, ನನ್ನ ಹೆಸರು ಅಲೀಮಾ..... ನನಗೆ ಈ ವೇದಿಕೆಯ ಮೇಲೆ ಕುಳಿತುಕೊಳ್ಳಲು ಅರ್ಹತೆ ಇದೆಯೋ ಇಲ್ಲವೋ ತಿಳಿದಿಲ್ಲ.... ನಿಮ್ಮ ಪ್ರಿನ್ಸಿಪಾಲರು ಒತ್ತಾಯ ಮಾಡಿ ನನ್ನನ್ನು ಇಲ್ಲಿಗೆ ಕರೆಸಿದ್ದಾರೆ..... ನನ್ನ ಕಥೆಯನ್ನು ಹೇಳಲು ಕೇಳಿಕೊಂಡಿದ್ದಾರೆ..... ನಿಮಗೆಲ್ಲಾ ಬೋರ್ ಹೊಡೆಸದೇ ಬೇಗನೇ ಮುಗಿಸುತ್ತೇನೆ....
ನನ್ನದು ತುಂಬಾ ಸಾಮಾನ್ಯ ಕುಟುಂಬವಾಗಿತ್ತು..... ಅಪ್ಪ ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿದ್ದೆ..... ಆತ ಖಾಸಗಿ ಬಸ್ ಚಾಲಕನಾಗಿದ್ದ...... ಆತ ತರುವ ತಿಂಗಳ ಸಂಬಳವನ್ನೇ ನಂಬಿತ್ತು ನಮ್ಮ ಕುಟುಂಬ.... ನಾನು ಪಿ.ಯು.ಸಿ ಓದಿದ್ದೆನಾದ್ದರಿಂದ ಪಕ್ಕದಲ್ಲಿದ್ದ ಮಸೀದಿಗೆ ಹೋಗಿ ಬಡ ಮಕ್ಕಳಿಗೆ ಪಾಠ ಮಾಡುತ್ತಿದ್ದೆ...ಅದರಿಂದ ನನಗೆ ತಿಂಗಳಿಗೆ ಮುನ್ನೂರು ರುಪಾಯಿ ಸಿಗುತ್ತಿತ್ತು...... ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಿಲ್ಲದ ಕೊರಗೊಂದನ್ನು ಬಿಟ್ಟರೆ.... ಹಣವಿಲ್ಲದಿದ್ದರೂ ನೆಮ್ಮದಿಯಿಂದ ಇದ್ದೆವು...... ಅತ್ತೆ ಮಾವ ನನ್ನ ಗಂಡನಿಗೆ ಬೇರೆ ಮದುವೆ ಮಾಡಿಸಲು ಪ್ರಯತ್ನ ಪಟ್ಟರಾದರೂ ನನ್ನವರು ಅದನ್ನು ಒಪ್ಪಿರಲಿಲ್ಲ..... ನನ್ನ ಅಪ್ಪ ಅಮ್ಮ ಮುಂಬೈ ನ ಹಾಜಿ ಅಲಿ ದರ್ಗಾ ಕ್ಕೆ ಹೋಗಿ ಚಾದರ್ ಹೊದೆಸಿ ಬಂದರೆ ಮಕ್ಕಳಾಗುತ್ತದೆ ಎಂದಿದ್ದರು.... ನಾನು ಹೊರಡಲು ತಯಾರಿದ್ದೆ..... ಆದ್ರೆ ನನ್ನ ಗಂಡ ಮಾತ್ರ ನಮಾಜ್ ಮಾಡುವಾಗ " ನನಗೆ ಮಕ್ಕಳಾದರೆ ಮಾತ್ರ ಹಾಜಿ ಅಲಿಗೆ ಬಂದು ಚಾದರ್ ಹೊದೆಸುತ್ತೇನೆ" ಎಂದು ಹರಸಿಕೊಂಡರು....... ಯಾವ ದೇವರ ಹರಕೆಯ ಫಲವೋ.... ಮರುವರ್ಷವೇ ಮುದ್ದಾದ ಹೆಣ್ಣುಮಗುವಿಗೆ ತಾಯಿಯಾಗಿದ್ದೆ........ ಮಗುವಿಗೆ ಒಂದು ವರ್ಷವಾಗುತ್ತಲೇ , ಹಾಜಿ ಅಲಿಗೆ ಹೋಗಿ ಬರುವ ನಿರ್ಧಾರ ಮಾಡಿದೆವು.....


ನನಗಿನ್ನೂ ನೆನಪಿದೆ.... ರೈಲಿನಲ್ಲಿ ಒಂದು ರಾತ್ರಿ ಕುಳಿತು ಬೆಳ್ಳ್ಂ ಬೆಳಿಗ್ಗೆ ಮುಂಬೈ ತಲುಪಿದ್ದೆವು...  ರೈಲಿನಿಂದ ಇಳಿದು ಸೀದಾ "ಸುಲ್ತಾನ್ ಚಾದರ್ " ಅಂಗಡಿಗೆ ಹೋದೆವು....... ಅಲ್ಲಿ ಸುಂದರವಾದ ದರ್ಗಾಕ್ಕೆ ಕೊಡುವ ಚಾದರ್ ಸಿಗುತ್ತವೆ ಎಂದು ಕೇಳಿದ್ದೆ..... ಸಾವಿರ ರುಪಾಯಿ ಕೊಟ್ಟು ಚಾದರ್ ಕೊಂಡೆವು....... ಪುನ್ಃ ಇನ್ನೊಂದು ರೈಲು ಹಿಡಿಯಬೇಕಿತ್ತು....... ಮುಂಬೈ ನ ಚತ್ರಪತಿ ರೈಲು ನಿಲ್ದಾಣ ದಲ್ಲಿ ಕುಳಿತೆವು....... ನಿಲ್ದಾಣ ಗಿಜಿ ಗಿಜಿಗೊಡುತ್ತಿತ್ತು....... ಎಲ್ಲಿ ನೋಡಿದರಲ್ಲಿ ಜನ...... ಜನ ಓಡುತ್ತಿದ್ದಾರೋ.....ನಡೆಯುತ್ತಿದ್ದಾರೋ ತಿಳಿಯುತ್ತಿರಲಿಲ್ಲ....... ನಾನು , ನನ್ನ ಗಂಡ, ಮಗಳು ಒಂದು ಕಂಬದ ಪಕ್ಕ ಕುಳಿತೆವು....... ನನ್ನವರು ಹಾಜಿ ಅಲಿಗೆ ಹೋಗಲು ಯಾವ ರೈಲು ಮತ್ತೆ ಹೊರಡುವ ವೇಳೆ ಕೇಳಿ ಬರುತ್ತೇನೆ ಎಂದು ಹೊರಟರು........ ಹೋಗಿ ಸ್ವಲ್ಪ ಹೊತ್ತಿನಲ್ಲೇ ಓಡುತ್ತಾ ಬಂದರು....... ನನ್ನನ್ನೆಬ್ಬಿಸುತ್ತಾ ಮಗುವನ್ನು ಎತ್ತಿಕೊಂಡರು......ನಾನು " ಯಾಕೆ ....ಏನಾಯ್ತು.... ಎಷ್ಟು ಹೊತ್ತಿಗೆ ರೈಲು.. " ಎಂದೆ......ಅವರು ಕೂಗುತ್ತಿದ್ದರು.." ಓಡು ಇಲ್ಲಿಂದ.... ಓಡು.... ಯಾರೋ ಭಯೋತ್ಪಾದಕರು ಗುಂಡು ಹಾರಿಸುತ್ತಿದ್ದಾರಂತೆ......  ಪಾಕಿಸ್ಥಾನದವರಂತೆ........ ತುಂಬಾ ಜನರನ್ನು ಸಾಯಿಸಿದ್ದಾರೆ.......  ನಾನು ತಪ್ಪಿಸಿಕೊಂಡು ಬಂದೆ....ನಡೆ....ಓಡು......ಅಲ್ಲಿ ಕುಳಿತುಕೊಳ್ಳೋಣಾ......." ನನಗೆ ತೋಚದಾಗಿತ್ತು....... ಮಗುವನ್ನು ಅವರೇ ಎತ್ತಿಕೊಂಡಿದ್ದರು...... ನಾವು ಓಡುತ್ತಾ ಒಂದು ಕಂಬದ ಹಿಂದೆ ನಿಂತೆವು....ಗುಂಡಿನ ಸದ್ದು ಹತ್ತಿರವಾಗುತ್ತಿತ್ತು....... ಜನರ ಕೂಗಾಟವೂ ಮೇರೆ ಮೀರಿತ್ತು...... ನನ್ನ ಗಂಡ ಮಗುವನ್ನು ನನ್ನ ಕೈಗಿತ್ತರು........ ನನ್ನನ್ನು ಬಿಗಿದಪ್ಪಿ ಹಿಡಿದರು....... ನಾನು ಕಣ್ಣು ಮುಚ್ಚಿದೆ.......

    ನಾವು ಕುಳಿತಿದ್ದ ಕಂಬದ ಹಿಂದೆ ನಿಂತೇ ಆ ಭಯೋತ್ಪಾದಕ ಗುಂಡು ಹಾರಿಸುತ್ತಿದ್ದ........ ನನ್ನ ಗಂಡ ಎದ್ದು ನಿಂತರು...... ನಾನು ಕಣ್ಣು ಬಿಟ್ಟೆ....... ಆ ಭಯೋತ್ಪಾದಕ ಇಷ್ಟ ಬಂದ ಹಾಗೆ ಗುಂಡು ಹಾರಿಸುತ್ತಿದ್ದ....... ಪುಸ್ತಕದಲ್ಲಿ ರಣರಂಗದ ಬಗ್ಗೆ ಕೇಳಿದ್ದೆ...ಈಗ ಕಣ್ಣೆದುರಿಗೇ ಇತ್ತು...... ಆ ಭಯೋತ್ಪಾದಕ " ಅಲ್ಲಾ ಹೋ ಅಕ್ಬರ್" ಎಂದು ಕೂಗುತ್ತಿದ್ದ...... ಕಂಡಕಂಡಲ್ಲಿ ಗುಂಡು ಹಾರಿಸುತ್ತಿದ್ದ.....ಆತನ ಮುಖದಲ್ಲಿ ಮಾನವೀಯತೆ ಒಂಚೂರು ಕಾಣಿಸುತ್ತಿರಲಿಲ್ಲ...... ಮಕ್ಕಳು, ಮಹಿಳೆ, ವ್ರದ್ಧರು ಯಾರನ್ನೂ ನೋಡುತ್ತಿರಲಿಲ್ಲ ಆತ...... ದೂರದಲ್ಲಿ ಕೆಲ ಪೋಲಿಸರು ಕಂಬದ ಮರೆಯಲ್ಲಿ ಅಡಗಿದ್ದರು.....ಅವರ ಕೈಲಿ ಬರೇ ಲಾಠಿಯಿತ್ತು....ಪಾಪ ಅವರಾದರೂ ಏನು ಮಾಡುತ್ತಿದ್ದರು........ ಸುಮಾರಾಗಿ ಎಲ್ಲಾ ಸತ್ತ ನಂತರ ಆತ ಕಂಬದ ಹಿಂದಿದ್ದ ನಮ್ಮನ್ನು ನೋಡಿದ....... ಅದರಲ್ಲೂ ನನ್ನ ಗಂಡ ಎದ್ದು ನಿಂತಿದ್ದರು...... ಆ ಭಯೋತ್ಪಾದಕ ನನ್ನ ಗಂಡನ ಕಡೆ ಬಂದೂಕು ಹಿಡಿದ..... ನನ್ನವರು ಕೂಗಿದರು....." ಬಿಟ್ಟು ಬಿಡು ನಮ್ಮನ್ನು....ನಾವು ಇಲ್ಲಿಯವರಲ್ಲ...ದೂರದಿಂದ ಬಂದಿದ್ದೇವೆ..... ಬಿಟ್ಟುಬಿಡು ನಮ್ಮನ್ನು....ನನ್ನ ಮಗಳ ಹರಕೆ ತೀರಿಸಲು ಬಂದಿದ್ದೇವೆ ಇಲ್ಲಿಗೆ....... " ಆತನ ಮುಖ ಚರ್ಯೆ ಬದಲಾಗಲಿಲ್ಲ.....ಆತ ಬಂದೂಕು ಹಿಡಿದು ಇನ್ನೂ ಮುಂದೆ ಬಂದ..... ನನ್ನವರು ಕೊನೆಯ ಪ್ರಯತ್ನವಾಗಿ..." ನಾನೂ ಮುಸ್ಲಿಂ......ಹಾಜಿ ಅಲಿಗೆ ಬಂದಿದ್ದೆವು....... ನೋಡು ಚಾದರ್ ತಂದಿದ್ದೇವೆ....." ಎನ್ನುತ್ತಾ ತಂದಿದ್ದ ಚಾದರ್ ತೋರಿಸಿದರು....... 

ಊರಿನಲ್ಲಿ ಎಲ್ಲರ ಜೊತೆ ಗಣೇಶೋತ್ಸವ ಆಚರಿಸುವ ನನ್ನ ಗಂಡ , ಜೀವ ಉಳಿಸಿಕೊಳ್ಳಲು ತಮ್ಮ ಧರ್ಮವನ್ನು ಗುರಾಣಿಯಾಗಿ ಉಪಯೋಗಿಸಲು ನೋಡಿದ್ದರು....ಆದರೆ ಆ ಭಯೋತ್ಪಾದಕನಿಗೆ ಜಾತಿಯಿರಲಿಲ್ಲ, ಧರ್ಮವಿರಲಿಲ್ಲ..... ಕನಿಷ್ಟ ಆತನ ಮುಖಚರ್ಯೆಯೂ ಬದಲಾಗಲಿಲ್ಲ.......  ಆತ ದಿಡಿರನೇ ಗುಂಡು ಹಾರಿಸಿದ.... ಗುಂಡು ಬಡಿದ ರಭಸಕ್ಕೆ ನನ್ನ ಗಂಡ ಮಾರು ದೂರಕ್ಕೆ ಹಾರಿ ಬಿದ್ದರು...... ಅವರ ಕೈಯಲ್ಲಿದ್ದ ಚಾದರ್ ನನ್ನ ಮೈ ಮೇಲೆ ಬಿತ್ತು....... ನನ್ನ ಗಂಡನ  ಮೈ ಪೂರಾ ರಕ್ತವಾಗಿತ್ತು...... ಕಣ್ಣು ಅರ್ಧ ತೆರೆದಿತ್ತು..... ಬಿದ್ದ ರೀತಿ ನೋಡಿದರೆ ಆಗಲೇ ಪ್ರಾಣ ಹೋಗಿತ್ತು....... ನನ್ನ ಮುಖದ ಮೇಲೂ ರಕ್ತ ಬಿದ್ದಿತ್ತು...... ಆ ಭಯೋತ್ಪಾದಕ ಬಂದೂಕನ್ನ ನನ್ನ ಕಡೆ ತಿರುಗಿಸಿದ...... ನಾನು ಎಚ್ಚೆತ್ತುಕೊಳ್ಳುವ ಮೊದಲೇ ಗುಂಡು ಹಾರಿಸಿಯೇ ಬಿಟ್ಟ... ಅದು ನನ್ನ ಮಗುವಿನ ಕಣ್ಣಿಗೇ ತಾಗಿತು...... ನನ್ನ ಮಗಳ ಕೂಗು ಇನ್ನೂ ಕಿವಿಯಲ್ಲಿದೆ ನನಗೆ...... ನನಗೆ ಏನೆನಿಸಿತೋ ಗೊತ್ತಿಲ್ಲ.....ಕೈಯಲ್ಲಿದ್ದ ದರ್ಗಾಗೆ ಕೊಡಲು ತಂದಿದ್ದ ಚಾದರದಿಂದ ಬೀಸಿ ಒಗೆದೆ "ಅಲ್ಲಾ ಹೋ ಅಕ್ಬರ್" ಎನ್ನುತ್ತಾ ಆತನ ಕಡೆಗೆ........ ಅದು ಬಿಡಿಸಿಕೊಳ್ಳುತ್ತಾ ಹೋಗಿ ಆತನ ಮುಖದ ಮೇಲೆ ಬಿತ್ತು....... ತುಂಬಾ ಉದ್ದವಾದ ಚಾದರ್ ಆಗಿದ್ದರಿಂದ ಆತ ಅದನ್ನು ಬಿಡಿಸಿಕೊಳ್ಳಲು ಆತನಿಗೆ ಸ್ವಲ್ಪ ಸಮಯ ಹಿಡಿಯಿತು..........ಅಷ್ಟರಲ್ಲಿ ಅಲ್ಲಿದ್ದ ಕೆಲ ಪೋಲೀಸರು ಮತ್ತು ಜನ ಸೇರಿ ಆತನನ್ನು ಹಿಡಿದಿದ್ದರು...... 

ನನ್ನ ಮಗಳ ಅಳು ಹೆಚ್ಚುತ್ತಿತ್ತು.....ಕೂಡಲೇ ಬಂದ ಅಂಬುಲನ್ಸ್ ನನ್ನ ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಯ್ತು....... ಆದರೆ ನನ್ನ ಗಂಡ ಮೇಲೇಳಲೇ ಇಲ್ಲ...... ನಂತರ ಸರಕಾರ ನನ್ನ ಮಗಳ ಉಪಚಾರ ಮತ್ತು ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ...... ಅದಕ್ಕೆ ನಾನು ಆಭಾರಿಯಾಗಿದ್ದೇನೆ.....
ನಾನು ಇಲ್ಲಿ ಹೇಳಬೇಕಾದ ಒಂದೇ ಮಾತಿದೆ.....ಭಯೋತ್ಪಾದನೆಗೆ ಜಾತಿಯಿಲ್ಲ...ಮತವಿಲ್ಲ...... ಅವರಿಗೆ ಬುದ್ಧಿಯೂ ಇಲ್ಲ..... " ಆಕೆ ತನ್ನ ಕಣ್ಣನ್ನ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು......

ನಮ್ಮೆಲ್ಲರ ಕಣ್ಣಲ್ಲೂ ನೀರಿತ್ತು....... ನಮ್ಮ ಕಾಲೇಜ್ ಪರವಾಗಿ ಹಿರಿಯ ಸ್ವಾತಂತ್ಯಗಾರರನ್ನೂ ಶಾಲು ಹೊದೆಸಿ ಸನ್ಮಾನಿಸಿದೆವು...... ಅಲೀಮಾ ಅವರ ಮಗಳು ಕಪ್ಪು ಕನ್ನಡಕ ಧರಿಸಿ ಚೂಟಿಯಾಗಿ ಓಡಾಡಿಕೊಂಡಿದ್ದಳು...... ನಾನು ಕಾರ್ಯಕ್ರಮದ ವಂದನಾರ್ಪಣೆ ಮಾಡಿದೆ....." ಅಲೀಮಾ ಮೇಡಂ ಮಾಡಿದ ಕೆಲಸ ಅವರಿಗೆ ತಿಳಿದೋ, ತಿಳಿಯದೆಯೋ ದೇಶಕ್ಕೆ ಒಳ್ಳೆಯದನ್ನೇ ಮಾಡಿದೆ...... ಹಾಜಿ ಅಲಿಗಾಗಿ ಕೊಂಡೊಯ್ದ ಚಾದರ್ ತುಂಬಾ ಜನರ ಪ್ರಾಣ ಉಳಿಸಿದೆ.... ಅದೂ ಸಹ ದೇವರ ಕೆಲಸವೇ ಆಗಿದೆ....... ನಿಮಗೆ ನಮ್ಮೆಲ್ಲರ ನಮನ......" ಎಂದೆ... ನನ್ನ ಕಣ್ಣು ಹನಿಗೂಡಿತ್ತು.....

ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದೆ......... ಆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಲೀಮಾ ಮೇಡಂ ರಸ್ತೆ ಬದಿಯಲ್ಲಿ ನಿಂತಿದ್ದರು...... ಅವರಿಗಾಗಿ ಕಾಲೇಜು ಮಂಡಳಿ ವಾಹನ ವ್ಯವಸ್ತೆ ಮಾಡಿತ್ತು.... ಅದು ಬರಲು ಸ್ವಲ್ಪ ಲೇಟ್ ಆಗಿತ್ತು ಅನಿಸತ್ತೆ........ ಎಮ್.ಎಲ್.ಎ ಸಾಹೇಬರ ವಾಹನ ಹೊರಡಲು ತಯಾರಾಗಿತ್ತು.... ನಾನು ಹೋಗಿ ಎಮ್.ಎಲ್.ಎ. ಆಪ್ತ ಕಾರ್ಯದರ್ಶಿ ಹತ್ತಿರ ಆ ಇಬ್ಬರನ್ನು ಅವರ ವಾಹನದಲ್ಲಿ ಕರೆದುಕೊಂಡು ಹೋಗಲು ವಿನಂತಿ ಮಾಡಿದೆ...... ಆತ ಹೋಗಿ ಎಮ್.ಎಲ್.ಎ. ಸಾಹೇಬರಿಗೆ ಹಾಗೆ ಹೇಳಿದ..... ನಾನು ಅವರಿಂದ ಸ್ವಲ್ಪವೇ ದೂರವಿದ್ದೆ...... ಅವರ ಮಾತು ನನ್ನ ಕಿವಿಗೆ ಕಾದ ಸೀಸದಂತೆ ಸುರಿದಿತ್ತು..." ಅಲ್ಲಾರೀ...ಇವರೆಲ್ಲಾ ಏನು ಮಹಾನ್ ಕಾರ್ಯ ಮಾಡಿದ್ದಾರೆ ಎಂದು ಸನ್ಮಾನ ಮಾಡಬೇಕ್ರೀ.....?... ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಆ ಸಮಯದಲ್ಲಿ ಏನು ಮಾಡಿದ್ದನೋ ಯಾವನಿಗೆ ಗೊತ್ತು....... ಏನೂ ಕೆಲಸವಿಲ್ಲದೇ ಇದ್ದಾಗ ಸುಮ್ಮನೇ ದೊಂಬಿ ಜಗಳಕ್ಕೆ ಹೋಗಿದ್ದಿರಬೇಕು......ಜೈಲಿಗೆ ಹಾಕಿರುತ್ತಾರೆ...... ಅದು ಈಗ   ಸ್ವಾತಂತ್ರ್ಯ ಹೋರಾಟಗಾರ  ಎಂಬ ಹೆಸರು ಸಿಕ್ಕಿದೆ......ಈಗಿನ ಸರಕಾರದಿಂದ ಪಿಂಚಣಿಯನ್ನೂ ಪಡೆಯುತ್ತಿದ್ದಾನೆ....... ಆಯಮ್ಮನದೂ ಅದೇ ಕಥೆ....... ಸಾವು ತಮ್ಮ ಬುಡಕ್ಕೆ ಬಂದಾಗ ಎಲ್ಲರೂ ಬಡಿದೇಳುತ್ತಾರೆ.... ಅವಳೂ ಮಾಡಿದ್ದೂ ಅದೇ.... ಅದರಲ್ಲೇನು ಮಹಾ ಕೆಲಸವಿದೆ.......!!!"   

19 comments:

  1. ಅಸಹ್ಯಕರ ಅಧಿಕಾರಶಾಹಿ ದೋರಣೆ. ಚುನಾವಣೆಯಲ್ಲಿ ಸೋತ ರಾಜಕಾರಣಿ ಮಳೆಯಲ್ಲಿ ಒದ್ದೆಯಾದ ಬೀದಿ ನಾಯಿಯ ತರಹ ವಿಧಾನಸೌದದ ತುಂಬಾ ಏನೋ ಡೀಲು ಕುದುರಿಸಲು ಓಡಾಡುತ್ತಿರುತ್ತಾನೆ. ಗೆದ್ದು ಬಿಟ್ಟರೆ ಅವನಿಗೆ ಅದೇನೋ ಇಂದ್ರನ ಸಿಂಹಾಸನ ಅನ್ನೋ ಹುಚ್ಚು!

    ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಲೀಮ ಕನಿಷ್ಠ ಪಕ್ಷ ದೇಶಕ್ಕಾಗಿ ತುಸು ಕೆಲಸ ಮಾಡಿದರು ಇವರೋ ಬರೀ ಸ್ವಾರ್ಥ ಸಾಧಕರು.

    ಅಲೀಮಳಿಂದ ಮಾನವತೆಯ ಪಾಠ ಕಲಿತರೆ ಶಾಸಕರಿಂದ ಅಪಾತ್ರದಾನದ ಪಾಠ ಕಲಿತೆ!

    ReplyDelete
  2. ಗಂಡ ಭೇರುಂಡ, ಎರಡು ತಲೆ ನಾಗರಹಾವು..ಇವೆಲ್ಲ ಕಾಲ್ಪನಿಕ ಎಂದು ಬರಿ ಮಾತಿಗೆ ಹೇಳುತ್ತೇವೆ...ಕಣ್ಣಲ್ಲೇ ಪ್ರತಿ ದಿನ, ಪ್ರತಿ ಕ್ಷಣ ಕಾಣುವ ಈ ಡಬ್ಬ ರಾಜಕಾರಣಿಗಳು ಯಾವುದಕ್ಕೂ ಕಮ್ಮಿ ಇಲ್ಲ..ಅವಶ್ಯಕತೆಯೇ ಅವರಿಗೆ ಉಸಿರು..ಅವರಿಗೆ ಬೇಕಾಗಿರುವುದು ಬರಿ ಓಟು..ಅಷ್ಟೇ...ಜನಮತವಲ್ಲ..ಜನರ ಮತ ಅಷ್ಟೇ..ಈ ರಾಜಕಾರಣಿಗಳ ಇಬ್ಬಗೆಯ ನೀತಿ ಅಸಹ್ಯ ಹುಟ್ಟಿಸುತ್ತದೆ...
    ಒಳ್ಳೆಯ ದೃಷ್ಟಾಂತ ಸಂಗತಿ.

    ReplyDelete
  3. the preconceived notions latent in our subconscious will instantly make us jump to the conclusion that that MLA is such a cheap bastard. but well, a little bit of thinking involving the left lobe of the brain will make us wonder: "well, isn't it true whatever he said??" "ಸಾವು ತಮ್ಮ ಬುಡಕ್ಕೆ ಬಂದಾಗ ಎಲ್ಲರೂ ಬಡಿದೇಳುತ್ತಾರೆ...." <--- nobody can question the veracity of this statement when they read it as a standalone sentence- without considering who delivered it, or the context of its origin. coz everyone knows it is true...

    but if everything is to be judged pragmatically, then what is the point in having another lobe of the brain, which is on the right side?? though the right-brain isn't 'right' always, it can't always be wrong too! for instance, my left-brain is telling me that the last paragraph of this story is anything but true; and at the same time, my right-brain is sympathizing for that amazing woman. man, this grappling between the left and the right can put one into such a devastating moral dilemma. it is so difficult to figure out which is right, and which is not. hope i don't go mad too soon; or is it already too late?? ;-)

    regs,
    -R

    ReplyDelete
  4. ಅಂತೂ ಸ್ವಾತಂತ್ರ್ಯ ಹೋರಾಟಗಾರರ ನಿಜ ಬದುಕಿನ ಒಂದು ಮಜಲಿನ ಕುರಿತು ಕಥೆ ಬರೆದಿದ್ದೀರಿ. ಇವತ್ತಿನ ರಾಜಕಾರಣಿಗಳು ಎಂದಾದರೂ ಯಾರಿಗಾದರೂ ಒಳಿತನ್ನು ಬಯಸಿದ್ದಾಗಲೀ, ಯಾವುದೇ ವ್ಯಕ್ತಿಗಳನ್ನು ಮನಸಾ ಗೌರವಿಸಿದ್ದಾಗಲೀ ಇದೆಯೇ? ಇಲ್ಲ! ಅಹಂಕಾರದ ಮೊಟ್ಟೆಗಳಾದ ಅವರಿಗೆ ಬಾಲಬಡುಕರು ಮತ್ತು ಒಂದಷ್ಟು ಹಣ ಇರುವವರೆಗೆ ಮಿಕ್ಕಿದವರೆಲ್ಲಾ ಕಾಲಕಸ! ಕಥೆಯ ಉದ್ದೇಶ ಸಫಲವಾಗಿದೆ, ಶುಭಾಶಯಗಳು.

    ReplyDelete
  5. ದಿನಕರ್;ಒಳ್ಳೆಯ ಕತೆ.ಅಂತ್ಯದಲ್ಲಿ ರಾಜಕಾರಣಿಯ ಧೋರಣೆ ಬೇಸರ ತರಿಸಿತು.

    ReplyDelete
  6. ಸಾಮಾನ್ಯ ಜನರು ಎಂದು ಕರೆಯಿಸಿಕೊಳ್ಳುವವರೇ ಅಸಾಮಾನ್ಯ ಧೈರ್ಯ ತೋರಿಸುತ್ತಾರೆ. ಅತಿಗಣ್ಯವ್ಯಕ್ತಿಗಳೆಂದು ಕರೆಯಿಸಿಕೊಳ್ಳುವವರೇ ಡಾಂಭಿಕರಾಗಿದ್ದಾರೆ! ನಮ್ಮ ಸಮಾಜದ ಸದ್ಯದ ಸ್ಥಿತಿಯನ್ನು ಸರಿಯಾಗಿ ಚಿತ್ರಿಸಿದ್ದೀರಿ.

    ReplyDelete
  7. ಅಧಿಕಾರದ ಮದ ಇದ್ದರೆ ಹೀಗೆ...ಮನುಷ್ಯನ ನಾಲಿಗೆಗೆ ಸ್ಥಿಮಿತವೇ ಇರುವುದಿಲ್ಲ...ಅದೇ ವಿಪರ್ಯಾಸ.... :(

    ReplyDelete
  8. ದಿನಕರ..

    ಕಥೆಯಂತಿಲ್ಲ..
    ನಮ್ಮೂರಲ್ಲಿ ನಡೆದ ಘಟನೆಯಂತಿದೆ...

    ಈ ರಾಜಕೀಯ ಜನಕ್ಕೆ "ಸ್ವಂತಕ್ಕೆ" ಗೌರವನೂ ಇಲ್ಲ..
    ಬೇರೆಯವರಿಗೆ ಬಗೆಗೂ ಗೊತ್ತಿಲ್ಲ...

    ಎಲ್ಲರೂ ತಮ್ಮ ಹಾಗೆ ಅಂತ ನೋಡುವ ಹಳದಿ ಕಣ್ನಿನ ಜನ....

    ReplyDelete
  9. ದಿನಕರ್,
    ನೆನ್ನೆಯ ಪತ್ರಿಕೆ ಒಂದರಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರು ಹೇಳಿದ್ದು ಹೀಗೆ, "ಇಂದಿನ ಗೂಂಡ ರಾಜಕಾರಣಿಗಳ ಬದಲಾಗಿ, ನಮ್ಮನ್ನು ಬ್ರಿಟಿಷರೆ ಆಳಬೇಕಿತ್ತು"... ಎಂದು....ಎಂತ ವಿಪರ್ಯಾಸ ಇದು.... ಓದಿದಾಗ ತುಂಬಾ ಬೇಸರವಾಯ್ತು !
    ಇಂತಹ ಗೂಂಡ ರಾಜಕಾರಣಿಗಳಿಂದ ದೇಶ ಕೊಳೆಯುತ್ತಿದೆ, ಏನು ಮಾಡ್ಲಿಕ್ಕೆ ಆಗ್ತಿಲ್ಲ ನಮ್ಮಿಂದ ಅನ್ನೋದು ಒಂದಡೆ ಬೇಸರ ಮೂಡಿಸುತ್ತೆ.

    ReplyDelete
  10. ದಿನಕರ್ ಸರ್,
    ಕತೆ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ನಮ್ಮ ಇಂದಿನ ರಾಜಕಾರಣಿಗಳಿಗೆ ನಾಚಿಕೆಯಾಗದಿರುವುದೇ ಹೆಚ್ಚು

    ReplyDelete
  11. ತುಂಬಾ ಉತ್ತಮ ಕಥೆ.
    ಭಾವನಾತ್ಮಕವಾಗಿ ಓದಿದಾಗ -ರಾಜಕಾರಣಿ ಬಗ್ಗೆ ಹೇಸಿಗೆ ಹಾಗೂ ಮಹಿಳೆ ಬಗ್ಗೆ ಹೆಮ್ಮೆ ಅನ್ನಿಸುತ್ತೆ.

    ಆದರೆ ನಿರ್ವಿಕನಾವಾಗಿ ಯೋಚಿಸಿದಾಗ ರಾಜಕಾರಣಿ ಹೇಳಿದ್ದರಲ್ಲಿ ತಪ್ಪೇನಿದೆ? ಎನಿಸಿತು. ಹಾಗಂತಾ ರಾಜಕಾರಣಿಯನ್ನು ಸಮರ್ಥಿಸುತ್ತಿಲ್ಲಾ- ಅವನ ವಿಲಾಪ ಅವನಿಗೆ ಸಭೆಯಲ್ಲಿ ಪ್ರಾಮುಖ್ಯತೆ ಸಿಗದಿದ್ದುದ್ದಕ್ಕೆ. ಕಥೆಯನ್ನು ಸಮರ್ಥವಾಗಿ ನಿರ್ವಹಿಸಿ ಓದುಗರಿಗೆ ಬಿಡುವ ತಂತ್ರ ತುಂಬಾ ಇಷ್ತ್ತವಾಯಿತು.

    ReplyDelete
  12. ಪ್ರೀತಿಯ ದಿನಕರ್ ವಾಸ್ತವ ಸಂಗತಿಗಳನ್ನು ಕಥೆಯ ರೂಪದಲ್ಲಿ ಹೇಳುವ ಕಲೆ ನಿಮಗೆ ಅದ್ಭುತವಾಗಿ ಸಿದ್ಧಿಸಿದೆ ,ಈ ಲೇಖನ ಯಾಕೋ ಗೊತ್ತಿಲ್ಲ ಬಹಳ ಇಷ್ಟವಾಗಿ ಮನ ಕಲಕಿತು. ವಾಸ್ತವ ಪ್ರಪಂಚದ ಬೆತ್ತಲೆ ನೋಟ ಸಿಕ್ಕಿತು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  13. Aata MLA aagiddu saarthaka... Next aatanige ondu sanmaana maadabekittu :(

    ReplyDelete
  14. well wonderfully told nice narrative sir u rock

    ReplyDelete
  15. ಕಥೆ ನಿರೂಪಣೆ ಮತ್ತು ಓದಿಸಿಕೊಂಡು ಹೋಗುವ ಶೈಲಿ ಚನ್ನಾಗಿದೆ.
    ಜೀವ ರಕ್ಷಣೆಗೆ ಆಕೆ ಮಾಡಿದ ಹತಾಶೆ ಮತ್ತು ಧೈರ್ಯದ ಪ್ರಯತ್ನವಾದರೂ ಅದು ಪ್ರಾಯಶಹಃ ಹಲವರ ಪ್ರಾಣಹರಣ ತಪ್ಪಿಸಿದ್ದಿರಬಹುದು. ಸ್ವಾತಂತ್ರ್ಯ ಹೋರಾಟಗಾರರಿಗೆ ಆಗ ಅದೊಂದು ಏಕೋದ್ದೇಶಿತ (ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದು) ಜೀವನ. ಇಂತಹವರ ಸಾಧನೆಗಳನ್ನು ಬರೀ ಸ್ವಾರ್ಥ ತುಂಬಿದ ಇಂದಿನ ರಾಜಕಾರಣಿ ಗುರುತಿಸಲೂ ಸಾಧ್ಯವಿಲ್ಲ ಇನ್ನು ಅದನ್ನು ಸಂಮಾನಿಸುವುದು ದೂರದ ಮಾತು.

    ReplyDelete
  16. ಅಬ್ಬಾ.. !! ಎಂತಹ ಕಥೆ ಆ ಸಮಯದಲ್ಲಿ ಹಾಗೆ ಮಾಡಬೇಕು ಎಂದು ಯಾರಿಗೆ ಗೊತ್ತಾಗುತ್ತೆ ಆದರೂ ಆ ಸಮಯದಲ್ಲಿ ಆಕೆ ಹಾಗೆ ಮಾಡಿದ್ದಕ್ಕೆ ಎಷ್ಟೋ ಜನರ ಪ್ರಾಣ ಉಳಿದಿದೆ.. ಇಂತಹ ಧೈರ್ಯವನ್ನು ಮೆಚ್ಚದ ಆ ರಾಜಕಾರಣಿ ಇಂತಹದೇ ಸಂದರ್ಭದಲ್ಲಿ ಸಿಲುಕಿದರೆ ಗೊತ್ತಾಗುತ್ತಿತ್ತೇನೋ... ನಮ್ಮ ಜನ ಸ್ವಲ್ಪ ಬುದ್ಧಿ ಇಲ್ಲದಂತ ಮಾತುಗಳನ್ನಾಡುತ್ತಾರೆ. ತುಂಬಾ ಚೆನ್ನಾಗಿ ಬರೆದಿದ್ದೀರಿ ದಿನಕರ್ ಸರ್... ಎಂತಹ ಕಥೆಯನ್ನು ನಾನು ಓದದೇ ಹೋಗುತ್ತಿದ್ದೆನೇನೋ.. ಮೆಸೇಜ್ ಕಳಿಸಿದ್ದಕ್ಕೆ ಧನ್ಯವಾದಗಳು..

    ReplyDelete
  17. ಮಾರ್ಮಿಕವಾಗಿದೆ.. ಕಥೆ.. ! ಗಡಿ ಕಾಯುವವನಿಗಾಗಲೀ ಸ್ವಾತ೦ತ್ರ್ಯಹೋರಾಟಗಾರರಿಗಾಗಲೀ ತನ್ನನ್ನು ತಾನೇ ರಕ್ಶಿಸಿಕೊಳ್ಳುವ ಜವಾಭ್ದಾರಿ ಹೊತ್ತಿರುವವರಿಗಾಗಲೀ...ಪ್ರತಿಯೊಬ್ಬರಿಗೂ ಪ್ರಾಣವೇ ಅಲ್ಲವೇ..? ! ಉತ್ತಮವಾಗಿದೆ..

    ReplyDelete
  18. ಮನ ಮುಟ್ಟುವ ಲೇಖನ.. ಹಲವು ಸಾಮಾಜಿಕ ಆಯಾಮಗಳನ್ನು ಒಂದೇ ಲೇಖನದಲ್ಲಿ ಬಿಚ್ಚಿಡುವ ನಿಮ್ಮ ಶೈಲಿ ಅದ್ಭುತ :)

    ReplyDelete
  19. ರೋಚಕವಾಗಿದೆ...ಈಗಿನ ಪರಿಸ್ಥಿತಿಗೆ ಹಿಡಿದ ಕನ್ನಡಿ....ನಿರೂಪಣೆ ಇಷ್ಟ ಆಯಿತು....ಧನ್ಯವಾದಗಳು....

    ReplyDelete