Dec 13, 2012

ಸಮಸ್ಯೆ.....!!!



    ತಲೆ ಕೆಟ್ಟು ಹೋಗಿತ್ತು. ಮದುವೆಯಾಗಿ ಇಪ್ಪತ್ತು ವರ್ಷವಾಗಿದ್ದರೂ ಇಂತಹ ಸಂಧಿಗ್ಧ ಪರಿಸ್ಥಿತಿ ಬಂದಿರಲಿಲ್ಲ. ಮನವರಿತು ನಡೆಯುವ ಪತಿ, ಮುದ್ದಾದ ಮಗಳು, ಮನೆ ಮನವನ್ನು ಹಿತವಾಗಿರಿಸಿತ್ತು. ಆದರೆ ಅದೇ ಮುದ್ದಿನ ಮಗಳು ತಲೆಗೆ ತಂದಿಟ್ಟಿದ್ದಳು. ಇನ್ನೂ ಹದಿನೆಂಟು ವಯಸ್ಸು, ಆಗಷ್ಟೇ ಎರಡನೇ ಪಿ.ಯು.ಸಿ ಮುಗಿಸಿದ್ದಳು, ಡಿಗ್ರಿ ಶುರುವಾಗುವ ಮೊದಲು ಕಂಪ್ಯೂಟರ್ ಕ್ಲಾಸ್ ಸೇರಿದ್ದಳು. ಅಲ್ಲಿ ಕಲಿಸುತ್ತಿದ್ದ ತರಬೇತುದಾರನನ್ನೇ ಪ್ರೀತಿಸಲು ಶುರು ಮಾಡಿದ್ದಳು. ಪುಣ್ಯಕ್ಕೆ ನನ್ನ ಹತ್ತಿರ ಹೇಳಿದ್ದಳು. ’’ಅಮ್ಮಾ, ನಂಗೆ ಆತನೆಂದರೆ ಪ್ರಾಣ. ಆತ ಪಾಠ ಮಾಡುವ ರೀತಿ, ತಿಳಿಸಿ ಹೇಳುವ ಪರಿ, ಸಮಸ್ಯೆಗಳನ್ನು ಬಿಡಿಸುವ ವಿಧಾನ ಸುಪರ್. ಆತನಿಲ್ಲದೇ ನಾನು ಬದುಕಲ್ಲ. " ಏನೇನೊ ಬಡಬಡಿಸಿದ್ದಳು.....   

      ’’ಅಬ್ಭಾ , ಹದಿನೆಂಟರಲ್ಲಿ ಎಲ್ಲಿಯ  ಬದುಕು, ಎಂಥಹ ಪ್ರೀತಿಯ ವಿಷಯ.? ಎಲ್ಲಿಂದ ಕಲಿತಳು ಇದನ್ನೆಲ್ಲಾ ಇವಳು.?’’.  ನಾನು ಏನೇನೂ ಮಾತಾಡಲಿಲ್ಲ. "ಮಲ್ಲಿ, ಇವತ್ತು ರೆಸ್ಟ್ ತೆಗೆದುಕೋ, ನಾಳೆ ಮಾತಾಡೋಣ." ಎಂದು ಹೊರಗೆ ಬಂದಿದ್ದೆ. ಪತಿದೇವ ಮನೆಗೆ ಬಂದಾಗ ಎಲ್ಲವನ್ನೂ ಹೇಳಿದರೂ ಆತ ತಲೆ ಕೆಡಿಸಿಕೊಳ್ಳಲಿಲ್ಲ. ” ಅದೆಲ್ಲಾ ಈ ವಯಸ್ಸಲ್ಲಿ ಸಾಮಾನ್ಯ, ನಾಳೆ ಸರಿ ಆಗ್ತಾಳೆ ಬಿಡು " ಎನ್ನುವ ಭಾವ ಆತನದು. ಅಮ್ಮನಾದ ನನಗೆ ದಿಗಿಲಾಗಿತ್ತು. ಮದುವೆಗೆ ಮೊದಲು ನನ್ನ ತಂಗಿ ಹೀಗೇ ಅಮ್ಮನಲ್ಲಿ ಹೇಳಿದ್ದಾಗ, ಹೇಗಾಗಿದ್ದಿರಬಹುದು ಎಂದು ಈಗ ನನಗೆ ಅನುಭವಕ್ಕೆ ಬಂದಿತ್ತು. ಅಮ್ಮ ಆಗಾಗ ಹೇಳುತ್ತಿದ್ದಳು, " ವಯಸ್ಸಿಗೆ ಬಂದ ಹೆಣ್ಣು ಮಕ್ಕಳೆಂದರೆ ಸೆರಗಲ್ಲಿ ಕಟ್ಟಿಕೊಂಡ ಕೆಂಡದಂತೆ." ಅದರ ಅರ್ಥ ನನಗೆ ಈಗ ತಿಳಿದಿತ್ತು. ಈ ಸಂಕಷ್ಟದಿಂದ ಪಾರು ಮಾಡಲು ನೂರಾರು ದೇವರಿಗೆ ಹರಕೆ ಹೊತ್ತು ಮಲಗಿದರೂ ನಿದ್ದೆ ಬರಲಿಲ್ಲ.

   ಬೆಳಿಗ್ಗೆ ಬೇಗ ಎದ್ದು ಅವಳಿಗಿಷ್ಟವಾದ ನೀರು ದೋಸೆ ಮಾಡಿ ಕಾದು ಕುಳಿತೆ. ನನ್ನವರು ಎಂದಿನಂತೆ ಹೊಟ್ಟೆ ತುಂಬಾ ತಿಂದು ’ಆಫಿಸಿನಲ್ಲಿ ಕೆಲಸ ಇದೆ’ ಎನ್ನುತ್ತಲೇ ಹೊರಟರು. ಈಗ ಮಗಳ ಹತ್ತಿರ ಮಾತಾಡುವ ಕೆಲಸ ನನ್ನದಾಗಿತ್ತು. ’’ ಬಾಮ್ಮಾ ಮಲ್ಲಿಗೆ, ಇವತ್ಯಾಕೋ ಫಿಲ್ಮ್ ಹೋಗೋಣ ಎನಿಸುತ್ತಾ ಇದೆ. ಶಾರುಖ್ ಫಿಲ್ಮ್ ನೋಡೋಣ, ಓನ್ ಲೈನ್ ಬುಕ್ ಮಾಡಮ್ಮಾ." ಎಂದೆ. ಅವಳನ್ನು ದಿನವಿಡಿ  ಬ್ಯುಸಿ ಇಡುವುದು ನನ್ನ ಇರಾದೆಯಾಗಿತ್ತು. ಮುಖ್ಯವಾಗಿ ಇವತ್ತಿನ ಕಂಪ್ಯೂಟರ್ ಕ್ಲಾಸ್ ಗೆ ಹೋಗುವುದು ತಪ್ಪಿಸಬೇಕಿತ್ತು. " ಅಮ್ಮ ಥ್ಯಾಂಕ್ಸ್ , ನೀರು ದೋಸೆ ಮಾಡಿದ್ದಕ್ಕೆ. ಹೊಟ್ಟೆ ತುಂಬಿತು. " ಎಂದಳು ಮಲ್ಲಿಗೆ.

      ’ಇದೇ ಸರಿಯಾದ ಸಮಯ , ಆ ವಿಷಯ ಪ್ರಸ್ಥಾಪನೆಗೆ ’ ಎನಿಸಿತು.  " ಮಗಳೇ, ಈ ವಯಸ್ಸಲ್ಲಿ ಎಲ್ಲರೂ ಪ್ರೀತಿ , ಪ್ರೇಮ ಅನ್ನುತ್ತಾರೆ. ಆದರೆ ಅದಕ್ಕೆ ನಿಮ್ಮ ಮನಸ್ಸು ಪಕ್ವವಾಗಿ ಇರಲ್ಲ. ಇಷ್ಟವಾದುದನ್ನ ಬೇಕು ಎನ್ನುವ ಮನಸ್ಸು ನಿಮ್ಮದು. ನಾನು ಯೋಚಿಸಿದ್ದೇ ಸರಿ, ಎನ್ನುವ ವಯಸ್ಸು ನಿನ್ನದು..ಇದಕ್ಕೆಲ್ಲಾ ಮನಸ್ಸು ಕೊಡದೇ ನಿನ್ನ ಅಭ್ಯಾಸದ ಬಗ್ಗೆ ಗಮನ ಕೊಡು ಮಗಳೇ.." ಎಂದೆ ಅಪ್ಯಾಯಮಾನವಾಗಿ. ಮಗಳ ಉತ್ತರ ಏನಿರುತ್ತದೋ ಎನ್ನುವ ಹೆದರಿಕೆ ಇತ್ತು. " ಅಮ್ಮಾ, ನಾನು ಆಗಲೇ ಮನಸ್ಸು ಆತನಿಗೆ ಕೊಟ್ಟು ಬಿಟ್ಟಿದ್ದೇನೆ. ಆತ ನನ್ನನ್ನ ಪ್ರೀತಿಸುತ್ತಾನೋ ಇಲ್ಲವೋ ನನಗದು ಅನವಶ್ಯಕ, ನಾನು ಮಾತ್ರ ಆತನನ್ನೇ ಪ್ರೀತಿಸುತ್ತೇನೆ. ನನ್ನ ಜನ್ಮವಿರುವವರೆಗೂ".. 
    
    ನಗು ಬಂತು ನನಗೆ, ಇಷ್ಟು ಚಿಕ್ಕ ಮಗು ಇಷ್ಟೆಲ್ಲಾ ಮಾತನಾಡುತ್ತದಲ್ಲಾ ಎಂದು.. "ಯಾಕೆ ನಗಾಡುವುದು ನೀನು.? ತಮಾಶೆಯಾಗಿ ಕಾಣತ್ತಾ ನಿನಗೆ ಇದು..?" ಎಂದಳು ಮುಖ ಡುಮ್ಮ ಮಾಡುತ್ತಾ.. "ಹಾಗಲ್ಲಮ್ಮ, ಇನ್ನೂ ಹದಿನೆಂಟು ವಯಸ್ಸು ನಿಂದು, ಜನ್ಮದ ಬಗ್ಗೆ ಮಾತನಾಡುತ್ತೀಯಲ್ಲಾ.. ಅದಕ್ಕೆ ನಗು ಬಂತು. ನಾಳೆ ಇನ್ನೂ ಚಂದದ ಹುಡುಗ ಸಿಕ್ಕಾಗ ಇವನನ್ನೇ ಮರೆತುಬಿಡುವ ವಯಸ್ಸು ನಿಂದು.. ತುಂಬಾ ತಲೆ ಕೆಡಿಸಿಕೊಳ್ಳಬೇಡ ಮಗಳೇ.." ಎಂದೆ.. ಅವಳ ಕಣ್ಣಲ್ಲಿ ವಿಚಿತ್ರ ಬೆಳಕು ಬಂತು.. ನನಗೇನೋ , ಹುರುಪು... ಯಾವುದಾದರೂ ನೆವದಲ್ಲಿ ಇವಳ ಈ ಪ್ರಕರಣ ಸಮಾಪ್ತಿಯಾದರೆ ಸಾಕಿತ್ತು. " ಅಮ್ಮಾ, ನೀನು ಯಾರನ್ನಾದರೂ ಪ್ರೀತಿಸಿದ್ದೆಯಾ, ಅಪ್ಪನನ್ನು ಮದುವೆಯಾಗುವ ಮೊದಲು ?" ಪಕ್ಕದಲ್ಲೇ ಬಾಂಬ್ ಬಿದ್ದವಳಂತೆ ಬೆಚ್ಚಿ ಬಿದ್ದೆ. 

    ನನ್ನದು ಮತ್ತು ನನ್ನವರದು ಲವ್ ಮ್ಯಾರೇಜ್ ಆದರೂ ಮನೆಯವರ ಒಪ್ಪಿಗೆ ಇತ್ತು. ಬರ್ತಿ ಹತ್ತು ವರುಷದ ಪರಿಚಯ, ಸ್ನೇಹದ ನಂತರ ಮದುವೆಯಾಗಿತ್ತು. ನಮ್ಮಿಬ್ಬರ ನಡುವೆ ಮುಚ್ಚು ಮರೆ ಏನೂ ಇರಲಿಲ್ಲ. ಯಾವುದೇ ವಿಚಾರವನ್ನೂ ಬಚ್ಚಿಡದೇ, ಹಂಚಿಕೊಳ್ಳುತ್ತಿದ್ದೆವು. ಮೊನ್ನೆ ಮೊನ್ನೆ ಎರೋಬಿಕ್ಸ್ ಕ್ಲಾಸ್ ನಲ್ಲಿ ಬೆನ್ನಿಗೆ ಬಿದ್ದ ಹುಡುಗನನ್ನು  ಸರಿ ಮಾಡಲು ದಾರಿ ತೋರಿಸಿದ್ದೂ ನನ್ನವರೇ. ಹೀಗೆ ನನ್ನ ಜೀವನದಲ್ಲಿ ಬೇರೆ ಯಾರೂ ಇರಲಿಲ್ಲ. ಈ ಪುಟ್ಟ ಮಗಳು ಕೇಳಿದ ಪ್ರಶ್ನೆಗೆ ಏನು ಉತ್ತರ ಹೇಳುವುದೋ ತಿಳಿಯಲಿಲ್ಲ. ’ ನಾನೂ ಸಹ ನಿನ್ನ ಹಾಗೆ ಮದುವೆಗೆ ಮೊದಲು ಇನ್ನೊಬ್ಬನನ್ನು ಪ್ರೀತಿಸಿದ್ದೆ, ಆದರೂ ಅದರಿಂದ ಹೊರಬಂದು ಈಗ ಸುಖವಾಗಿ ಸಂಸಾರ ನಡೆಸುತ್ತಿದ್ದೇನೆ.’ ಎಂದು ಸುಳ್ಳು ಹೇಳೋಣ ಎನಿಸಿತು. "ಯಾಕೆ , ನಿನ್ನಪ್ಪನಿಂದ ನನಗೆ ಡೈವೋರ್ಸ್ ಕೊಡಿಸೊ ಯೋಚನೆ ಇದೆಯಾ. ನಾನು ನಿನ್ನಪ್ಪ ಸುಖವಾಗಿ ಇರೋದು ಇಷ್ಟ ಇಲ್ಲವಾ ನಿನಗೆ.?" ಎಂದೆ ನಾಟಕೀಯವಾಗಿ...

    ಆಕೆಯ ಮುಖ ಮೂರಗಲ ಆಯಿತು. ’ಯಾಕೋ, ಈ ಪ್ಲಾನ್ ವರ್ಕ್ ಆಗತ್ತೆ’ ಎನಿಸಿತು. " ಅಮ್ಮಾ, ಹೇಳಮ್ಮಾ... ಅಪ್ಪನಿಗೆ ಗೊತ್ತಾದ್ರೂ ಏನೂ ಅನ್ನಲ್ಲ. ನಿನ್ನನ್ನ ಅಷ್ಟು ಇಷ್ಟಪಡ್ತಾರೆ ... ಯಾವಾಗ ನೀನು ಲವ್ ಮಾಡಿದ್ದು ? ಅವರೂ ನಿನ್ನನ್ನು ಲವ್ ಮಾಡಿದ್ನಾ..? ಈಗ ಅವರು ಎಲ್ಲಿದ್ದಾರೆ..? ಅವರಿಗೆ ಮದುವೆ ಆಗಿದೆಯಾ..? ನಿನ್ನ ಮದುವೆ ಆದ ನಂತರ ಅವರನ್ನ ಮೀಟ್ ಮಾಡಿದ್ಯಾ..?."   ಅಬ್ಭಾ... ಪ್ರಶ್ನೆಗಳ ಬೌನ್ಸರ್ ಬರುತ್ತಿತ್ತು.. ನನಗೆ ಒಳಗೊಳಗೆ ನಗು ಬರುತ್ತಿತ್ತು. ಅದನ್ನ ತೋರಿಸುವ ಹಾಗಿರಲಿಲ್ಲ. ನಾನು ಕಟ್ಟುಕಥೆ ಹೇಳಲು ರೆಡಿಯಾದೆ. ಇದು ನನ್ನ ಕಲ್ಪನಾ ಶಕ್ತಿಯ ಪರೀಕ್ಷೆಯಾಗಿತ್ತು. ನಾನು ತಯಾರಾದೆ...

    " ನನಗಾಗ, ಹದಿನೇಳು ವಯಸ್ಸು. ಫಷ್ಟ್ ಪಿ.ಯು.ಸಿ.  ನಾನು ಒಬ್ಬರು ಲೇಡಿ ಲೆಕ್ಚರ್ ಹತ್ತಿರ ಟ್ಯೂ ಶನ್ ಗೆ ಹೊಗುತ್ತಿದ್ದೆ. ಮನೆಯಲ್ಲಿ ಅವರ ತಮ್ಮನೊಬ್ಬನಿದ್ದ. ನನ್ನನ್ನು ತುಂಬಾ ಗೋಳು ಹೊಯ್ದುಕೊಳ್ಳುತ್ತಿದ್ದ. ನಾನು ನೋಟ್ಸ್ ಬರೆಯುವಾಗ, ಆತ ತಿಂಡಿ ತಿನ್ನುತ್ತಾ ’ ನಿನಗೆ ಬೇಕಾ ’ ಎನ್ನುವ ಹಾಗೆ ತೋರಿಸುತ್ತಿದ್ದ. ಬರ್ತ್ ಡೇ ಗೆ ಗಿಫ಼್ಟ್ ಕೊಡುತ್ತಿದ್ದ.  ಅವನ ತರಲೆಗಳೇ ನನ್ನನ್ನು ಆತನ ಕಡೆಗೆ ಸೆಳೆದಿದ್ದವು. ಆತನ ಜೀವನ ಶೈಲಿ ತುಂಬಾ ವಿಚಿತ್ರವಾಗಿದ್ದುದೂ ನನ್ನನ್ನ ಸೆಳೆಯಲು ಕಾರಣವಾಗಿದ್ದಿರಬಹುದು. ಅವನ ಅಕ್ಕನ ಜೊತೆ ಅಂದರೆ ನನ್ನ ಲೆಕ್ಚರ್ ಜೊತೆ ಫಿಲ್ಮ್ ನೋಡಲು ಕರೆಯುತ್ತಿದ್ದ. ಬರದಿದ್ದರೆ ಜಾಸ್ತಿ ಕಾಡಿಸುತ್ತಿದ್ದ. ಒಮ್ಮೆಮ್ಮೆ ರೊಮ್ಯಾಂಟಿಕ್ ಕಾದಂಬರಿ ಓದಲು ಕೊಡುತ್ತಿದ್ದ ಮತ್ತೆ ಅದರ ಬಗ್ಗೆ ನನ್ನ ಅನಿಸಿಕೆ ಕೇಳುತ್ತಿದ್ದ.  ನಾನು ಒಂದು ದಿನ ಕ್ಲಾಸ್ ಗೆ ಬರದೇ ಇದ್ದರೆ ಮನೆಗೇ ಬರುತ್ತಿದ್ದ. ನಾನು ಅವನನ್ನು ಪ್ರೀತಿಸುತ್ತಿದ್ದೆನಾ ಅಥವಾ ಆತ ನನ್ನನ್ನ ಪ್ರೀತಿಸುತ್ತಿದ್ದನಾ ತಿಳಿದಿರಲಿಲ್ಲ.  ಆತ ನನ್ನ ಪಕ್ಕ ಇರುವುದು ನನಗೆ ತುಂಬಾ ಖುಷಿ ನೀಡುತ್ತಿತ್ತು. ಅದಕ್ಕೆ ಕಾರಣ ನನಗೆ ತಿಳಿದಿರಲಿಲ್ಲ. ಆದರೂ ನನಗೆ ಆತನೆಂದರೆ ತುಂಬಾ ಇಷ್ಟವಿತ್ತು. ಆತ ಒಂದು ದಿನ ನನಗೆ ಕಾಣಿಸದೇ ಇದ್ದರೂ ಮನಸ್ಸು ರೋದಿಸುತ್ತಿತ್ತು.  

     ನನ್ನ ಲೆಕ್ಚರ್ ಗೆ ಬೇರೆ ಊರಿಗೆ  ವರ್ಗವಾದಾಗ, ಆತ ನನ್ನನ್ನು ತಬ್ಬಿಕೊಂಡು ’ ಐ ಲವ್ ಯು’ ಅಂದಿದ್ದ. ಬಾಯಿ ತನಕ ಬಂದಿದ್ದ ನನ್ನ ಉತ್ತರ ಗಂಟಲಲ್ಲೇ ಉಳಿಸಿಕೊಂಡಿದ್ದೆ. ನಾಳೆಯಿಂದ ಈತ ನನ್ನ ಪಾಲಿಗೆ ಇಲ್ಲ ಎನ್ನುವ ಸತ್ಯವೂ ನನ್ನ ಬಾಯಿ ಕಟ್ಟಿತ್ತೇನೋ ಗೊತ್ತಿರಲಿಲ್ಲ. ನಾಳೆಯಿಂದ ಹೇಗಿರಲಿ ಎನ್ನುವ ಭಾವವೇ ನನ್ನನ್ನು ಹಿಪ್ಪಿ ಮಾಡಿತ್ತು. ಆತ ಹೊರಟು ಹೋಗಿ ವಾರಕ್ಕೊಮ್ಮೆ ಬರೆಯುತ್ತಿದ್ದ ಪತ್ರ , ದಿನ ಕಳೆದಂತೆ ತಿಂಗಳಿಗೊಂದು ನಂತರ ಜನ್ಮದಿನಕ್ಕೊಂದರಂತೆ ಬರುತ್ತಿತ್ತು. ಕ್ರಮೇಣ ಅದೂ ನಿಂತು ಹೋಯಿತು. ಅವನ ಜೀವನಕ್ಕೆ ಯಾರು ಬಂದರೋ ತಿಳಿದಿಲ್ಲ. ನನ್ನ ಜೀವನದಲ್ಲಿ ನಿನ್ನ ಅಪ್ಪ ಬಂದರು. ಈಗಿನ ಪರಿಸ್ತಿತಿ ಏನೆಂದರೆ ನನಗೆ ಆತನ ಹೆಸರೇ ಮರೆತು ಹೋಗಿದೆ. 

   ವಯಸ್ಸು ಹೆಚ್ಚಾಗುತ್ತಾ ಹೋದ ಹಾಗೆ ಮನಸ್ಸು ಪ್ರಭುದ್ದಗೊಳ್ಳುತ್ತದೆ. ಬುದ್ದಿಗೆ ಮನಸ್ಸನ್ನು ಗೆಲ್ಲುವ ತಾಕತ್ತಿರಬೇಕು. ಇಲ್ಲದಿದ್ದರೆ ಎಲ್ಲಾ ಕನಸುಗಳೂ ಹಳ್ಳ ಹಿಡಿಯುತ್ತವೆ.   ನನಗೆ ಈಗ ಆತ ಎದುರಿಗೆ ಸಿಕ್ಕರೆ ನಿಂತು ಮಾತನಾಡಿಸುತ್ತೀನಾ ಗೊತ್ತಿಲ್ಲ. ಅವನ ಬಗ್ಗೆ ಯೋಚಿಸಲೇ ಇಲ್ಲ ನಾನು. ನಿನ್ನ ಮನಸ್ಸು ಮತ್ತು ವಯಸ್ಸು ಹಾಗೇನೆ ಕಣಮ್ಮ. ಅದಕ್ಕೂ ದುನಿಯಾ ತೋರಿಸು. ಅದಕ್ಕೇ ಅರ್ಥ ಆಗತ್ತೆ. ಈಗಲೇ ನೀ ಕಂಡ ಜಗತ್ತಿನ  ಆಳ ಮತ್ತು ವಿಶಾಲ ಅಳೆಯಬೇಡ, ಅವನನ್ನು ಬಿಟ್ಟರೆ ಜಗತ್ತಲ್ಲಿ ಬೇರೆ ಯಾರೂ ಇಲ್ಲ ಅನ್ನೊದನ್ನ ಕಿತ್ತೊಗೆ ಮನಸ್ಸಿಂದ ’ ಎಂದು ನನ್ನ ಮನಸ್ಸಿಗೆ ತೋಚಿದ್ದನ್ನ ಹೇಳಿದೆ. 

    ಮನಸ್ಸಲ್ಲೇ ಕಲ್ಪಿಸಿಕೊಂಡ ನನ್ನ ಲವ್ ಸ್ಟೋರಿ ನನಗೇ ಖುಶಿ ಕೊಟ್ಟಿತ್ತಾ.. ಗೊತ್ತಿಲ್ಲ... ಮಗಳ ಮುಖದಲ್ಲಂತೂ ಸ್ವಲ್ಪ ಗೆಲುವು ತಂದಿತ್ತು. ಅವಳು ಏನು ಯೋಚಿಸುತ್ತಿದ್ದಳೋ ಗೊತ್ತಿಲ್ಲ. " ಅಮ್ಮಾ, ನನಗೂ ಮನಸು ಹಗುರಾಗಿದೆ. ನಿನ್ನ ರೀತಿಯಲ್ಲೇ ನಾನೂ ಯೋಚಿಸುತ್ತೇನೆ . ನೋಡೋಣ. ಸಂಜೆ ಫಿಲ್ಮ್ ಗೆ ಹೋಗೋಣ ಅಪ್ಪನಿಗೂ ಬರಲು ಹೇಳು" ಅಂದಳು ನಗುತ್ತಾ. ನನಗೆ ನೂರಾನೆಯೊಂದಿಗೆ ಹೋರಾಡಿ ಗೆದ್ದ ಬಲ. 

   ಸಂಜೆ ಮನೆಯವರು ಬಂದಾಗ ನಡೆದದ್ದೆಲ್ಲ ಹೇಳಿದೆ..... ಅವರು " ನೋಡಿಲ್ವಾ, ನಾನು ಹೇಳಿದ್ದೆ , ಎಲ್ಲ್ಲಾ ಸರಿ ಹೋಗತ್ತೆ ಅಂತ. ನೀನು ಸುಮ್ನೆ ಟೆನ್ಶನ್ ಮಾಡ್ಕೊಂಡಿದ್ದೆ" ಅಂದರು... ನನಗೆ ನಗು ಬಂತು, ನನಗೇ ಗೊತ್ತಿತ್ತು... ನಾನು ಇದನ್ನು ಪರಿಹರಿಸಲು ಪಟ್ಟ ಕಷ್ಟ. " ನಿಮಗೇನ್ರೀ ನನ್ನ ಕಷ್ಟ ಗೊತ್ತು.? ಏನೇನ್ ಹೇಳಿ ಅವಳಿಗೆ ಸರಿ ಮಾಡಿದ್ದೇನೆ ಅಂತ. ನಿಮಗೆ ಸರಿ ಆದ್ರೆ ’ ಒಹ್..! ಸ್ಸರಿ ಆಯ್ತಾ..?’ ... ಸರಿ ಆಗಿಲ್ಲಾ ಅಂದ್ರೆ..’ ನಿನ್ನ ಕೈಲಿ ಏನೂ ಆಗಲ್ಲ’ ಅಂತೀರಾ. ನಮ್ಮ ಕಷ್ಟ ನಿಮಗೆ ಅರ್ಥ ಆಗಲ್ಲ. ಸುಳ್ಳು -ಪಳ್ಳು ಹೇಳಿ ನಂಬಿಸಿದ್ದೇನೆ ಅವಳನ್ನ " ಎಂದೆ ಮುಖ ಉಬ್ಬಿಸಿಕೊಂಡು.... ಅವರು ಹತ್ತಿರ ಬಂದು ” ನಿನ್ನ ಮೇಲೆ ನಂಬಿಕೆ ಇತ್ತು ಕಣೆ. ಅದಕ್ಕೆ ನಿನ್ನ ಮೇಲೆಯೇ ಬಿಟ್ಟೆ ಇದನ್ನ ಪರಿಹಾರ ಮಾಡಲು " ಎಂದರು ... ಸ್ವಲ್ಪ ಸಮಾಧಾನ ಆಯ್ತು. " ಅದ್ಸರಿ, ಏನು ಸುಳ್ಳು ಹೇಳಿದೆ ಅವಳಿಗೆ ?" ಕೇಳಿದರು.

    ನಾನು ಎಳೆ ಎಳೆಯಾಗಿ ನನ್ನ ಕಲ್ಪನೆಯ ಲವ್ ಸ್ಟೋರಿ ಹೇಳುತ್ತಾ ಹೋದೆ. ಕಥೆ ಹೇಳಿ ಮುಗಿಸಿದಾಗ ನನ್ನ ಮುಖದಲ್ಲಿ ಒಂದು ರೀತಿಯ ಹೆಮ್ಮೆ ಇತ್ತು..ಕಥೆ ಮುಗಿಸಿ ಅವರ ಕಡೆ ನೋಡಿದಾಗ ಅವರ ಮುಖ ಕೆಂಪಾಗಿತ್ತು. ’ಅಯ್ಯೋ  ದೇವ್ರೆ.. ಇದೇನಪ್ಪ . ನನ್ನ ಕಲ್ಪನೆಯನ್ನು ನಿಜ ಅಂದ್ಕೊಂಡು ಬಿಟ್ರಾ ಹೇಗೆ.?’ ಎನಿಸಿತು. ಕೇಳಿಯೂ ಬಿಟ್ಟೆ. " ಯಾಕೆ ಏನಾಯ್ತು..? ಏನಾದರು ತಪ್ಪು ಮಾಡಿದೆನಾ  ಹೇಳಿ.? ಇದು ಅವಳ ಮೇಲೆ ಏನಾದರೂ ತಪ್ಪು ಪರಿಣಾಮ ಬೀರತ್ತಾ ಹೇಗೆ..?" ನನ್ನ ಕಳವಳ ನನ್ನದಾಗಿತ್ತು.. 

   ಅವರು ಗಂಭೀರವಾಗಿ " ಇದು ನಿನ್ನ ಕಲ್ಪನೆಯ ಕಥೆಯಾ.? ಇದನ್ನ ನಾನು ನಂಬಬೇಕಾ..? ನೀನು ಈ ರೀತಿ ಮಾಡ್ತೀಯಾ ಅಂತ ನಾನು ಯೋಚಿಸಿರಲಿಲ್ಲ. ನೆನಪಿದೆಯಾ ನಿನಗೆ, ಮದುವೆಗೆ ಮುಂಚೆ ನಮ್ಮ ಮಧ್ಯೆ ಒಂದು ಒಪ್ಪಂದವಾಗಿತ್ತು ..?".  ನಾನು ಅಯೋಮಯವಾಗಿ ” ಹೌದು, ನಮ್ಮಿಬ್ಬರ ಮಧ್ಯೆ ಏನೂ ಗುಟ್ಟು ಇರಬಾರದು ಅಂತ. ನಾನು ಅದನ್ನ ಪಾಲಿಸಿದ್ದೇನೆ ಕೂಡ " ಅಂದೆ ಸ್ವಲ್ಪ ಜೋರಾಗಿಯೇ.. " ಅವರು ಇನ್ನೂ ಗಂಭೀರವಾಗಿ, " ಇನ್ನೂ ಒಂದು ಶರತ್ತಿತ್ತು, ನಮ್ಮ ಹಳೆಯ ನೆನಪುಗಳನ್ನು ಕೆದಕಬಾರದು ಮತ್ತು ನನ್ನ ಹಳೆಯ ಸೂಟ್ ಕೇಸ್ ತೆರೆಯಬಾರದು. ತೆರೆದರೂ ನಮ್ಮ ನಮ್ಮ ಡೈರಿ ಯನ್ನು ಓದಬಾರದು. ನೆನಪಿದೆಯಾ.? ನೀನು ಆ ಶರತ್ತನ್ನ ಮುರಿದುಬಿಟ್ಟೆ. ನನ್ನ ಡೈರಿ ಓದಿಬಿಟ್ಟೆ ಅಲ್ವಾ..? ನಿನ್ನಿಂದ ಇದನ್ನ ನಿರೀಕ್ಷಿಸಿರಲಿಲ್ಲ ನಾನು..ನನಗೆ ನಿಜವಾಗಿಯೂ ತುಂಬಾ ನೋವಾಗಿದೆ." ಎನ್ನುತ್ತಾ ಹೊರ ನಡೆದರು.

   ನನಗೆ ಒಂದು ಸಮಸ್ಯೆ ಮುಗಿದುದ್ದಕ್ಕೆ ಸಂತಸ ಪಡಬೇಕೋ, ಹೊಸ ಸಮಸ್ಯೆ ಶುರು ಆದುದಕ್ಕೆ ಆತಂಕ ಪಡಬೇಕೋ ತಿಳಿಯಲಿಲ್ಲ.

Nov 7, 2012

ಮಾನವೀಯತೆ.......???



    ಇವತ್ತು ಸೊಸೆ ಕೊಟ್ಟ ದುಡ್ಡಲ್ಲಿ ಹೇಗಾದರೂ ಮಾಡಿ ಉಳಿಸಲೇ ಬೇಕಿತ್ತು... ಐವತ್ತು ರುಪಾಯಿ ಉಳಿಸಲೇ ಬೇಕಿತ್ತು... ದಿನಸಿ ಸಲುವಾಗಿ ಬಂದಿದ್ದೆ, ಕೆಲವೊಂದು ಸಾಮಾನು ಬೇಕೆಂದೇ ತೆಗೆದುಕೊಳ್ಳಲಿಲ್ಲ.... ನಾಳಿನ ಪೂಜೆಗಾಗಿ ಎಲ್ಲಾ ವಸ್ತುಗಳನ್ನೂ ಕೊಂಡೆ.... ಐವತ್ತೈದು ರುಪಾಯಿ ಉಳಿಯಿತು.... ಸೈಕಲ್ ಹತ್ತಿದೆ. ಸೈಕಲ್ ನ ಇಕ್ಬಾಲ್ ಸಾಬನ ಚಿಕನ್ ಸ್ಟಾಲ್ ಕಡೆ ತಿರುಗಿಸಿದೆ.... ಇಕ್ಬಾಲ್ ಸಾಬ್ ನನ್ನ ನೋಡಿ ದೊಡ್ಡ ಕಣ್ಣು ಮಾಡಿದ, ’ಇದೇನಪ್ಪಾ ಪುಳ್ ಚಾರ್ ಮುದುಕನಿಗೆ ಇಲ್ಲೇನು ಕೆಲಸ’ ಎನ್ನುವ ಹಾಗಿತ್ತು ಅವನ ಮುಖಭಾಷೆ..... ನಾನು ಹೆದರುತ್ತಲೇ ಆ ಕಡೆ ಈ ಕಡೆ ನೋಡುತ್ತಾ ಅವನ ಅಂಗಡಿಯ ಒಳಗಡೆ ಹೋದೆ.... ಅಲ್ಲಿನ ಕೆಟ್ಟ ವಾಸನೆ ವಾಕರಿಕೆ ಬಂದರೂ ಸಹಿಸಿಕೊಂಡೆ..... "ಏನು ಸಾರ್ ಈ ಕಡೆ..? ಏನು ಬೇಕು..? " ಕೇಳಿದ ಇಕ್ಬಾಲ್ ಸಾಬ್....  ನಾನು ಗಂಬೀರವಾಗಿಯೇ " ಅರ್ಧ ಕೇಜಿ ಕೋಳಿ ಮಾಂಸ" ಎಂದೆ...... 

     ಆತ " ಯಾರಿಗೆ ಸಾರ್ ಇದು..? ನೀವಂತೂ ತಿನ್ನುವುದಿಲ್ಲ. ಇಲ್ಲಾ ನೀವೂ ತಿನ್ನಲೂ ತಿನ್ನಲು ಶುರು ಮಾಡಿದ್ರಾ..?  ಓ.. ನಿಮ್ಮ ಪಕ್ಕದ ಮನೆಯವರಿಗಾ..? " ಕೇಳಿದ...... ಈತ ಪ್ರಶ್ನೆ ಕೇಳುತ್ತಿದ್ದಾನಾ ಅಥವ ಉತ್ತರ ಹೇಳುತ್ತಿದ್ದಾನಾ ತಿಳಿಯಲಿಲ್ಲ..... ನಾನು"ಹೌದು" ಎಂದೆ,,,, ಆದರೆ ಆತನ ಯಾವ ಪ್ರಶ್ನೆಗೆ ಎನ್ನುವ ಉತ್ತರ ನನಗೂ ತಿಳಿಯಲಿಲ್ಲ..... ಮೊದಲೇ ಕಟ್ ಮಾಡಿಟ್ಟ ಮಾಂಸವನ್ನ ಆತ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಕೊಟ್ಟ..... ಜೀವನದಲ್ಲಿ ಎಂದಿಗೂ ಮುಟ್ಟದ ವಸ್ತುವನ್ನು ಇವತ್ತು ಕೈಯಲ್ಲಿ ಹಿಡಿದಿದ್ದೆ...... ಮನಸ್ಸು ದ್ರಢವಾಗಿತ್ತು.....

      
      ಮಾಂಸ ಇದ್ದ ಪ್ಲಾಸ್ಟಿಕ್ ಚೀಲವನ್ನು ಸೈಕಲ್ ಹ್ಯಾಂಡಲ್ ಗೆ ನೇತಾಡಿಸಿ ಕೊಂಡು, ಸೊಸೆ ಹೇಳಿದ ದಿನಸಿ ಸಾಮಾನನ್ನು ಹಿಂದಿನ ಕ್ಯಾರಿಯರ್ ಗೆ ಸಿಕ್ಕಿಸಿ ಸೈಕಲ್ ತುಳಿದೆ...... ಸರಕಾರಿ ನೌಕರಿಯಿಂದ ನಿವ್ರತ್ತನಾದರೂ ದೇಹ ಗಟ್ಟಿಯಿತ್ತು ಅದಕ್ಕೆ ಈ ಸೈಕಲ್ ತುಳಿದಿದ್ದೂ ಕಾರಣ ಇರಬಹುದು...... ನಾನು ಮಾಡಿದ ಅಲ್ಪ ಸ್ವಲ್ಪ ಒಳ್ಳೆಯ ಕೆಲಸದಿಂದ ಈಗಲೂ ಕೆಲ ಜನರು ನನ್ನನ್ನು ಗೌರವಿಸುತ್ತಾರೆ..... ಸೈಕಲ್ ತುಳಿಯುತ್ತಲೇ ನನ್ನ ಕಣ್ಣು ಅವನ್ನು ಹುಡುಕುತ್ತಿತ್ತು...... ಈ ಕೋಳಿ ಮಾಂಸವನ್ನು ಅವಕ್ಕೆ ಹೇಗೆ ತಲುಪಿಸುವುದು ತಿಳಿಯುತ್ತಿರಲಿಲ್ಲ..... ಮನೆಗೆ ತೆಗೆದುಕೊಂಡು ಹೋದರೆ, ಮಗ ಸೊಸೆ ನನ್ನನ್ನು ಒಳಗಡೆ ಬಿಟ್ಟುಕೊಳ್ಳಲ್ಲ ಎಂದು ಗೊತ್ತಿತ್ತು.......

     ಆದರೆ ನನ್ನ ಮನಸ್ಸು ಗಟ್ಟಿಯಾಗಿತ್ತು ಏನಾದರೂ ಮಾಡಿ ಅನಿಸಿಕೊಂಡ ಕೆಲಸ ಮಾಡಬೇಕಿತ್ತು..... ಸೈಕಲ್ ನ್ನ ಕಂಪೌಂಡ್ ಹೊರಗಡೆನೇ ನಿಲ್ಲಿಸಿ ಸೊಸೆ ಹೇಳಿದ ಸಾಮಾನಿನ ಚೀಲ ತೆಗೆದುಕೊಂಡೆ..... ಕೋಳಿ ಮಾಂಸದ ಚೀಲ ಸುತ್ತಿ ಸುತ್ತಿ ಇನ್ನೊಂದು ಕೈಲಿ ಹಿಡಿದೆ...... ಬಾಗಿಲು ತೆರೆದೇ ಇತ್ತು, ಒಳಗೆ ಹೋಗಬೇಕು ಎನ್ನುವಾಗಲೇ ಸೊಸೆ ಮತ್ತು ಮಗ ಎದುರಿಗೇ ಬಂದ್ರು...... ನಾನು ಸಾಮಾನಿನ ಚೀಲ ಸೊಸೆ ಕೈಲಿಟ್ಟೆ...... ಅವರ ಕಣ್ಣು ನಾನು ತಂದ ಇನ್ನೊಂದು ಚೀಲದ ಮೇಲಿತ್ತು.

       ಸೊಸೆ ಮಾತ್ರ ನನ್ನನ್ನು ಕಣ್ಣೆತ್ತಿಯೂ ನೊಡುತ್ತಿರಲಿಲ್ಲ...... ಮೊದಲೆಲ್ಲಾ ತುಂಬಾ ಗೌರವದಿಂದ, ಪ್ರೀತಿಯಿಂದ ನೋಡುತ್ತಿದ್ದಳು....... ಆ ದಿನದ ನಂತರ ನನ್ನನ್ನು ಮಾತನಾಡಿಸುತ್ತಲೂ ಇರಲಿಲ್ಲ..... ಏನೇ ಕೆಲಸ ಇದ್ದರೂ ಮಗನೇ ಹೇಳುತ್ತಿದ್ದ..... ಮನೆಯಲ್ಲೂ ಹೆಚ್ಚಿಗೆ ಇರುತ್ತಿರಲಿಲ್ಲ ನಾನು..... ಬೇಗ ಹೊರಬೀಳಬೇಕಿತ್ತು ನನಗೆ..... ಇಲ್ಲೇ ಇದ್ದರೆ ಕೈಲಿದ್ದ ಚೀಲದ ಬಗ್ಗೆ ಕೇಳುತ್ತಾರೆ ಎನಿಸಿಕೊಂಡು ಹೊರಬಿದ್ದೆ....... ಮಗ " ಅಪ್ಪಾ ಎಲ್ಲಿಗೆ ಹೊರಟಿರಿ? ನಾಳಿನ ಪೂಜೆಗೆ ಎಲ್ಲಾ ಸಾಮಾನು ತಂದಿದ್ದೀರಾ ತಾನೆ? ಉಳಿದ ಹಣ ಎಲ್ಲಿ ? " ಎಂದ.... ನಾನು "ಹೌದು, ಎಲ್ಲಾ ತಂದಿದ್ದೇನೆ.... ಸ್ವಲ್ಪ ಹಣ ನನಗೆ ಖರ್ಚಾಯಿತು ..." ಎಂದೆ..... ’ಅಪ್ಪಾ , ಎಲ್ಲಿಗೆ ಹೋಗ್ತಾ ಇದೀರಾ.? ಕೈಯಲ್ಲಿ ಇರೋದು ಏನು.? ’ ಎಂದು ಮಗ ಕೇಳ್ತಾ ಇದ್ದ......

      ನಾನು ಗಡಿಬಿಡಿಯಿಂದ ಸೈಕಲ್ ಹತ್ತಿ ಪೆಡಲ್ ತುಳಿದೆ....... ಮನಸ್ಸು ದಾರಿ ಎಲ್ಲಿಗೆ ಎಂದು ನಿರ್ಧಾರ ಮಾಡಿಯಾಗಿತ್ತು......... ಊರ ಹೊರದಾರಿಯಲ್ಲಿದ್ದ ಮುನಿಯಮ್ಮನ ಮನೆ ಮುಂದೆ ಸೈಕಲ್ ನಿಲ್ಲಿಸಿ ಸೈಕಲ್ ಬೆಲ್ ಮಾಡಿದೆ...... ಆಕೆ ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಳು..... ಗಂಡ ಸತ್ತಿದ್ದ....... ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು......... ಕೆಲಸ ಸಿಕ್ಕಿದ್ದು ನನ್ನಿಂದಲೇ ಅಂತ ಆಕೆಗೆ ನನ್ನ ಮೇಲೆ ಗೌರವ ಇತ್ತು....... ನನ್ನ ಸೈಕಲ್ ಬೆಲ್ ಕೇಳಿ ಆಕೆ ಹೊರಗೆ ಬಂದಳು....... "ಏನು ಬುದ್ದಿ, ಹೇಳಿ ಕಳಿಸಿದ್ರೆ ನಾನೇ ಬರ್ತಿದ್ನಲ್ಲಾ.... ಮನೆ ತಾವಾ ಏನಾದ್ರೂ ಕೆಲ್ಸ ಇತ್ತಾ..? ನಾಳೆ ಪೂಜೆಗಾಗಿ ಏನಾದ್ರೂ ಬೇಕಿತ್ರಾ.? "

     ಅವಳ ಪ್ರಶ್ನೆ ಮುಗಿದಿರಲಿಲ್ಲ, ನಾನು ಕೋಳಿ ಮಾಂಸದ ಚೀಲ ಅವಳ ಕೈಲಿಟ್ಟೆ. " ಘಮ ಘಮ ಎನ್ನುವ ಹಾಗೆ ಸಾರು ಮಾಡಿಡು." ಎಂದೆ...... ಆಕೆ ಚೀಲ ತೆರೆದು ನೋಡಿದಳು, ಆಕೆಯ ಮುಖ ಕೆಂಪಗಾಯಿತು........." ಏನ್ ಬುದ್ದಿ ನೀವು.? ಇನ್ನೂ ಅವುಗಳ ಮೇಲೆ ಪ್ರೀತಿ ಕಡಿಮೆಯಾಗಲಿಲ್ಲವಾ.? ಅವುಗಳು ಏನು ಮಾಡಿದ್ದವು ಎನ್ನುವ ನೆನಪು ಇಲ್ಲವಾ ನಿಮಗೆ.? ನಾಳೆ ವರ್ಷದ ಪೂಜೆ ಇಟ್ಟುಕೊಂಡು ನೀವು ಈ ಕೆಲ್ಸ ಮಾಡ್ತಾ ಇದ್ದೀರಲ್ಲಾ ಬುದ್ದೀ..?"........ ಅವಳು ವಟಗುಡುತ್ತಲೇ ಇದ್ದಳು... ನಾನು "ಒಂದು ಗಂಟೆ ಬಿಟ್ಟು ಬರುತ್ತೇನೆ, ರೆಡಿ ಮಾಡಿಡು" ಎಂದವನೇ ಪೆಡಲ್ ತುಳಿದೆ......

     ಸ್ವಲ್ಪ ದೂರ ಹೋಗುತ್ತಲೇ ಒಂದು ಪರಿಚಯದ ಮುಖ ಕಂಡಿತು...... ಸೈಕಲ್ ನಿಲ್ಲಿಸಿದೆ....... ಮುಖ ಪರಿಚಯ ಅಷ್ಟೇ ಇತ್ತು........ ಆತನೇ ಕೈ ಮುಗಿದ "ನಮಸ್ಕಾರ ಸರ್, ನಾಳಿನ ಸನ್ಮಾನ ಕಾರ್ಯಕ್ರಮ ನೆನಪಿದೆ ತಾನೆ.?"...... ಆಗ ನೆನಪಾಯ್ತು ನನಗೆ, ನಾಳೆ ಸನ್ಮಾನ ಕಾರ್ಯಕ್ರಮದ ವಿಷ್ಯ....... "ನಾಳೆ ಮಧ್ಯಾನ್ಹ ನನ್ನ ಮನೆಯಲ್ಲಿ ಪೂಜೆ ಇದೆ. ಬರೋದು ಕಷ್ಟ ಆಗಬಹುದು" ಎಂದೆ......... "ಇದ್ಯೇನ್ ಸಾರ್, ನಿಮಗೆ ಸನ್ಮಾನ ಮಾಡ್ತಾ ಇರೋರು ಈ ಊರಿನ ಎಮ್. ಎಲ್.ಎ ಸಾಹೇಬರು,ನಿಮಗೆ ಒಳ್ಳೆಯ ಹೆಸರು ಬರತ್ತೆ ಸರ್..... ಅದರಲ್ಲೂ ನಿಮ್ಮ ಮನೆ ಪೂಜೆ ಮಧ್ಯಾನ್ಹ ತಾನೆ?... ಸನ್ಮಾನ ಕಾರ್ಯಕ್ರಮ ಹನ್ನೊಂದಕ್ಕೆ ಮುಗಿದುಹೋಗತ್ತೆ ಸರ್..... ಬೆಳಿಗ್ಗೆ ನಿಮ್ಮ ಮನೆಗೆ ಕಾರು ಕಳಿಸ್ತೇನೆ ಸರ್" ಎಂದ ಆತ....... ನಾನು "ಆಯ್ತು, ಕಳ್ಸಿ ನೋಡೋಣ" ಎನ್ನುತ್ತಾ ಸೈಕಲ್ ತುಳಿದೆ........ ಕೋಳಿ ಸಾರು ರೆಡಿಯಾಗಿರಬಹುದು ಎಂದು ಮುನಿಯಮ್ಮನ ಮನೆ ಕಡೆ ಹೊರಟೆ......

     ನನ್ನ ಸೈಕಲ್ ಬೆಲ್ ಕೇಳಿ ಆಕೆ ಒಂದು ಟಿಫಿನ್ ಬಾಕ್ಸ್ ಹಿಡಿದು ಬಂದಳು...... ಮುಖದಲ್ಲಿ ಇನ್ನೂ ಸಿಟ್ಟಿತ್ತು ಎನಿಸತ್ತೆ....... ನಾನು "ನಾಳೆ ಬೆಳಿಗ್ಗೆ ಬೇಗನೇ ಬಾ..... ಕೆಲ್ಸ ಇದೆ ಮನೆಯಲ್ಲಿ" ಎಂದು ಟಿಫಿನ್ ಬಾಕ್ಸ್ ತೆಗೆದು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿದೆ..... ಮುನಿಯಮ್ಮ ಏನೂ ಮಾತಾಡಲಿಲ್ಲ..... ನಾನು ಮತ್ತೆ ಅವಳನ್ನು ಮಾತನಾಡಿಸುವ ಧೈರ್ಯ ಮಾಡಲಿಲ್ಲ...... ಮನೆ ಕಡೆ ಹೊರಟೆ..... ಮನೆ ತಲುಪಿದವನೇ ಟಿಫಿನ್ ಬಾಕ್ಸ್ ಇದ್ದ ಪ್ಲಾಸ್ಟಿಕ್ ಚೀಲವನ್ನು ಮನೆ ಹೊರಗೆ ಇದ್ದ ಗೂಡಿನಲ್ಲಿ ಇಡುವಾಗ ಮಗ ಸೊಸೆ ಇಬ್ಬರೂ ಹೊರಗೆ ಬಂದರು.....
 " ಏನಪ್ಪ ಅದು..? " ಕೇಳಿದ ಮಗ......
" ಏನಿಲ್ಲ, ಸುಮ್ನೆ" ಎಂದು ಬಾಕ್ಸ್ ಅಲ್ಲೇ ಇಟ್ಟೆ...... ಮಗನಿಗೆ ಗೊತ್ತಾಯ್ತು ಎನಿಸತ್ತೆ..... " ಅಪ್ಪಾ, ಇಷ್ಟೆಲ್ಲಾ ಆದ ಮೇಲೂ ನಿಮಗೆ ಅವುಗಳ ಮೇಲೆ ಕರುಣೇನಾ.?, ಏನು ಹೇಳಲಿ ಅಪ್ಪಾ ನಿಮಗೆ,,,,, ನಿಮಗೆ ಮನಸ್ಸು ಎಂಬುದೇ ಇಲ್ಲವಾ..?" ಎಂದವನೇ ಸೊಸೆಯನ್ನು ಕರೆದುಕೊಂಡು ಒಳಕ್ಕೆ ಹೋದ..... ಸೊಸೆಯ ಕಣ್ಣಲ್ಲಿ ನೀರಿತ್ತು..... ನಾನು ಸುಮ್ಮನೆ ಹೋಗಿ ನನ್ನ ರೂಮಿನಲ್ಲಿ ಮಲಗಿದೆ. ಊಟ ಮಾಡುವ ಮನಸ್ಸಿರಲಿಲ್ಲ......

    ಮಗ್ಗಲು  ಬದಲಿಸಿ ಬದಲಿಸಿ ಮಲಗಿದವನಿಗೆ ಯಾವಾಗ ನಿದ್ದೆ ಹತ್ತಿತ್ತೋ ತಿಳಿಯದು, ಎದ್ದಾಗ ಆರು ಗಂಟೆಯಾಗಿತ್ತು...... ಮುಖ ತೊಳೆದೆ...... ದೇವರಿಗೆ ದೀಪ ಹಚ್ಚಿದೆ...... ಅದೂ ಇದು ಕೆಲಸ ಮುಗಿಸಿದಾಗ ಗಂಟೆ ಎಂಟಾಯಿತು...... ಸ್ವಲ್ಪವೇ ಊಟ ಮಾಡಿ, ನನ್ನ ರೂಮಿನ ಮೂಲೆಯಲ್ಲಿದ್ದ  ಚಿಕ್ಕ ಕಾಗದದ ಪೊಟ್ಟಣ ಕಿಸೆಯಲ್ಲಿ ಹಾಕಿಕೊಂಡೆ..... ಹೊರಗೆ ಬರುವಾಗ ಮಗ ’ಎಲ್ಲಿಗೆ .?’ ಎನ್ನುವ ಹಾಗೆ ನೋಡಿದ..... ನಾನು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ...... ’ಮಗನೇ, ನೀನು ಒಂದು ವರ್ಷ ಪಟ್ಟ ನೋವಿಗೆ ಇಂದು ಕೊನೆ ಹಾಡುತ್ತೇನೆ.’ ಎಂದು ಮನಸ್ಸಿನಲ್ಲೇ ಎಂದುಕೊಂಡು ಹೊರಬಿದ್ದೆ...... ಟೈಮ್ ನೋಡಿದೆ, ಹತ್ತು ಗಂಟೆ.....  ಗೂಡಿನಲ್ಲಿ ಇಟ್ಟಿದ್ದ ಟಿಫಿನ್ ಬಾಕ್ಸ್ ತೆಗೆದುಕೊಂಡೆ..... ಸೈಕಲ್ ತುಳಿದೆ.....

        ಆ ಜಾಗಕ್ಕೆ ಸುಮಾರು ಅರ್ಧ ಘಂಟೆ ಸೈಕಲ್ ತುಳಿಯಬೇಕು..... ಯಾರೂ ಸಿಗಲಿಲ್ಲ ರಸ್ತೆಯಲ್ಲಿ..... ಅದೇ ತಿರುವು.... ಪಕ್ಕದಲ್ಲಿ ಕಸದ ತೊಟ್ಟಿ. ಸೈಕಲ್ ನಿಲ್ಲಿಸಿದೆ. ಬೆಲ್ ಮಾಡಿದೆ..... ಬಂತು ಸದ್ದು..... ಬೌವ್..ಬೌವ್... ಬಾಲ ಅಲ್ಲಾಡಿಸುತ್ತಾ ಬಂತು ಒಂದು ನಾಯಿ.... ಟಿಫಿನ್ ಬಾಕ್ಸ್ ಹೊರತೆಗೆದೆ..... ಒಂದು ತುಂಡನ್ನ ನಾಯಿಗೆ ಎಸೆದೆ.... "ಬೌವ್.. ಬೌವ್" ಜೋರಾಗಿ ಕೂಗಿತು ನಾಯಿ..... ಅದು ತನ್ನ ಸಹಪಾಟಿಗಳನ್ನು ಕರೆಯುತ್ತಿತ್ತು....  ನನಗೂ ಅದೇ ಬೇಕಿತ್ತು.... ನಾನು ಎಸೆದ ತುಂಡನ್ನ ಮೂಸಿದ ನಾಯಿ ನಾಲಿಗೆ ಹೊರಹಾಕಿ ನೆಕ್ಕಿತು.... ರುಚಿ ಆಗಿತ್ತು ಎನಿಸತ್ತೆ....ಇನ್ನೂ ಜೋರಾಗಿ ಬೊಗಳಿತು...... ಬೌವ್... ಬೌವ್... ಬೌವ್... ಅದೆಲ್ಲಿತ್ತೋ ನಾಯಿಯ ಹಿಂಡು..... ಓಡುತ್ತಾ ಬಂದವು..... ಅವೆಲ್ಲಾ ನನ್ನನ್ನೇ ಗುರುಗುಟ್ಟಿ ನೋಡಿದವು.....

     ನಾನು ಯಾವಾಗಲೂ ನಾಯಿಗೆ ಬಿಸ್ಕಿಟ್ ಹಾಕುತ್ತಿದ್ದೆ..... ಹಾಗಾಗಿ ನಾನು ಅವಕ್ಕೆ ಪರಿಚಿತ ಮುಖ...... ನನ್ನ ಕಣ್ಣು ಹುಡುಕುತ್ತಿತ್ತು..... ಎಲ್ಲಾ ನಾಯಿಯನ್ನೂ ಗಮನ ಇಟ್ಟು ನೋಡಿದೆ.... ಅವುಗಳ ಕಿರುಚಾಟ ಜೋರಾಗಿತ್ತು...... ನಾನು ಹುಡುಕುತ್ತಲೇ ಇದ್ದೆ...... ಆಗ ಬಂತು ಒಂದು ನಾಯಿ..... ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬೆಲ್ಟ್ ಇತ್ತು..... ಬಾಲ ಅಲ್ಲಾಡಿಸುತ್ತಾ ಬಂತು..... ನನ್ನ ಕೈ ಸಾವಕಾಶವಾಗಿ ಕಿಸೆಯಲ್ಲಿದ್ದ ಪೊಟ್ಟಣ ತೆಗೆಯಿತು...... ಪೊಟ್ಟಣ ಬಿಚ್ಚಿ ಕೋಳಿ ಸಾರಿಗೆ ಹಾಕಿ ಕಲಸಿದೆ..... ಕಲಸುತ್ತಾ ಇರುವಾಗ ನನ್ನ ಕಣ್ಣಲ್ಲಿ ನೀರು ಸುರಿಯುತ್ತಿತ್ತು..... ಕಲಸಿದೆ ಕೋಳಿ ತುಂಡುಗಳನ್ನು ಒಂದೊಂದೇ ನಾಯಿಗಳ ಕಡೆ ಎಸೆದೆ..... ಮೊದಲು ಬಂದಿದ್ದೇ ಕೆಂಪು ಬೆಲ್ಟ್ ನಾಯಿ..... ನಂತರ ಗುಂಪಿನಲ್ಲಿದ್ದ ಎಲ್ಲಾ ನಾಯಿಗಳೂ ತಿಂದವು..... ನನ್ನ ಕಣ್ಣುಗಳು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿದ್ದವು..... ಅದಕ್ಕೆ ರುಚಿ ಸಿಕ್ಕಿತ್ತು ಎನಿಸತ್ತೆ..... ಇನ್ನೂ ಬೊಗಳಿತು.... 

   ನಾನು ಬಾಕ್ಸ್ ನಲ್ಲಿದ್ದಾ ಎಲ್ಲಾ ತುಂಡುಗಳನ್ನೂ ಎಸೆದೆ..... ಮುಗಿಬಿದ್ದು ತಿಂದವು.... ಆರಂಭದಲ್ಲಿ ತಿನ್ನುವಾಗಿನ ಹುರುಪು ಇರಲಿಲ್ಲ ಈಗ..... ನನ್ನ ಕಣ್ಣುಗಳಲ್ಲಿ ಕ್ರೌರ್ಯ ತುಂಬಿತ್ತು...... ಕೆಂಪು ಬೆಲ್ಟ್ ನಾಯಿ ನೆಲದ ಮೇಲೆ ಬಿತ್ತು..... ಕೂಡಲೇ ಎಲ್ಲಾ ನಾಯಿಗಳು ವಿಚಿತ್ರವಾಗಿ ಕೂಗುತ್ತಾ ಬಿದ್ದವು.... ನನಗೆ ಗೊತ್ತಿತ್ತು..... ಇನ್ನು ಕೇವಲ ನಿಮಿಷಗಳಷ್ಟೇ ಇವುಗಳ ಆಯುಷ್ಯ ಎಂದು..... ನನ್ನ ಕಣ್ಣು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿತ್ತು..... ಕೆಳಕ್ಕೆ ಬಿದ್ದ ನಾಯಿಯ ಬಾಯಿಯಿಂದ ನೊರೆ ಬರಲು ಶುರು ಆಯಿತು..... ನನ್ನ ಮುಷ್ಟಿ ಬಿಗಿಯಿತು.....
 ನಾಯಿ ಕಾಲುಗಳನ್ನು ಬಡಿಯಲು ಶುರು ಮಾಡಿತು......
ಅಂದು.....ಅವಳೂ ತನ್ನ ಕೈ ಕಾಲು ಬಡಿಯುತ್ತಿದ್ದಳು....
ಇಂದು.....ಈ ನಾಯಿಯ ಕಣ್ಣು ನನ್ನನ್ನೇ ನೋಡುತ್ತಿದ್ದವು..
ಅಂದು.....ಅವಳ ಕಣ್ಣು ನನ್ನನ್ನೇ ನೋಡುತ್ತಿದ್ದವು..ಸಹಾಯಕ್ಕಾಗಿ...
ನಾನು ಕಣ್ಣು ಮುಚ್ಚಿದೆ.......

     ಒಂದನೇ ತರಗತಿ ಓದುವ ಮೊಮ್ಮಗಳನ್ನು ಶಾಲೆಯಿಂದ ಕರೆದುತರುವುದೇ ನನ್ನ ನಿವ್ರತ್ತಿ ಜೀವನದ ಪ್ರಮುಖ ಕೆಲಸವಾಗಿತ್ತು.... ಅದನ್ನು ನಾನು ತುಂಬಾ ಪ್ರೀತಿಯಿಂದ ಮಾಡುತ್ತಿದ್ದೆ..... ಮೊಮ್ಮಗಳ ಶಾಲೆ ಬಿಡುವ ಒಂದು ತಾಸು ಮೊದಲೇ ನಾನು ಗೇಟಿನ ಬಳಿ ಕಾಯುತ್ತಿದ್ದೆ..... ಅವಳಿಗಾಗಿ ಚೊಕೊಲೇಟ್ ಹಿಡಿದಿರುತ್ತಿದ್ದೆ..... ಶಾಲೆ ಬಿಟ್ಟವಳೇ ಓಡಿ ಬಂದು ಚಾಕೊಲೇಟ್ ಹುಡುಕುತ್ತಿದ್ದಳು..... ಸೈಕಲ್ ಮೇಲೆ ಕುಳಿತು ಹೊರಟೆವು ಎಂದರೆ ಅವಳಿಗೆ ಆನೆಯ ಮೇಲೆ ಸವಾರಿ ಮಾಡಿದ ಹಾಗೆ...... 
    ಅವಳಿಗೆ ನಾಯಿ ಎಂದರೆ ತುಂಬಾ ಪ್ರೀತಿ..... ಅದಕ್ಕಾಗಿಯೇ ಅಮ್ಮನಿಂದ ಹಣ ಪಡೆಯುತ್ತಿದ್ದಳು..... ಅದರಿಂದ ಬಿಸ್ಕಿಟ್ ತೆಗೆದುಕೊಂಡು ದಾರಿಯಲ್ಲಿ ಸಿಕ್ಕ ನಾಯಿಗಳಿಗೆ ತಿನ್ನಿಸುವುದು ಅವಳ ಇಷ್ಟದ ಕೆಲಸವಾಗಿತ್ತು..... ಅದರಲ್ಲೂ ಅವಳ ಶಾಲೆಯ ತಿರುವಿನಲ್ಲಿ ಸಿಗುವ ಕೆಂಪು ಬೆಲ್ಟ್ ನಾಯಿ ಕಂಡರೆ,ಅದಕ್ಕೆ ಎರಡು ಬಿಸ್ಕೆಟ್ ಹೆಚ್ಚು..... ಅವಳ ಈ ಖುಶಿ ನೋಡಿ ನನಗೂ ಸಂತೋಷವಾಗುತ್ತಿತ್ತು....

    ಸರಿಯಾಗಿ ವರ್ಷದ ಹಿಂದೆ..... ಅವಳ ಶಾಲೆ ಮುಗಿದು ಕರೆದುಕೊಂಡು ಬರುತ್ತಿದ್ದೆ..... ಅವಳಿಗೆ ಇಷ್ಟವಾದ ಬಿಳಿಯ ಡ್ರೆಸ್ ಹಾಕಿದ್ದಳು..... ಅಂದು ಮೂರು ಬಿಸ್ಕೇಟ್ ಪ್ಯಾಕ್ ಬೇಕು ಅಂದಳು..... ತೆಗೆದುಕೊಟ್ಟೆ..... ಎಂದಿನಂತೆ ಎಲ್ಲಾ ನಾಯಿಗಳಿಗೂ ಹಾಕುತ್ತಾ ಬಂದವಳು, ತಿರುವಿನಲ್ಲಿದ್ದ ಕೆಂಪು ಬೆಲ್ಟ್ ನಾಯಿ ನೋಡಿ ಸೈಕಲ್ ನಿಲ್ಲಿಸಲು ಹೇಳಿದಳು..... ಒಂದು ವರ್ಷದಿಂದ ನೋಡುತ್ತಾ ಬಂದಿದ್ದರಿಂದ ನನಗೂ ಆ ನಾಯಿ ಪರಿಚಿತವಾಗಿತ್ತು..... ಮೊಮ್ಮಗಳು ಒಂದು ಬಿಸ್ಕೇಟ್ ಪ್ಯಾಕ್ ತೆಗೆದುಕೊಂಡು ಇಳಿದಳು..... ಕೆಂಪು ಬೆಲ್ಟ್ ನಾಯಿ ಇವಳ ಹತ್ತಿರ ಬಂತು..... ಇವಳಂತೂ ಖುಶಿಯಿಂದ ಒಂದೊಂದೇ ಬಿಸ್ಕೀಟ್ ಹಾಕುತ್ತಿದ್ದಳು....

      ನಾನು ಸ್ವಲ್ಪವೇ ದೂರದಲ್ಲಿದ್ದೆ..... ಸುಮಾರು ನಾಲ್ಕೈದು ಬಿಸ್ಕೇಟ್ ತಿಂದ ನಾಯಿ ಇನ್ನೂ ಬೊಗಳಲು ಶುರು ಮಾಡಿತು.... ಪಕ್ಕದಲ್ಲೇ ಕಸದ ತೊಟ್ಟಿಯಲ್ಲಿ ಚಿಂದಿ ತಿನ್ನುತ್ತಿದ್ದ ನಾಯಿಗಳೂ ಬಂದವು...... ಮೊಮ್ಮಗಳು ಖುಶಿಯಿಂದ ಅವಕ್ಕೂ ಬಿಸ್ಕೇಟ್ ಹಾಕಿದಳು..... ಎನೆನ್ನಿಸಿತೋ ಕೆಂಪು ಬೆಲ್ಟ್ ನಾಯಿಗೆ.... ಸೀದಾ ಮೊಮ್ಮಗಳ ಕೈಯಿಗೆ ಬಾಯಿ ಹಾಕಿತು...... ಅವಳು ಕೂಗಿ ಬಿಟ್ಟಳು..... ನಾನು ಓಡಿದೆ..... ಆ ನಾಯಿ ಕೈ ಬಿಡಲೇ ಇಲ್ಲ..... ಅದರ ಜೊತೆಗಿದ್ದ ನಾಯಿಗಳೂ ಮೊಮ್ಮಗಳ ಕಾಲು ಕಚ್ಚಿಯೇ ಬಿಟ್ಟವು..... ನಾನು ಕೋಲು ಹುಡುಕುತ್ತಿದ್ದೆ..... ಸಿಗಲಿಲ್ಲ..... ಅವುಗಳ ಹತ್ತಿರ ಹೋದೆ..... 

    ಇನ್ನೂ ನಾಲ್ಕಾರು ನಾಯಿ ಓಡಿ ಬಂದವು..... ನನ್ನನ್ನು ನನ್ನ ಮೊಮ್ಮಗಳ ಬಳಿ ಹೋಗದಂತೆ ಅಡ್ದಗಟ್ಟಿದವು.... ನನ್ನನ್ನೂ ಕಚ್ಚಿದವು..... ಆ ಕೆಂಪು ಬೆಲ್ಟ್ ನಾಯಿ ನನ್ನ ಮೊಮ್ಮಗಳ ಹೊಟ್ಟೆಗೆ ಕಚ್ಚಿತ್ತು..... ಅವಳ ಕೂಗು ಕೇಳಿ ಅಕ್ಕ ಪಕ್ಕದವರೂ ಬಂದರು. ಇನ್ನೂ ಸಿಟ್ಟಿಗೆದ್ದ ನಾಯಿ ಅವಳನ್ನ ಎಳೆದಾಡಿತು..... ಅವಳ ಕಣ್ಣು ನನ್ನನ್ನೇ ನೋಡುತ್ತಿತ್ತು.... ಸಹಾಯಕ್ಕಾಗಿ ಕೂಗುತ್ತಿತ್ತು... ನಾನು ಅಸಹಾಯಕನಾಗಿದ್ದೆ........ ಶಾಕ್ ಗೆ ಒಳಗಾಗಿದ್ದೆ..... ಆ ನಾಯಿ ನನ್ನ ಮೊಮ್ಮಗಳನ್ನು ಬಿಟ್ಟಾಗ ಅವಳು ತೊಟ್ಟಿದ್ದ ಬಿಳಿ ಬಣ್ಣದ ಡ್ರೆಸ್ ಕೆಂಪಾಗಿತ್ತು....... ಎಲ್ಲರೂ ಸೇರಿ ನಾಯಿಯಿಂದ ಬಿಡಿಸುವ ಹೊತ್ತಿಗೆ ನನ್ನ ಮೊಮ್ಮಗಳ ಜೀವ ಹೊರಟು ಹೋಗಿತ್ತು..... ಅವಳ ಕಣ್ಣು ತೆರೆದೇ ಇತ್ತು....... ನನ್ನನ್ನೇ ನೋಡುತ್ತಿತ್ತು...... 

ಇವತ್ತೂ...... ಈ ನಾಯಿಯ ಕಣ್ಣು ನನ್ನನ್ನೇ ನೋಡುತ್ತಿದೆ... ಸಹಾಯಕ್ಕಾಗಿಯಂತೂ ಅಲ್ಲ ...... ಈಗ ನಾಯಿ ನಿಸ್ಚಲವಾಗಿತ್ತು........ ಅದರ ಸುತ್ತಲೂ ಹತ್ತಕ್ಕೂ ಹೆಚ್ಚಿಗೆ ನಾಯಿ ಸತ್ತಿತ್ತು..... ನನ್ನ ಕಣ್ಣಲ್ಲಿ ನೀರು ಹರಿಯುತ್ತಿತ್ತು..... ಮೊಮ್ಮಗಳು ನೆನಪಾಗುತ್ತಿದ್ದಳು...... ಅವಳು ಸತ್ತು ಸರಿಯಾಗಿ ವರ್ಷಕ್ಕೆ ಈ ನಾಯಿಯನ್ನು ಕೊಂದಿದ್ದೆ ನಾನು...... ನಾಳೆ ನಡೆಯುವ ಅವಳ ವರ್ಷದ ಪೂಜೆಗೆ ಸರಿಯಾದ ಅರ್ಪಣೆ ನೀಡಿದೆ ಎನ್ನುವ ಭಾವ ನನಗೆ ಬಂದಿತ್ತು..... ಕೈಗೆ ಸಿಕ್ಕ ದೊಡ್ಡ ಕಲ್ಲಿನಿಂದ ಆ ಕೆಂಪು ಬೆಲ್ಟ್ ನಾಯಿಯ ಮೇಲೆ ಎಸೆದೆ..... ಮಿಸುಕಾಡಲಿಲ್ಲ ಅದು.... ಮನಸ್ಸು ಶಾಂತವಾಗಿತ್ತು..... ಮನೆ ಕಡೆ ಸೈಕಲ್ ತುಳಿದೆ......

    ನೆಮ್ಮದಿಯ ನಿದ್ದೆ ಬಂದಿತ್ತು..... ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮುಗಿಸಿದೆ..... ದೇವರಿಗೆ ಮತ್ತು ಪಕ್ಕದಲ್ಲೇ ಇದ್ದ ಮೊಮ್ಮಗಳ ಫೋಟೊಗೆ ಕೈ ಮುಗಿದೆ..... ಅವಳ ಮುಖ ಶಾಂತವಾಗಿತ್ತು..... ಆಗ ಮಗ ನನ್ನ ಹತ್ತಿರ ಬಂದು ನಿಂತ "ರಾತ್ರಿ ಎಲ್ಲಿಗೆ ಹೋಗಿದ್ರೀ ಅಪ್ಪಾ..? .. ಈಗ ಬಂದ ಮುನಿಯಮ್ಮ ಹೇಳಿದ್ರು ನೀವು ಆ ನಾಯಿಗಳಿಗೆ ಕೋಳಿ ಸಾರು ಮಾಡಿಸಿಕೊಂಡು ಹೋದ ವಿಷ್ಯ..... ನಿಮ್ಮ ಬಗ್ಗೆ ನನಗೆ ನಾಚಿಕೆಯಾಗತ್ತೆ ಅಪ್ಪಾ.. ನಿಮ್ಮದೇ ಮೊಮ್ಮಗಳನ್ನು ಕೊಂದ ನಾಯಿಗಳಿಗೆ ಸತ್ಕಾರ ಮಾಡಲು ಹೋಗಿದ್ರಲ್ಲಾ ಅಪ್ಪಾ...? ಏನೆನ್ನಲೀ ನಿಮ್ಮ ಮನಸ್ಸಿಗೆ...?" ಇನ್ನೂ ಹೇಳುವವನಿದ್ದ....   ಆಗಲೇ ಪಕ್ಕದ ಮನೆಯ ಹುಡುಗ ಓಡುತ್ತಾ ಬಂದ .. ಆತ ನನ್ನ ಮೊಮ್ಮಗಳ ಕ್ಲಾಸ್ ಮೇಟ್, " ಅಜ್ಜಾ , ನಮ್ಮ ಶ್ವೇತಾಳನ್ನು ಕಚ್ಚಿದ ನಾಯಿ ಸತ್ತು ಹೋಗಿದೆಯಂತೆ..... ನನ್ನ ಅಂಕಲ್ ಹೇಳ್ತಾ ಇದ್ರು"ಎಂದ...... ನನ್ನ ಮಗ ನನ್ನನ್ನೇ ನೋಡುತ್ತಿದ್ದ..... ಸೊಸೆ ಓಡಿ ಬಂದಳು.   

  ಆಷ್ಟರಲ್ಲೇ ಹೊರಗಡೆ ಕಾರು ಬಂದ ಸದ್ದಾಯಿತು..... ಡ್ರೈವರ್ ಒಳಕ್ಕೆ ಬರುತ್ತಾ " ಸರ್, ಕಾರ್ ಬಂದಿದೆ ನಿಮ್ಮನ್ನು ಸನ್ಮಾನಕ್ಕೆ ಕರೆದೊಯ್ಯಲು..... ಅಂದಹಾಗೆ ನೀವು ವರ್ಷ ಪೂರ್ತಿ ಯಾವ ನಾಯಿಯನ್ನು ಪಾಲಿಕೆಯವರು ಕೊಲ್ಲಬಾರದು ಎಂದು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದೀರೋ, ಅದಕ್ಕಾಗಿಯೇ ನಿಮಗೆ ಪ್ರಾಣಿ ದಯಾ ಸಂಘದ ವತಿಯಿಂದ ಇವತ್ತು ಸನ್ಮಾನ ನಡೆಯಲಿಕ್ಕಿದೆಯೋ ಅದೇ ನಾಯಿಯನ್ನು ಯಾರೋ ಸಾಯಿಸಿದ್ದಾರೆ ಸಾರ್...... ಚಿಕನ್ ಗೆ ವಿಷ ಸೇರಿಸಿ ಹಾಕಿದ್ದಾರೆ ಸಾರ್..... ಸುಮಾರು ಇಪ್ಪತ್ತು ನಾಯಿ ಸತ್ತಿದೆ..... ಅದಿರಲಿ ಸಾರ್, ನಾವು ಹೊರಡೋಣ.... ಲೇಟ್ ಆಗತ್ತೆ ಸರ್" ಎಂದ.......


   

Sep 17, 2012

ಪ್ಲೀಸ್..... ಬೇಡ........!!!



ಆಫೀಸಿನ ಕಿರಿಕಿರಿಯಿಂದ ಮನೆಗೆ ಬಂದರೂ ಮನೆಯವಳ ಕಿರುಕುಳ ತಪ್ಪಲಿಲ್ಲ.... ವಿಷಯ ಚಿಕ್ಕದೇ ಆಗಿದ್ದರೂ ಅವಳ ಹಠದಿಂದಾಗಿ ನನಗೆ ಸಿಟ್ಟು ಬಂದಿತ್ತು....  ಈ ಸಾರಿ ಊರಿಗೆ ಹೋಗೋದು ಬೇಡ, ಮುಂದಿನ ಸಾರಿ ಹೋಗೋಣ ಎಂದರೂ ಕೇಳಿರಲಿಲ್ಲ ಅವಳು....  ಮನೆಯಲ್ಲಿ ಕುಳಿತಿರಲು ಮನಸ್ಸಾಗದೇ ಹೊರಗೆ ಬಂದೆ....  ಬೈಕ್ ಕೀ ಜೇಬಿನಲ್ಲೇ ಇತ್ತು....  ಬೈಕ್ ನ ಕಣ್ಣಿಗೆ ಚುಚ್ಚಿದೆ....  ಸಿಟ್ಟಿನಿಂದಲೇ ಕಿಕ್ ಹೊಡೆದೆ....  ಬೈಕ್ ತಿರುಗಿಸುತ್ತಿರುವಾಗಲೇ ನನ್ನವಳು ಹೊರಕ್ಕೆ ಓಡಿ ಬಂದಳು....  ಯಾಕೋ, ಅವಳನ್ನು ನೋಡಲೂ ಮನಸಾಗಲಿಲ್ಲ....  ಆಕ್ಸಿಲೇಟರ್ ಹೆಚ್ಚಿಸಿದೆ....  ಏನೂ ಕೆಲಸವಿರದೇ ಇದ್ದರೂ, ಸುಮ್ಮನೆ ಒಂದು ಡ್ರೈವ್ ಗೆ ಹೋಗಿ ಬರೋಣ ಎನಿಸಿತ್ತು....  ಮನೆಯಲ್ಲೇ ಇದ್ದರೆ ಜಗಳವಾಗಬಹುದು ಎಂಬ ಭಯವಿತ್ತು....  ಅದಕ್ಕೆ ಹೊರಬಿದ್ದಿದ್ದೆ....  ಹೊರಗೇನೋ ಬಂದಿದ್ದೆ....  ಎಲ್ಲಿಗೆ ಹೋಗೋದು ಅಂತ ಗೊತ್ತಿರಲಿಲ್ಲ....  ಸಿಟಿ ಕಡೆ ಹೋಗಲು ಮನಸ್ಸಿರಲಿಲ್ಲ, ಹೋದರೆ ಯಾರಾದರೂ ಪರಿಚಯದವರು ಸಿಕ್ಕಾರು ಎನ್ನುವ ಅನುಮಾನ ಇತ್ತು....  ಇನ್ನೊಂದು ದಾರಿ ಹಿಡಿದೆ....... 
  
      ಒಂದು ಅರ್ಧ ತಾಸು ಡ್ರೈವ್ ಮಾಡಿ ಬರೋಣ ಎಂದು ಹೊರಟಿದ್ದೆ.... ಸಿಟ್ಟು, ಬೇಸರದ ಭರದಲ್ಲಿ ಎಷ್ಟು ದೂರ ಹೋಗಿದ್ದನೋ ತಿಳಿದಿರಲಿಲ್ಲ.... ಊರಿನ ಸ್ಮಶಾನವನ್ನೂ ದಾಟಿ ಬಂದಿದ್ದೆ.... ಒಂದು ಗದ್ದೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿದೆ.... ಸಾವಕಾಶವಾಗಿ ಒಂದು ಸಿಗರೇಟ್ ಎಳೆದೆ.... ದಮ್ ಬಿಡ್ತಾ ಬಿಡ್ತಾ ಮನಸ್ಸು ಸ್ತಿಮಿತಕ್ಕೆ ಬರ್ತಾ ಇತ್ತು.... ಇನ್ನೊಂದು ಸಿಗರೇಟಿಗೆ ಬೆಂಕಿ ಇಟ್ಟು ಬೈಕ್ ಸ್ಟಾರ್ಟ್ ಮಾಡಿದೆ.... ಮನೆ ಕಡೆ ತಿರುಗಿಸಿದೆ.... ಆಗಲೇ ಕತ್ತಲಾಗುತ್ತಿತ್ತು.... ಈ ತಲೆಬಿಸಿಯಲ್ಲಿ ಒಂದು ವಿಶ್ಯ ಮರೆತೇ ಬಿಟ್ಟಿದ್ದೆ.... ನನಗೆ ಸ್ಮಶಾನ ಎಂದರೆ ತುಂಬಾ ಭಯ.... ಈಗ ಸ್ಮಶಾನವನ್ನೂ ದಾಟಿ ಬಂದಿದ್ದೆ.....  ಮೊದಲೇ ಹೆದರಿಕೆ....   ಈಗ ಏನು ಮಾಡುವುದೆಂದು ತಿಳಿಯಲಿಲ್ಲ....   ದೆವ್ವ, ಭೂತಗಳನ್ನು ನೋಡದೇ ಇದ್ದರೂ ಅದರ ಬಗ್ಗೆ ಕೇಳಿಯೇ ಭಯ ಇತ್ತು....   ನೋಡು ನೋಡುತ್ತಲೇ ಸ್ಮಶಾನ ಬಂದೇ ಬಿಟ್ಟಿತ್ತು....  ಸ್ವಲ್ಪ ಹೊತ್ತು ನಿಲ್ಲಿಸಿದೆ, ಯಾರಾದರೂ ಸಿಕ್ಕರೆ ಹತ್ತಿಸಿಕೊಂಡು ಹೋಗೋಣ ಎನಿಸಿತ್ತು....  ಅವರಿಗೆ ಪಿಕ್ ಅಪ್ ಕೊಟ್ಟು ಉಪಕಾರ ಮಾಡುವ ಯೋಚನೆ ಇಲ್ಲದಿದ್ದರೂ, ಯಾರಾದರೂ ಸಂಗಡ ಇದ್ದರೆ ನನ್ನ ಹೆದರಿಕೆ ಕಡಿಮೆ ಆಗುತ್ತದಲ್ಲಾ ಎನ್ನುವ ದೂರುದ್ದೇಶ ನನ್ನದಾಗಿತ್ತು.... 

ಸುಮಾರು ಹೊತ್ತು ಕಾದೆ.... ಯಾರೂ ಬರುವ ಲಕ್ಷಣ ಕಾಣಲಿಲ್ಲ....  ಇದೆಲ್ಲಾ ಬೇಕಿತ್ತಾ.? ಹೆಂಡತಿಯ ಮೇಲಿನ ಸಿಟ್ಟು ಇದನ್ನೆಲ್ಲಾ ಮಾಡಿಸಿತು....  ಹೆಂಡತಿಯ ಮುಖ ನೆನಪಿಗೆ ಬಂತು....  ಇನ್ನೂ ಸಿಟ್ಟು ಬಂತು....  ಅದಿರಲಿ, ಈ ಸಂಕಟದಿಂದ ಪಾರಾಗುವುದು ಹೇಗೆಂದು ತಿಳಿಯಲಿಲ್ಲ....  ದೇವರ ಹಾಡು ಹಾಡುತ್ತಾ ಹೋದರಾಯಿತು ಎಂದುಕೊಂಡು ಹೊರಟೆ.... ದೇವರ ಹಾಡುಗಳನ್ನ ನೆನಪು ಮಾಡಿಕೊಂಡೆ....  " ಫೂಜ್ಯಾಯ ರಾಘವೇಂದ್ರಾಯ, ............" ಅರ್ಧ ಬರುತ್ತದೆ. " ದೇವರೆ ನೀನು ನಿಜವಪ್ಪ........" ಸುಮಾರಾಗಿ ಬರುತ್ತಿತ್ತು.... ಮೊದಲಿಗೆ ಗಣಪತಿಯ ಹಾಡಿನಿಂದಲೇ ಶುರು ಮಾಡೋಣ ಎನಿಸಿಕೊಂಡು " ಗಜಮುಖನೇ...." ಎಂದು ಶುರು ಮಾಡಿದ್ದೆ ಅಷ್ಟೇ, ಸ್ವಲ್ಪ ದೂರದಲ್ಲಿ ಒಬ್ಬ ಮನುಷ್ಯ ನಿಂತಿದ್ದ.... ಜೀವ ಬಂದ ಹಾಗಾಯಿತು.... ದೇವರ ಹಾಡು ಮರೆತೇ ಹೋಯಿತು....  ಆದರೂ ಮನಸ್ಸ ಮೂಲೆಯಲ್ಲಿ ದೇವರಿಗೆ ಧನ್ಯವಾದ ಹೇಳಿದೆ.... ಆತನ ಬಳಿ ಹೋಗಿ ನಾನೇ ಬೈಕ್ ನಿಲ್ಲಿಸಿದೆ....  ಟಿಪ್ ಟಾಪ್ ಆಗಿ ಇದ್ದ. ಜಾಕೆಟ್ ಹಾಕಿದ್ದ. ಕಳ್ಳನಾಗಿದ್ದರೆ ಎನಿಸಿತು, ದೆವ್ವಕ್ಕಿಂತ ಕಳ್ಳನೇ ಲೇಸು ಎನಿಸಿತು.... " ಬರ್ತೀರಾ ಸಾರ್.?" ಎಂದೆ.... " ಹೌದು, ಸ್ವಲ್ಪ ದೂರ ಅಷ್ಟೇ ಥ್ಯಾಂಕ್ಯೂ" ಎನ್ನುತ್ತಲೇ ಆತ ಬೈಕ್ ಹಿಂದೆ ಕುಳಿತ.... ಕೈಯಲ್ಲಿ ಒಂದು ಬ್ಯಾಗ್ ಇತ್ತು. ಅದಕ್ಕೆ ಸ್ಚಲ್ಪ ಕೆಸರು ಮೆತ್ತಿತ್ತು. ಎಲ್ಲಾದರೂ ಬಿದ್ದಿದ್ದನಾ...? ನಾನು ಕೇಳಲಿಲ್ಲ....  " ಎಲ್ಲಿಗೆ ಹೋಗಿದ್ರೀ ಸರ್..? " ಕೇಳಿದ ಆತ.... ನನಗೆ ಮಾತನಾಡುವ ಮೂಡ್ ಇರಲಿಲ್ಲ....  ಹೆಂಡತಿಯ ಮೇಲೆ ಸಿಟ್ಟು ಇನ್ನೂ ಕರಗಿರಲಿಲ್ಲ ಅಲ್ವಾ..?....  

" ಯಾಕೆ ಸರ್, ಏನಾಯ್ತು...? ಏನಾದ್ರೂ ಸಮಸ್ಯೇನಾ...? " ಆತ ಮಾತನಾಡುತ್ತಲೇ ಇದ್ದ.... ನಾನು ಉತ್ತರಿಸಲಿಲ್ಲ.... ’ನನ್ನ ತಲೆಬಿಸಿ ನನಗೆ. ಈತನದೊಂದು’ ಎನಿಸಿತು.....  "ಸಾರ್ , ನನಗನಿಸತ್ತೆ ನಾನು ನಿಮ್ಮ ಜೊತೆ ಬರೋದು ನಿಮಗೆ ಇಷ್ಟ ಇಲ್ಲ ಅನಿಸತ್ತೆ, ನನ್ನನ್ನು ಇಲ್ಲೇ ಬಿಡಿ, ನಾನು ನಡೆದೇ ಬರುತ್ತೇನೆ" ಎಂದ ಆತ....  ಯಾವಾಗ ಆತ ಇಳಿದುಹೋಗುತ್ತೇನೆ ಎಂದನೋ ಆಗ ನನ್ನ ಕಿವಿ ನೆಟ್ಟಗಾಯಿತು....  "ಹಾಗೆನಿಲ್ಲ ಸಾರ್, ಮನೆಯಲ್ಲಿ ಸ್ವಲ್ಪ ಕಿರಿಕಿರಿ, ಎಲ್ಲರ ಮನೆಯಲ್ಲಿ ಇದ್ದ ಹಾಗೆ" ಎಂದೆ.... " ಓ ಹೌದಾ, ಯಾರ ಜೊತೆ ಜಗಳ ..? ಕೇಳಿದ ಆತ.... ನನಗೆ ಹೇಳುವ ಮನಸ್ಸಿರಲಿಲ್ಲ.... ಆತನೇ ಮತ್ತೆ ಕೇಳಿದ.... "ಮನೆಯಲ್ಲಿ ಯಾರ್ಯಾರಿದ್ದರೆ ಸರ್.....?"    "ಹೆಂಡತಿ ಮತ್ತು ಮಗಳು" ಎಂದೆ ನಾನು.... "ಹಾಗಿದ್ರೆ ಹೆಂಡತಿಯ ಜೊತೆಗೆ ಜಗಳ ಅಲ್ವಾ..? " ಎಂದ ಆತ.... ನಾನು "ಹ್ಹೂ " ಎಂದೆ.... "ಇದು ಎಲ್ಲರ ಮನೆಯ ದೋಸೆ ಸರ್.... ಆದ್ರೆ ನಾವು ತುಂಬಾ ಮುಖ್ಯವಾದ ವಿಷಯ ಮರೆಯುತ್ತೇವೆ....." ಎಂದು ಪ್ರವಚನ ಶುರು ಮಾಡುವವನಿದ್ದ.... ಈ ದೆವ್ವದ ಹೆದರಿಕೆ ಒಂದು ಇಲ್ಲದಿದ್ದರೆ ಈತನನ್ನು ಅಲ್ಲೇ ಇಳಿಸಿಬಿಡುತ್ತಿದ್ದೆ.... ಒಲ್ಲದ ಮನಸ್ಸಿಂದ  " ಏನು...?" ಎಂದೆ.... ನನಗೆ ಈತನ ಪುರಾಣ ಕೇಳದೇ ಬೇರೆ ಉಪಾಯ ಇರಲಿಲ್ಲ.... 

" ನನ್ನ ಕಥೆಯೂ ಅದೇ ಆಗಿತ್ತು ಸರ್, ನಾನು, ನನ್ನ ಹೆಂಡತಿ, ಮೂರು ವರ್ಷದ ಮಗಳು....  ನಮ್ಮದು ಲವ್ ಮ್ಯಾರೇಜ್ ಸರ್. ನನಗಾಗಿ ತನ್ನ ಮನೆ, ತನ್ನವರನ್ನ ಬಿಟ್ಟು ಬಂದಿದ್ದಳು ಆಕೆ....  ಆಕೆಯ ಮನೆಯವರಿಗೆ ನಾನು ಬೇಡವಾಗಿದ್ದೆ.... ನನ್ನ ಜಾತಿ ಅವರ ಜಾತಿಗಿಂತ ಕೀಳಾಗಿತ್ತಂತೆ....  ನನ್ನನ್ನು ತುಂಬಾ ದ್ವೇಷಿಸುತ್ತಿದ್ದರು ಅವಳ ಮನೆಯವರೆಲ್ಲಾ.... ಆದರೂ ನಾವು ಮದುವೆಯಾದೆವು.... ಮದುವೆಯಾಗಿ ವರ್ಷಕ್ಕೇ ಮಗಳು ಬಂದಿದ್ದಳು....  ನನ್ನ ಕೆಲಸವೂ ಚೆನ್ನಾಗಿತ್ತು....  ಕೆಲವೊಮ್ಮೆ ಕೆಲಸದ ಪ್ರಯುಕ್ತ ನಾನು ದೂರದ ಊರಿಗೆ ಹೋಗಬೇಕಾಗುತ್ತಿತ್ತು....  ಆಗ ನನ್ನವಳು  ಒಬ್ಬಂಟಿಯಾಗುತ್ತಿದ್ದಳು....  ಅವಳಿಗೆ ತನ್ನ ಹೆತ್ತವರ ನೆನಪಾಗುತ್ತಿತ್ತೋ ಏನೊ.... ಅವರಿಗೆ ಫೋನ್ ಮಾಡಿದ್ದಾಳೆ.... ಅವರೂ ಸಹ ಮಾತನಾಡಿದ್ದಾಳೆ....  ಮೂರು ವರುಷದ ಧ್ವೇಷ ಕರಗಿತ್ತೋ ಎನೋ....  ಆದರೆ ಅವರಿಗೆ ನನ್ನ ಮೇಲಿನ ಕೋಪ ಹಾಗೆ ಇತ್ತು ಎನಿಸತ್ತೆ..... ಅದಕ್ಕಾಗಿಯೇ ನನ್ನವಳು ಈ ವಿಷಯ ಮುಚ್ಚಿಟ್ಟಳು..... 

  ಹೀಗೆ ತುಂಬಾ ದಿನದಿಂದ ನಡೆಯಿತ್ತಾ ಇತ್ತು ಎನಿಸತ್ತೆ....  ಒಂದಿನ ನಾನು ಆಫೀಸಿನ ಕಿರಿಕಿರಿಯಿಂದ ಬೇಸತ್ತು ಬೇಗನೇ ಮನೆಗೆ ಬಂದಿದ್ದೆ.... ಅವಳ ಮೊಬೈಲ್ ಗೆ ಕಾಲ್ ಬರ್ತಾ ಇತ್ತು..... ಅದನ್ನು ನಾನು ನೋಡಿದೆ, ’ ಮೈ ಡ್ಯಾಡ್’ ಎಂದಿತ್ತು.... ನನಗೆ ಗಾಬರಿ.....!!! ’ ಇದೇನಿದು...? ಇವರ್ಯಾಕೆ ಫೋನ್ ಮಾಡ್ತಾ ಇದಾರೆ...? ’ ಎನಿಸಿತು..... ಮೊದಲೇ ಆಫೀಸಿನ ಕಿರಿಕಿರಿ,ಇದರಲ್ಲಿ ಇವರ ಕಾಲ್ ಬಂದು ಇನ್ನೂ ಸಿಟ್ಟು ತರಿಸಿತ್ತು.....  ನನ್ನವಳು ಬಂದು ಕಾಲ್ ಡಿಸ್ಕನೆಕ್ಟ್ ಮಾಡಿದಳು...... "ರೀ,ನಿಮ್ಮ ಹತ್ತಿರ ಒಂದು ವಿಷ್ಯ ಹೇಳೊದಿತ್ತು" ಎಂದಳು..... ನಾನು "ಏನು ವಿಷ್ಯ" ಕೇಳಿದೆ.... ಇವಳ ತಂದೆ ಕಾಲ್ ಮಾಡೊದಕ್ಕೂ, ಇವಳು ಮಾತನಾಡುವುದಕ್ಕೂ ಏನಾದರೂ ಸಂಬಂಧ ಇರಬಹುದು ಎನಿಸಿತು.....  "ಇತ್ತೀಚಿಗೆ ನಾನೇ ಅಪ್ಪನಿಗೆ ಕಾಲ್ ಮಾಡಿದ್ದೆ, ಅಪ್ಪನಿಗೆ ನಮ್ಮ ಮೇಲೆ ಕೋಪ ಇಲ್ಲವಂತೆ........".... ಇನ್ನೇನೋ ಹೇಳುವವಳಿದ್ದಳು ಎನಿಸತ್ತೆ..... ನನ್ನ ಕೋಪ ಮಿತಿ ಮೀರಿತ್ತು..... ಅದರಲ್ಲೂ ಇವಳೇ ಇವಳಪ್ಪನಿಗೆ ಫೋನ್ ಮಾಡಿದ್ದಾಳೆ, ಮತ್ತದನ್ನು ನನಗೆ ತಿಳಿಸಿಲ್ಲ ಎಂದು ಕೋಪ ನೆತ್ತಿಗೇರಿತ್ತು.... "ಹೋಗು... ನೀನು ಅಪ್ಪನ ಹತ್ತಿರ.... ಅವರ ಹತ್ತಿರವೇ ಇರು.... ನಿನ್ನ ಕಂಡರೆ ಪ್ರೀತಿ ಅಲ್ವಾ...? " ಎಂದವನಿಗೆ ಅಲ್ಲಿರುವ ಮನಸ್ಸಾಗಲಿಲ್ಲ.... ಹೊರಬಿದ್ದೆ.... ಬೈಕ್ ತೆಗೆದುಕೊಂಡು ಹೊರಟಿದ್ದೆ..... ಎಲ್ಲಿಗೆ ಎಂದು ಗೊತ್ತಿರಲಿಲ್ಲ.........." 

    ’ಅರೇ, ಇದೇನಿದು ನನ್ನ ಸಮಸ್ಯೆಯನ್ನೇ ಹೇಳುತ್ತಿದ್ದಾನಲ್ಲ ಈತ ಎನಿಸಿತು.... "ತಪ್ಪಲ್ವಾ ಸರ್ ಅದು, ಆಕೆ ನಿಮ್ಮಿಂದ ಮುಚ್ಚಿಡಬಾರದಿತ್ತು. ಎಲ್ಲವನ್ನೂ ಹಂಚಿಕೊಳ್ಳಬೇಕಾಗಿತ್ತು ಅಲ್ವಾ...? " ಎಂದೆ ನಾನು.....  ಇದನ್ನು ಹೇಳುವಾಗ ನನ್ನವಳ ಮುಖ ನನ್ನೆದುರಿಗೆ ಇತ್ತು.....  ಆತ ನಗಾಡಿದ "ಇದು ನಿಮ್ಮ ಸಿಟ್ಟು ಹಾಗೆ ಮಾತನಾಡಿಸತ್ತೆ ಸರ್, ಸ್ವಲ್ಪ ಯೋಚನೆ ಮಾಡಿ..... ನಮ್ಮ ಜಗತ್ತು ನಮ್ಮ ಕೆಲ್ಸ, ಆಫೀಸು ಇಲ್ಲೇ ತಿರುಗುತ್ತಾ ಇರತ್ತೆ....  ಸಮಯ ಉಳಿದರೆ ಅಷ್ಟೇ ಹೆಂಡತಿ  ಮಕ್ಕಳಿಗೆ.....  ಆದ್ರೆ ಹೆಂಡತಿ ಎನ್ನುವವಳ ಜಗತ್ತು ನಮ್ಮ ಸುತ್ತಲೇ ತಿರುಗುತ್ತಾ ಇರುತ್ತದೆ.....  ನನ್ನ ಗಂಡನ ಬಟ್ಟೆ, ಅವನ ಊಟ, ಅವನ ಆರೋಗ್ಯ, ಅವನ ಅಪ್ಪ ಅಮ್ಮ, ಅವನ ಮಕ್ಕಳು, ಆತನ ನಿದ್ರೆ, ಆತನಿಗೆ ನೀಡಬೇಕಾದ ಸುಖ.... ಹೀಗೆಯೇ ಇರತ್ತೆ.... ಎಂದಿಗೂ ಆಕೆ ತನ್ನ ಬಗ್ಗೆ ಯೋಚಿಸೋದೆ ಇಲ್ಲ.... ಅವರಿಗೂ ಒಂದು ಮನಸ್ಸು ಇರತ್ತೆ,ಅದು ಅವಳ ಅಪ್ಪ ಅಮ್ಮನ ಬಗ್ಗೆ ಮಿಡಿಯತ್ತೆ ಅಂತ ನಮಗೆ ಅನಿಸೋದೇ ಇಲ್ಲ..... ಈಗ ನೋಡಿ ನನ್ನ ವಿಶ್ಯದಲ್ಲಿ, ನನ್ನಾಕೆ ಮಾಡಿದ ಕೆಲಸವೇ ನನಗೆ ದೊಡ್ಡ ಅಪರಾಧವಾಗಿ ಕಾಣಿಸಿತ್ತು....  ಅವಳು ತನ್ನ ಅಪ್ಪನ ಜೊತೆ ಮಾತನಾಡಿದ್ದು ನನಗೆ ಹೇಳಿದರೆ ’ನನಗೆ ಬೇಸರವಾಗಬಹುದು’ ಎಂದು ಹೇಳದೇ ಇರಬಹುದಾಗಿತ್ತು..... ಇದನ್ನೇ ನಾನು ದೊಡ್ಡ ರಂಪಾಟ ಮಾಡಿಕೊಂಡು ಹೊರ ಬಂದಿದ್ದೆ. "..... 

       "ಹೌದಲ್ವಾ..? ನಾನು ಮಾಡಿದ್ದೂ ಅದೇ ಸರ್.... ನನ್ನಾಕೆ ತನ್ನ ಅಪ್ಪನ ಮನೆಗೆ ಹೋಗಬೇಕು ಅಂದಿದ್ದಳು..... ಈ ಸಾರಿ ಬೇಡ, ಮುಂದಿನ ಸಾರಿ ಹೋಗೋಣ ಎನ್ನೋದು ನನ್ನ ಮಾತಾಗಿತ್ತು....  ಅದನ್ನೇ ದೊಡ್ಡ ಮಾಡಿಕೊಂಡು ನಾನು ಹೊರಬಿದ್ದಿದ್ದೇನೆ.... ತಪ್ಪು ಮಾಡಿದ್ದೇನೆ ಎಂದು ಗೊತ್ತಿದರೂ ಮನಸ್ಸು ಒಪ್ಪುತ್ತಿರಲಿಲ್ಲ....  ನಾವು ದಿನದ ಹೆಚ್ಚು ಹೊತ್ತು ಆಫೀಸಿನಲ್ಲೇ ಕಳೆಯುತ್ತೇವೆ..... ದಿನದ ಇಪ್ಪತ್ನಾಲ್ಕು ಘಂಟೆ ಮನೆಯ ನಾಲ್ಕು ಗೋಡೆಗಳ ನಡುವೆ ಕಳೆಯುವ ನನ್ನಾಕೆಗೆ ಸ್ವಲ್ಪವೂ ಬಿಡುವು ಬೇಡವೇ.....? ನಮಗೆ ಆಫೀಸು ಕಿರಿಕಿರಿಯಾದರೆ ಮನೆಗೆ ಬರಬಹುದು..... ಆದರೆ ನನ್ನಾಕೆಗೆ ಮನೆಯಲ್ಲೇ ಕಿರಿಕಿರಿಯಾದರೆ ಎಲ್ಲಿ ಹೋಗಿಯಾಳು.....? ಚೆ, ಎಂಥಾ ಕೆಲಸವಾಯ್ತು.... ಮನೆಗೆ ಹೋಗಿ ಅವಳಲ್ಲಿ ’ಸಾರಿ’ ಕೇಳಬೇಕು" ಎಂದೆ.... ನನ್ನ ಮಾತಿನಿಂದ ಆತನಿಗೆ ಖುಶಿಯಾಯ್ತು " ತುಂಬಾ ಒಳ್ಳೆಯ ಮಾತು ಸರ್, ಈಗಲಾದರೂ ಈ ಯೋಚನೆ ಬಂತಲ್ಲಾ.... ನಿಮ್ಮಾಕೆ ತುಂಬಾ ಲಕ್ಕಿ ಸರ್.... ಅವರಿಗೆ ಬೇಸರ ಮಾಡಬೇಡಿ.... ಅವರನ್ನು ಖುಶಿಯಿಂದ ನೋಡಿಕೊಳ್ಳಿ." ಎಂದ. ಮೊದಲ ಬಾರಿಗೆ ನನಗೆ ಅನುಮಾನ ಬಂತು.ಈತನೇನಾದರೂ ನನ್ನಾಕೆಯ ಸಂಬಂಧಿ ಇರಬಹುದಾ ಹೇಗೆ ಅಂತ..... ಆದರೆ ಈ ಅನುಮಾನ ಎಷ್ಟು ಬೇಗ ಬಂತೋ ಅಷ್ಟೇ ಬೇಗ ಮಾಯವಾಯಿತು ಕೂಡ..... ಇದ್ಯಾವುದರ ಪರಿವೆ ಇಲ್ಲದೇ ಆತ ತನ್ನ  ಕಥೆ ಮುಂದುವರಿಸಿದ್ದ....  "ಹೀಗೆಯೇ...  ನಿಮ್ಮ ಹಾಗೆಯೇ ಸ್ವಲ್ಪ ದೂರದ ತನಕ ಹೋಗಿ ಬರೋಣ ಎಂದು ಹೊರಟವನೆ ಸ್ನೇಹಿತನೊಬ್ಬ ಸಿಕ್ಕಿದ.... ಅವನ ಜೊತೆ ಹೋಗಿ ಸ್ವಲ್ಪ ವಿಸ್ಕಿ ಕುಡಿದೆ.... ತಲೆಯಲ್ಲಿ ಸಿಟ್ಟಿತ್ತಲ್ವಾ...? ಸ್ವಲ್ಪ ಸ್ವಲ್ಪ ಕುಡಿಯುತ್ತಲೇ  ಸ್ವಲ್ಪ ಹೆಚ್ಚಿಗೇ ಕುಡಿದೆ. "

  "ಅದೇ ಸಮಯಕ್ಕೆ ನನ್ನ ಮೊಬೈಲ್ ಗೆ ನನ್ನವಳ ಕಾಲ್ ಬಂತು..... ನನ್ನ ಸಿಟ್ಟೂ ಇನ್ನೂ ಇಳಿದಿರಲಿಲ್ಲ. " ಏನು...ಇನ್ನೇನು ಹೇಳುವುದಿದೆ...? ಎಲ್ಲಾ ಮುಗಿಯಿತಲ್ಲ...? ಹೊರಡು ನಿನ್ನ ಮನೆಗೆ... ನಿನ್ನ ಅಪ್ಪನ ಮನೆಗೆ..." ಎಂದವನೇ ಕಾಲ್ ಕಟ್ ಮಾಡಿದೆ.... ನಶೆ ಏರುತ್ತಿತ್ತು.... ಮನೆಗೆ ಹೋಗಲೇಬೇಕಿತ್ತು.... ಬೈಕ್ ಸ್ಟಾರ್ಟ್ ಮಾಡಿದೆ.... ಮನೆಯತ್ತ ಹೊರಟೆ.....  ಮಾರ್ಗ ಮಧ್ಯದಲ್ಲಿ, ಮತ್ತೆ ನನ್ನವಳ ಕಾಲ್ ಬಂತು......." ಅದೇ ಸಮಯಕ್ಕೆ ನನ್ನ ಫೋನ್ ರಿಂಗಾಗುತ್ತಿತ್ತು. ನನ್ನಾಕೆಯ ಫೋನ್ ಆಗಿತ್ತು....."ಹಲೋ, ಬರ್ತಾ ಇದ್ದೇನೆ ಮನೆಗೆ.... ಸಂಗಡ ಊಟ ಮಾಡೋಣ " ಎಂದು ಫೋನ್ ಕಟ್ ಮಾಡಿದೆ......  ನನ್ನ ಹಿಂದೆ ಕುಳಿತಾತನಿಗೆ ಖುಶಿಯಾಗಿತ್ತು..... " ವೆರಿ ಗುಡ್ ಸರ್, ಖುಶಿಯಾಯ್ತು ನನಗೆ, ಆದ್ರೆ ನಾನು ದೊಡ್ಡ ತಪ್ಪು ಮಾಡಿದ್ದೆ..... ನಿಮ್ಮಾಕೆಯ ಹಾಗೆಯೇ ನನ್ನವಳೂ ಕಾಲ್ ಮಾಡಿದ್ದಳು.... ಆದ್ರೆ ನಾನು ಮತ್ತೆ ಅವಳಿಗೆ ಸಿಟ್ಟಿನಿಂದಲೇ ಉತ್ತರಿಸಿದ್ದೆ. ಸಿಟ್ಟಿನಿಂದಲೇ ಕಾಲ್ ಕಟ್ ಮಾಡಿದ್ದೆ."..... ದೊಡ್ಡದಾಗಿ ಉಸಿರು ತೆಗೆದುಕೊಳ್ಳುತ್ತಾ ಅಂದ "ಹಾಗೆಯೇ ಮನೆಗೆ ಹೋಗುವ ಅವಕಾಶವನ್ನೂ ಕಳೆದುಕೊಂಡಿದ್ದೆ.........  " ನನಗೆ ನಿಜವಾಗಿಯೂ ಕನಿಕರ ಹುಟ್ಟಿತು. " ಯಾಕೆ ಸರ್, ನಿಮ್ಮಾಕೆ ಮನೆ ಬಿಟ್ಟು ಹೋಗಿದ್ದರಾ..? " ಕೇಳಿದೆ...... 
ನನಗೆ ಸ್ವಲ್ಪ ಧೈರ್ಯ ಬಂದಿತ್ತು....... ಯಾಕೆಂದರೆ ಸ್ಮಶಾನವನ್ನು ದಾಟಿ ಬಂದಿದ್ದೆ. 
"ಇಲ್ಲ ಸಾರ್...ನನ್ನಾಕೆ  ಮತ್ತೆ ಫೋನ್ ಮಾಡಿದಳು... ನನಗೆ ಕೋಪ ನೆತ್ತಿಗೇರಿತು... ಅವಳಿಗೆ ಚೆನ್ನಾಗಿ ಬಯ್ದೆ..."
ಆತ ಸ್ವಲ್ಪ ಹೊತ್ತು ಸುಮ್ಮನಾದ...
ನನಗೆ ಕುತೂಹಲ ಜಾಸ್ತಿಯಾಯ್ತು...
"ಮುಂದೆ ಏನಾಯ್ತು ಸಾರ್...?
ಈಗ ನೀವೆಲ್ಲ ಪ್ರೀತಿಯಿಂದ ಇದ್ದಿರಲ್ವಾ?...."
"ಇಲ್ಲಾ ಸಾರ್...
ನಾನು ಕೋಪದಲ್ಲಿ ಮಾತಾಡುತ್ತಿದ್ದೆ..
ಮುಂದಿನಿಂದ  ಬರುತ್ತಿದ್ದ ಲಾರಿಗೆ ನನ್ನ ಬೈಕ್ ಜೋರಾಗಿ ಢಿಕ್ಕಿ ಆಯ್ತು..."
ನನಗೆ ಪಾಪ ಅನ್ನಿಸಿತು...
"ಹೋಗ್ಲಿ ಬಿಡಿ ಸಾರ್.... ಈಗ ಎಲ್ಲ ಸರಿ ಹೊಯ್ತಲ್ವಾ? ಎನೋ ಕೆಟ್ಟ ಘ್ಹಳಿಗೆ ಆಗೋಯ್ತಲ್ಲಾ .... ಮತ್ತೆ ತಪ್ಪು ಮಾಡಬೇಡಿ ಸರ್ "ಎಂದೆ.....
" ಸಾರ್......ನೀವು ನಿಮ್ಮ ಮಡದಿಯೊಡನೆ ಪ್ರೀತಿಯಿಂದ ಚೆನ್ನಾಗಿರಿ...
ನನ್ನ ಹಾಗೆ ಮಾಡ್ಕೋಬೇಡಿ..." ಅಂದರು ಆತ ಬೇಸರದಿಂದ....
"ನಿಮಗೇನಾಯ್ತು...?" ಕೇಳಿದೆ ನಾನು...... 
"ಆ  ಅಪಘಾತದಲ್ಲಿ ನನ್ನ ತಲೆಯೇ ಕತ್ತರಿಸಿ ಹೋಯ್ತು....!!! "

ನಾನು ಬೈಕ್  ನಿಲ್ಲಿಸಿ ತಿರುಗಿ ನೋಡಿದೆ...

ಹಿಂದೆ ಯಾರೂ ಇರಲಿಲ್ಲ.....!!

Aug 29, 2012

ಒಳ್ಳೆ ಕೆಲಸ.....!!!!


       

        ಏನಾದರೂ  ಪಾರ್ಸೆಲ್ ತೆಗೆದುಕೊಂಡು ಹೋಗೋಣ ಎಂದುಕೊಂಡು ಮನೆಗೆ ಹೋಗುವ ದಾರಿಯಲ್ಲಿದ್ದ ಬಾರ್ ಎಂಡ್ ರೆಸ್ಟೋರೆಂಟ್ ಬಳಿ ಗಾಡಿ ನಿಲ್ಲಿಸಿದೆ......ಪಾರ್ಸೆಲ್ ಗೆ ಒರ್ಡರ್ ಮಾಡಿ ಕೌಂಟರ್ ಬಳಿ ನಿಂತಿದ್ದೆ...... ಸುಮಾರು ಎಂಟು ಘಂಟೆಯಾಗಿತ್ತು...... ರೋಡ್ ಆ ಕಡೆಯಿಂದ ಒಬ್ಬ ಹುಡುಗ ಬರೀ ಕೈಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅನುಕರಣೆ ಮಾಡುತ್ತಾ ಬರುತ್ತಿದ್ದ....... ಅಂಗಿ ಚಡ್ಡಿ ಎಲ್ಲಾ ಕೊಳೆಯಾಗಿತ್ತು..... ಪಕ್ಕದಲ್ಲೇ ಒಂದು ಬ್ರಿಡ್ಜ್ ಕೆಲಸ ನಡೆಯುತ್ತಿತ್ತು...... ಅಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಹುಡುಗ ಎನಿಸಿತು....... ಆತ ಸೀದಾ ಬಾರ್ ಎಂಡ್ ರೆಸ್ಟೋರೆಂಟ್ ಬಂದು ನನ್ನನ್ನೂ ಕ್ರಾಸ್ ಮಾಡಿ ಕೌಂಟರ್ ಹತ್ತಿರ ಹೋದ..... ಇವನ್ಯಾಕೆ ಇಲ್ಲಿ ಎನಿಸಿತು...... ಹುಡುಗ ಬಹಳ ಚೂಟಿಯಾಗಿದ್ದ..... ಸುಮಾರು ಹನ್ನೆರಡು ವರ್ಷ ಪ್ರಾಯ ಇರಬಹುದು...... ಕೌಂಟರ್ ನಲ್ಲಿ ಹಣ ಕೊಟ್ಟು ಇನ್ನೊಂದು ಕಡೆ ಹೋದ.... ನಾನು ಆತನನ್ನೇ ಗಮನಿಸುತ್ತಿದ್ದೆ...... ಆತ ಸೀದಾ ಮದ್ಯ ಮಾರುವ ಕೌಂಟರ್ ಗೆ ಹೋದ..... ನನಗೆ ಆಶ್ಚರ್ಯ ಆಯ್ತು..... 

        ಈ ಹುಡುಗ ಅಲ್ಯಾಕೆ ಹೋಗಿದ್ದಾನೆ..? ಮಕ್ಕಳು ಇತ್ತೀಚಿಗೆ ಕುಡಿಯಲು ಶುರು ಮಾಡಿದ್ದಾರೆ.... ಅದೇ ಚಟವಾಗಿ ಅವರ ಸಣ್ಣ ಕರಳನ್ನ ಸುಟ್ಟು ಹಾಕಿ , ಅವರ ಸಾವಿಗೆ ಕಾರಣವಾಗಿದೆ ಎಂದು ಪೇಪರ್ ನಲ್ಲಿ ಓದಿದ್ದೆ..... ಈ ಹುಡುಗನೂ ಕುಡಿಯುತ್ತಾನಾ..? ಕೂಲಿ ಕಾರ್ಮಿಕರಿಗೆ ತಮ್ಮ ಮಕ್ಕಳ ಮೇಲೆ ಗಮನ ಹರಿಸಲು ಸಾಧ್ಯವಾಗದೇ ಈ ರೀತಿ ಆಗುತ್ತಿದ್ದಾರಾ....?  ಈ ಹುಡುಗ ಶಾಲೆಗೆ ಹೋಗುತ್ತಿದ್ದಾನಾ...? ತಲೆ ತುಂಬಾ ಪ್ರಶ್ನೆಗಳೇ ತುಂಬಿದವು...... ಕೌಂಟರ್  ನಲ್ಲಿದ್ದ ಯುವಕ ಗ್ಲಾಸ್ ನಲ್ಲಿ ವಿಸ್ಕಿ ಸುರಿಯುತ್ತಿದ್ದ....... ಆ ಹುಡುಗ ಅದನ್ನ ಎತ್ತಿಕೊಂಡ..... ನನಗೆ ಇನ್ನೂ ಗಾಬರಿಯಾಯಿತು....ಕೌಂಟರ್ ನ ಯುವಕ ಒಂದು ಕಡೆ ಕೈ ತೋರಿಸಿದ.....
ಆ ಹುಡುಗ ಗ್ಲಾಸ್ ಎತ್ತಿಕೊಂಡು ಒಂದು ಟೇಬಲ್ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊಟ್ಟ..... ನನಗೆ ಸಮಾಧಾನ ಆಯ್ತು...... 

      ಆ ಹುಡುಗ ಮತ್ತೆ ಕೌಂಟರ್ ಕಡೆ ಬಂದ...  ನನಗೆ ಮತ್ತೆ ತಲೆಬಿಸಿ ಶುರುವಾಯ್ತು.... ಮತ್ತೆ ಯಾಕೆ ಅಲ್ಲಿಗೆ ಹೋಗುತ್ತಿದ್ದಾನೆ ಎನಿಸಿತು..... ಕೌಂಟರ್ ಯುವಕ ಒಂದು ವಿಸ್ಕಿ ಬಾಟಲನ್ನು ಪೇಪರ್ನಲ್ಲಿ ಸುತ್ತಿ ಆ ಹುಡುಗನ ಕೈಲಿ ಕೊಟ್ಟ....... ಆ ಹುಡುಗ ಮತ್ತದೇ ಬರಿಗೈಯಲ್ಲಿ ಬ್ಯಾಟಿಂಗ್ ಬೌಲಿಂಗ್ ಅನುಕರಣೆ ಮಾಡುತ್ತಾ ಹೊರಗೆ ಹೋದ...... ನನಗೆ ನಗು ಬಂತು.... ನನ್ನನ್ನು ನನ್ನ ಪ್ರಾಥಮಿಕ ಶಾಲೆಯ ನೆನಪು ತಂದಿತು.......

      ನಾನು ಮೂರನೇ ತರಗತಿ ಇದ್ದೆ ಅನಿಸತ್ತೆ..... ನನ್ನ ಜೊತೆ ಶಂಕ್ರ ಅಂತ ನನ್ನ ಕ್ಲಾಸ್ ಮೇಟ್ ಇದ್ದ...... ಎಲ್ಲಾ ಶಾಲೆಯಲ್ಲಿ ಇದ್ದೇ ಇರುವ ಫಟಿಂಗನಾಗಿದ್ದ...  ಆವಾಗೆಲ್ಲ ಮೂರನೇ ತರಗತಿಯಿಂದ ನಮಗೆಲ್ಲಾ  "ಒಳ್ಳೆಯ ಕೆಲಸದ ಪಟ್ಟಿ" ಅಂತ ಒಂದು ಪಟ್ಟಿ  ಇರುತ್ತಿತ್ತು..... ಅದರಲ್ಲಿ ದಿನಾಲೂ ನಾವು ಮಾಡಿದ (?????) ಒಂದು ಒಳ್ಳೆ ಕೆಲಸವನ್ನು ಬರೆಯಬೇಕಿತ್ತು.... ಮಾಡದೇ ಇದ್ದರೂ ಬರೆಯಬೇಕಿತ್ತು..... ಒಂದು ದಿನ ನಮ್ಮ ಟೀಚರ್ ಗೆಳೆಯ ಶಂಕ್ರ ಬರೆದ ಒಳ್ಳೆಯ ಕೆಲಸದ ಪಟ್ಟಿ ನೋಡುತ್ತಿದ್ದರು..... ಓದಿದವರೇ ಅದೇ ಪಟ್ಟಿಯಿಂದ ಅವನ ತಲೆಯ ಮೇಲೆ ಹೊಡೆದರು..... ಅವನು ತಲೆ ಉಜ್ಜಿಕೊಳ್ಳುತ್ತಾ " ಬರೆದದ್ದು ತಪ್ಪಾಯಿತಾ ಸಾರ್? "ಎಂದ..... ಅವರು " ಅಪ್ಪನಿಗೆ ಬೀಡಿ ತಂದಿದ್ದು ಹೇಗೆ ಒಳ್ಳೆಯ ಕೆಲಸವಾಗುತ್ತದಾ ನಿನಗೆ.....?" ಎಂದರು.... ಅವನು...." ಒಳ್ಳೆಯ ಕೆಲಸ ಅಲ್ವಾ ಸಾರ್ ಅದು...?" ಎಂದ..... " ಬೇರೆ ಎನಾದರೂ ಬರೆ ಮಾರಾಯಾ....." ಎಂದರು ನಮ್ಮ ಸರ್..... ನನ್ನ ಪಟ್ಟಿ ತೆಗೆದುಕೊಂಡು ಓದಿದರು..... ನಾನು ಆ ದಿನ ’ ರಸ್ತೆಯ ಮೇಲೆ ಬಿದ್ದಿದ್ದ ಕಲ್ಲನ್ನು ಎತ್ತಿ ಚರಂಡಿದೆ ಎಸೆದೆನು’ ಎಂದು ಬರೆದಿದ್ದೆ..... ನನಗೂ ಬಿತ್ತು ಹೊಡೆತ..... " ಕಲ್ಲು ಎತ್ತಿ ಚರಂಡಿಗೆ ಎಸೆದರೆ ನೀರು ಹೋಗೋದು ಹ್ಯಾಗೆ.....?" ಎಂದರು..... ನಾನು ಬರೆದ ಸಾಲಿನ ಮೇಲೆ ಕೆಂಪು ಸಾಯಿಯಿಂದ ಗೆರೆ ಎಳೆದರು......

   ಇನ್ನೊಬ್ಬ ಹುಡುಗಿಯ ಹತ್ತಿರ ಹೋದರು..... ಅವಳ ಪಟ್ಟಿ ತೆಗೆದುಕೊಂಡು ಓದಿದರು..."ನೋಡು ಇವಳು ಸರಿ ಬರೆದಿದ್ದಾಳೆ.....’ ಅಮ್ಮನಿಗೆ ಹಾಲು ತಂದು ಕೊಟ್ಟೆನು.....’ ಸರಿಯಾಗಿ ಬರೆದಿದ್ದಾಳೆ..." ಎಂದರು..... ನಾನು ಮತ್ತು ಶಂಕ್ರ ಮುಖ ಮುಖ ನೋಡಿಕೊಂಡೆವು..... ಮಾಸ್ತರರು ಇನ್ನೂ ಮುಂದಕ್ಕೆ ಹೋದರು.... ನಮಗೆ ಗೊತ್ತಿತ್ತು ಮತ್ತೊಬ್ಬ ಎನು ಬರೆದಿದ್ದಾನೆ ಅಂತ.....

ಯಾಕೆಂದ್ರೆ..................
...........



 ಶಾಲೆ ಶುರುವಾಗುವ ಹತ್ತು ನಿಮಿಶದ ಮೊದಲಷ್ಟೇ ನಾವು ಒಳ್ಳೆಯ ಕೆಲಸದ ಪಟ್ಟಿ ಬರೆಯುತ್ತಿದ್ದುದು...ಒಳ್ಳೆಯ ಕೆಲಸವನ್ನು ಹಂಚಿಕೊಂಡು ಬರೆಯುತ್ತಿದ್ದೆವು.....ಒಬ್ಬರ ಹಾಗೆ ಇನ್ನೊಬ್ಬರು ಬರೆಯಬಾರದು ಎಂಬುದು ಶಂಕ್ರನ ಆದೇಶವಾಗಿತ್ತು..... ನಮ್ಮ ಒಳ್ಳೆಯ ಕೆಲಸವೆಲ್ಲ ಹೀಗೇ ಇರುತ್ತಿತ್ತು.....
" ಅಪ್ಪನಿಗೆ ಬೀಡಿ ತಂದು ಕೊಟ್ಟೆನು....."
"ಅಮ್ಮನಿಗೆ ಹಾಲು ತಂದು ಕೊಟ್ಟೆನು....."
"ಅಮ್ಮನಿಗೆ ಹೂವು ತಂದು ಕೊಟ್ಟೆನು....."
"ಅಪ್ಪನಿಗೆ ಬೀಡಿ ಹಚ್ಚಿಕೊಂಡು ತಂದು ಕೊಟ್ಟೆನು....."
"ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು....."
"ಅಪ್ಪ ಕುಡಿದ ಸಾರಾಯಿ ಲೋಟ ತೊಳೆದು ಇಟ್ಟೆನು....."
" ರಸ್ತೆಯ ಮೇಲಿದ್ದ ಕಲ್ಲನ್ನು ಚರಂಡಿಗೆ ಎಸೆದೆನು....."
ಪಟ್ಟಿ ತುಂಬಿದ ನಂತರ ಮತ್ತದೇ ಹಿಂದಿನ ಪಟ್ಟಿಯ ಒಳ್ಳೆಯ ಕೆಲಸ ಪುನ್ಃ ಬರೆಯುತ್ತಿದ್ದೆವು.....

      ಸರ್ ಇನ್ನೊಬ್ಬನ ಹತ್ತಿರ ಹೋಗಿ ಪಟ್ಟಿ ನೋಡಿ ಅವನ ತಲೆ ಮೇಲೆ ಹೊಡೆದರು...... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ...ಕೇಳಿಯೇಬಿಟ್ಟ..... "ಸಾರ್.. ಅಮ್ಮನಿಗೆ ಹಾಲು ತಂದು ಕೊಡೋದು ಒಳ್ಳೆ ಕೆಲಸ ವಾದರೆ,ಅಪ್ಪನಿಗೆ  ಬೀಡಿ ತಂದು ಕೊಡೋದು ಹೇಗೆ ಕೆಟ್ಟ ಕೆಲಸ ಸಾರ್.....? ಎಂದ..... ನಮ್ಮ ಸರ್ ಗೆ ನಗು ಬಂತು.... ಅವರು ತುಂಬಾ ಒಳ್ಳೆಯ ಮಾಸ್ತರರಾಗಿದ್ದರು.....ತುಂಬಾ ಶಾಂತವಾಗಿ....." ಬೀಡಿ ಸೇಯೋದು ಕೆಟ್ಟ ಕೆಲಸ..... ಅದನ್ನು ತಂದು ಕೊಡೋದು ಸಹ ಕೆಟ್ಟ ಕೆಲಸವೇ...." ಎಂದರು..... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ..... " ಅಲ್ಲ ಸಾರ್, ಮೊನ್ನೆ ನೀವೇ ಹೇಳಿದ್ರಿ..... ಅಪ್ಪ ಅಮ್ಮ ಎಂದರೆ ದೇವರ ಸಮಾನ..... ಅವರ ಸೇವೆ ಮಾಡಬೇಕು ಅಂತ..... ಈಗ ಅವರ ಸೇವೆ ಮಾಡಿದ್ರೂ ಕೆಟ್ಟ ಕೆಲಸ ಅಂತೀರಲ್ಲ ಸರ್....." ಎಂದ.... ನಾವೆಲ್ಲಾ ನಕ್ಕೆವು..... "ಹೇಯ್ ಸುಮ್ಮನಿರ್ರೋ ಎಲ್ರು..... " ಅಪ್ಪ ಕೆಟ್ಟ ಕೆಲ್ಸ ಮಾಡಿದ್ರೆ ..... ಅದು ಕೆಟ್ಟ ಕೆಲಸಾನೇ....." ಅಂದರು ನಮ್ಮ ಸರ್..... ಶಂಕ್ರ ಬಿಡಲೇ ಇಲ್ಲಾ..... " ಕೆಟ್ಟ ಕೆಲಸ ಮಾಡಿದ್ದು ಅಪ್ಪ ಆದ್ರೆ, ಅವರಿಗೇ ಹೇಳಿ ಸರ್..... ಮುಂದಿನ ಸಾರಿ ಮೀಟಿಂಗ್ ಗೆ ಬಂದಾಗ" ಎಂದ..... "ಸುಮ್ಮನೆ ಕುಳಿತುಕೊಳ್ಳೋ ಕತ್ತೆ" ಎಂದರು ಸರ್ ಸಿಟ್ಟಿನಲ್ಲಿ.....

      ಅದೆಲ್ಲಾ ನೆನಪಾಯಿತು ಈ ಹುಡುಗನ ಕೆಲಸ ನೋಡಿ..... ಈಗಲೂ " ಒಳ್ಳೆಯ ಕೆಲಸದ ಪಟ್ಟಿ" ಬರೆಯುವ ಪದ್ದತಿ ಇದ್ದರೆ ನಾಳೆನೂ ಈ ಹುಡುಗ ತನ್ನ ಪಟ್ಟಿಯಲ್ಲಿ " ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು" ಎಂದು ಬರೆಯುತ್ತಾನೆ ಎನಿಸಿಕೊಂಡೆ..... ನಗು ಬಂತು.... ನನ್ನ ಪಾರ್ಸೆಲ್ ಸಹ ಬಂತು....

Aug 15, 2012

ವಾಸ್ತವ........



ವೇದಿಕೆಯನ್ನು ಬಹಳ ಸುಂದರವಾಗಿ ಸಿಂಗರಿಸಿದ್ದೆ..... ನಾನೇ ಕಾಲೇಜಿನ ವಿಧ್ಯಾರ್ಥಿ ಮುಖ್ಯ ಕಾರ್ಯದರ್ಶಿಯಾಗಿದ್ದರಿಂದ ತುಂಬಾ ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದೆ...... ಇದೇ ನನ್ನ ಅಂತಿಮ ವರ್ಷದ ಎಮ್. ಬಿ.ಬಿ.ಎಸ್. ಆದುದರಿಂದಲೂ ಇರಬಹುದು...... ಒಬ್ಬರು ವಿಶೇಷ ವ್ಯಕ್ತಿಗೆ ಸನ್ಮಾನ ಇದೆಯೆಂದು ತಿಳಿದಿತ್ತು......ಆದರೆ ಆವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ... 

ಸರಿಯಾಗಿ ಹತ್ತಕ್ಕೇ ಕಾರ್ಯಕ್ರಮ ಶುರು ಆಗುವುದಿತ್ತು....... ಎಲ್ಲಾ ಗಣ್ಯರೂ ವೇದಿಕೆ ಮೇಲೆ ಇದ್ದರು..... ನಮ್ಮ ಕಾಲೇಜಿನ ಪ್ರಿನ್ಸಿಪಾಲ್, ನಮ್ಮ ಊರಿನ  ಎಂ. ಎಲ್. ಎ, ಯುವ ವೇದಿಕೆಯ ಅಧ್ಯಕ್ಷರು, ನಮ್ಮೂರ ಹಿರಿಯರೂ ಆದ ಸ್ವಾತಂತ್ರ್ಯ ಹೋರಾಟಗಾರರು, ಅವರ ಪಕ್ಕದಲ್ಲಿ ಒಬ್ಬರು ಮಹಿಳೆ ಕುಳಿತಿದ್ದರು..... ತಲೆ ಮೇಲೆ ಸೆರಗು ಎಳೆದಿದ್ದರು.... ಕಿವಿಯಲ್ಲಿ ದೊಡ್ಡ ಜುಮುಕಿ ಇತ್ತು..... ಗಮನಿಸಿದಾಗ ಅವರು ಒಬ್ಬರು ಮುಸ್ಲಿಂ ಮಹಿಳೆ ಎಂದು ತಿಳಿದು ಬರುತ್ತಿತ್ತು..... ಅವರು ಯಾರು ನನಗೆ ತಿಳಿದಿರಲಿಲ್ಲ......  ನನ್ನ ಕೆಲಸ ವೇದಿಕೆ ವ್ಯವಸ್ಥೆಗೆ ಸೀಮಿತವಾಗಿದ್ದರಿಂದ ನಾನು ಎದುರಿನ ಸಾಲಲ್ಲೇ ಕುಳಿತಿದ್ದೆ...... ನಮ್ಮ ಪ್ರಿನ್ಸಿಪಾಲರು ಪ್ರಾಸ್ಥಾವಿಕ ಭಾಷಣ ಮಾಡಿ, ಬಂದ ಗಣ್ಯರನ್ನು ಸ್ವಾಗತಿಸಿದರು.....  ವೇದಿಕೆ ಮೇಲಿದ್ದ ಮಹಿಳೆ ಹೆಸರು ಅಲೀಮಾ ಎಂದು ಆಗಲೇ ತಿಳಿಯಿತು...... ಆದರೆ ಅವರನ್ನು ವೇದಿಕೆ ಮೇಲೆ ಯಾಕೆ ಕುಳ್ಳಿರಿಸಿದ್ದಾರೆ ಎಂದು ತಿಳಿಯಲಿಲ್ಲ..... ನಂತರ ಮಾತಾಡಿದ ನಮ್ಮೂರ ಎಮ್.ಎಲ್.ಎ ಸಾಹೇಬರು, ’ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಹೇಳಿದರು..... " ಇಲ್ಲಿ ಕುಳಿತ ಮಹಿಳೆಗೆ ಎಲ್ಲರೂ ಎದ್ದು ನಿಂತು ಗೌರವಿಸಿ...... ಈ ಮಹಿಳೆ ಮಾಡಿದ ಹೋರಾಟ, ಯಾವ ಸ್ವಾತಂತ್ರ್ಯ ಹೋರಾಟಕ್ಕೂ ಕಮ್ಮಿ ಇಲ್ಲ...... ಈ ಮಹಿಳೆಯಿಂದಾಗಿ ಎಷ್ಟೋ ಜನರ ಪ್ರಾಣ ಉಳಿಯಿತು....... ತನ್ನ ಪ್ರಾಣದ ಬಗ್ಗೆ ಚಿಂತೆ ಮಾಡದೇ ಪರರ ಬಗ್ಗೆ ಯೋಚಿಸಿದ ಈ ಹೋರಾಟಗಾರ್ತಿಗೆ ಸಲ್ಲುವ ಎಲ್ಲಾ ಗೌರವಕ್ಕಾಗಿ ನಾನು ಸರಕಾರಕ್ಕೆ ಕೇಳಿಕೊಳ್ಳುತ್ತೇನೆ...... ನಾನು ಇವರಿಗೆ ಸನ್ಮಾನ ಮಾಡುವುದು ನನ್ನ ಪೂರ್ವಜನ್ಮದ ಪುಣ್ಯ...." ಎಂದರು...... ಹಣ್ಣು ಹಂಪಲ ಕೊಟ್ಟು ಶಾಲು ಹೊದೆಸಿ ಸನ್ಮಾನ ಮಾಡಿದರು............ನನಗೆ ಈಕೆಯ ಬಗ್ಗೆ ಇನ್ನೂ ಕುತೂಹಲ ಹೆಚ್ಚಿತು......

                  
ನಂತರ ಎದ್ದು ನಿಂತವರು ಆ ಮುಸ್ಲಿಂ ಮಹಿಳೆ.... ಸುಮಾರು ಮುವತ್ತೈದು ವರ್ಷವಿರಬಹುದು ಆಕೆಗೆ.......  ನನಗೆ ಆಕೆಯ ಬಗ್ಗೆ ಎನೂ ತಿಳಿದಿರಲಿಲ್ಲ...... ಇಡೀ ಸಭಾಂಗಣ ನಿಶ್ಯಬ್ಧವಾಗಿತ್ತು........ " ನಮಸ್ಕಾರ, ನನ್ನ ಹೆಸರು ಅಲೀಮಾ..... ನನಗೆ ಈ ವೇದಿಕೆಯ ಮೇಲೆ ಕುಳಿತುಕೊಳ್ಳಲು ಅರ್ಹತೆ ಇದೆಯೋ ಇಲ್ಲವೋ ತಿಳಿದಿಲ್ಲ.... ನಿಮ್ಮ ಪ್ರಿನ್ಸಿಪಾಲರು ಒತ್ತಾಯ ಮಾಡಿ ನನ್ನನ್ನು ಇಲ್ಲಿಗೆ ಕರೆಸಿದ್ದಾರೆ..... ನನ್ನ ಕಥೆಯನ್ನು ಹೇಳಲು ಕೇಳಿಕೊಂಡಿದ್ದಾರೆ..... ನಿಮಗೆಲ್ಲಾ ಬೋರ್ ಹೊಡೆಸದೇ ಬೇಗನೇ ಮುಗಿಸುತ್ತೇನೆ....
ನನ್ನದು ತುಂಬಾ ಸಾಮಾನ್ಯ ಕುಟುಂಬವಾಗಿತ್ತು..... ಅಪ್ಪ ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿದ್ದೆ..... ಆತ ಖಾಸಗಿ ಬಸ್ ಚಾಲಕನಾಗಿದ್ದ...... ಆತ ತರುವ ತಿಂಗಳ ಸಂಬಳವನ್ನೇ ನಂಬಿತ್ತು ನಮ್ಮ ಕುಟುಂಬ.... ನಾನು ಪಿ.ಯು.ಸಿ ಓದಿದ್ದೆನಾದ್ದರಿಂದ ಪಕ್ಕದಲ್ಲಿದ್ದ ಮಸೀದಿಗೆ ಹೋಗಿ ಬಡ ಮಕ್ಕಳಿಗೆ ಪಾಠ ಮಾಡುತ್ತಿದ್ದೆ...ಅದರಿಂದ ನನಗೆ ತಿಂಗಳಿಗೆ ಮುನ್ನೂರು ರುಪಾಯಿ ಸಿಗುತ್ತಿತ್ತು...... ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಿಲ್ಲದ ಕೊರಗೊಂದನ್ನು ಬಿಟ್ಟರೆ.... ಹಣವಿಲ್ಲದಿದ್ದರೂ ನೆಮ್ಮದಿಯಿಂದ ಇದ್ದೆವು...... ಅತ್ತೆ ಮಾವ ನನ್ನ ಗಂಡನಿಗೆ ಬೇರೆ ಮದುವೆ ಮಾಡಿಸಲು ಪ್ರಯತ್ನ ಪಟ್ಟರಾದರೂ ನನ್ನವರು ಅದನ್ನು ಒಪ್ಪಿರಲಿಲ್ಲ..... ನನ್ನ ಅಪ್ಪ ಅಮ್ಮ ಮುಂಬೈ ನ ಹಾಜಿ ಅಲಿ ದರ್ಗಾ ಕ್ಕೆ ಹೋಗಿ ಚಾದರ್ ಹೊದೆಸಿ ಬಂದರೆ ಮಕ್ಕಳಾಗುತ್ತದೆ ಎಂದಿದ್ದರು.... ನಾನು ಹೊರಡಲು ತಯಾರಿದ್ದೆ..... ಆದ್ರೆ ನನ್ನ ಗಂಡ ಮಾತ್ರ ನಮಾಜ್ ಮಾಡುವಾಗ " ನನಗೆ ಮಕ್ಕಳಾದರೆ ಮಾತ್ರ ಹಾಜಿ ಅಲಿಗೆ ಬಂದು ಚಾದರ್ ಹೊದೆಸುತ್ತೇನೆ" ಎಂದು ಹರಸಿಕೊಂಡರು....... ಯಾವ ದೇವರ ಹರಕೆಯ ಫಲವೋ.... ಮರುವರ್ಷವೇ ಮುದ್ದಾದ ಹೆಣ್ಣುಮಗುವಿಗೆ ತಾಯಿಯಾಗಿದ್ದೆ........ ಮಗುವಿಗೆ ಒಂದು ವರ್ಷವಾಗುತ್ತಲೇ , ಹಾಜಿ ಅಲಿಗೆ ಹೋಗಿ ಬರುವ ನಿರ್ಧಾರ ಮಾಡಿದೆವು.....


ನನಗಿನ್ನೂ ನೆನಪಿದೆ.... ರೈಲಿನಲ್ಲಿ ಒಂದು ರಾತ್ರಿ ಕುಳಿತು ಬೆಳ್ಳ್ಂ ಬೆಳಿಗ್ಗೆ ಮುಂಬೈ ತಲುಪಿದ್ದೆವು...  ರೈಲಿನಿಂದ ಇಳಿದು ಸೀದಾ "ಸುಲ್ತಾನ್ ಚಾದರ್ " ಅಂಗಡಿಗೆ ಹೋದೆವು....... ಅಲ್ಲಿ ಸುಂದರವಾದ ದರ್ಗಾಕ್ಕೆ ಕೊಡುವ ಚಾದರ್ ಸಿಗುತ್ತವೆ ಎಂದು ಕೇಳಿದ್ದೆ..... ಸಾವಿರ ರುಪಾಯಿ ಕೊಟ್ಟು ಚಾದರ್ ಕೊಂಡೆವು....... ಪುನ್ಃ ಇನ್ನೊಂದು ರೈಲು ಹಿಡಿಯಬೇಕಿತ್ತು....... ಮುಂಬೈ ನ ಚತ್ರಪತಿ ರೈಲು ನಿಲ್ದಾಣ ದಲ್ಲಿ ಕುಳಿತೆವು....... ನಿಲ್ದಾಣ ಗಿಜಿ ಗಿಜಿಗೊಡುತ್ತಿತ್ತು....... ಎಲ್ಲಿ ನೋಡಿದರಲ್ಲಿ ಜನ...... ಜನ ಓಡುತ್ತಿದ್ದಾರೋ.....ನಡೆಯುತ್ತಿದ್ದಾರೋ ತಿಳಿಯುತ್ತಿರಲಿಲ್ಲ....... ನಾನು , ನನ್ನ ಗಂಡ, ಮಗಳು ಒಂದು ಕಂಬದ ಪಕ್ಕ ಕುಳಿತೆವು....... ನನ್ನವರು ಹಾಜಿ ಅಲಿಗೆ ಹೋಗಲು ಯಾವ ರೈಲು ಮತ್ತೆ ಹೊರಡುವ ವೇಳೆ ಕೇಳಿ ಬರುತ್ತೇನೆ ಎಂದು ಹೊರಟರು........ ಹೋಗಿ ಸ್ವಲ್ಪ ಹೊತ್ತಿನಲ್ಲೇ ಓಡುತ್ತಾ ಬಂದರು....... ನನ್ನನ್ನೆಬ್ಬಿಸುತ್ತಾ ಮಗುವನ್ನು ಎತ್ತಿಕೊಂಡರು......ನಾನು " ಯಾಕೆ ....ಏನಾಯ್ತು.... ಎಷ್ಟು ಹೊತ್ತಿಗೆ ರೈಲು.. " ಎಂದೆ......ಅವರು ಕೂಗುತ್ತಿದ್ದರು.." ಓಡು ಇಲ್ಲಿಂದ.... ಓಡು.... ಯಾರೋ ಭಯೋತ್ಪಾದಕರು ಗುಂಡು ಹಾರಿಸುತ್ತಿದ್ದಾರಂತೆ......  ಪಾಕಿಸ್ಥಾನದವರಂತೆ........ ತುಂಬಾ ಜನರನ್ನು ಸಾಯಿಸಿದ್ದಾರೆ.......  ನಾನು ತಪ್ಪಿಸಿಕೊಂಡು ಬಂದೆ....ನಡೆ....ಓಡು......ಅಲ್ಲಿ ಕುಳಿತುಕೊಳ್ಳೋಣಾ......." ನನಗೆ ತೋಚದಾಗಿತ್ತು....... ಮಗುವನ್ನು ಅವರೇ ಎತ್ತಿಕೊಂಡಿದ್ದರು...... ನಾವು ಓಡುತ್ತಾ ಒಂದು ಕಂಬದ ಹಿಂದೆ ನಿಂತೆವು....ಗುಂಡಿನ ಸದ್ದು ಹತ್ತಿರವಾಗುತ್ತಿತ್ತು....... ಜನರ ಕೂಗಾಟವೂ ಮೇರೆ ಮೀರಿತ್ತು...... ನನ್ನ ಗಂಡ ಮಗುವನ್ನು ನನ್ನ ಕೈಗಿತ್ತರು........ ನನ್ನನ್ನು ಬಿಗಿದಪ್ಪಿ ಹಿಡಿದರು....... ನಾನು ಕಣ್ಣು ಮುಚ್ಚಿದೆ.......

    ನಾವು ಕುಳಿತಿದ್ದ ಕಂಬದ ಹಿಂದೆ ನಿಂತೇ ಆ ಭಯೋತ್ಪಾದಕ ಗುಂಡು ಹಾರಿಸುತ್ತಿದ್ದ........ ನನ್ನ ಗಂಡ ಎದ್ದು ನಿಂತರು...... ನಾನು ಕಣ್ಣು ಬಿಟ್ಟೆ....... ಆ ಭಯೋತ್ಪಾದಕ ಇಷ್ಟ ಬಂದ ಹಾಗೆ ಗುಂಡು ಹಾರಿಸುತ್ತಿದ್ದ....... ಪುಸ್ತಕದಲ್ಲಿ ರಣರಂಗದ ಬಗ್ಗೆ ಕೇಳಿದ್ದೆ...ಈಗ ಕಣ್ಣೆದುರಿಗೇ ಇತ್ತು...... ಆ ಭಯೋತ್ಪಾದಕ " ಅಲ್ಲಾ ಹೋ ಅಕ್ಬರ್" ಎಂದು ಕೂಗುತ್ತಿದ್ದ...... ಕಂಡಕಂಡಲ್ಲಿ ಗುಂಡು ಹಾರಿಸುತ್ತಿದ್ದ.....ಆತನ ಮುಖದಲ್ಲಿ ಮಾನವೀಯತೆ ಒಂಚೂರು ಕಾಣಿಸುತ್ತಿರಲಿಲ್ಲ...... ಮಕ್ಕಳು, ಮಹಿಳೆ, ವ್ರದ್ಧರು ಯಾರನ್ನೂ ನೋಡುತ್ತಿರಲಿಲ್ಲ ಆತ...... ದೂರದಲ್ಲಿ ಕೆಲ ಪೋಲಿಸರು ಕಂಬದ ಮರೆಯಲ್ಲಿ ಅಡಗಿದ್ದರು.....ಅವರ ಕೈಲಿ ಬರೇ ಲಾಠಿಯಿತ್ತು....ಪಾಪ ಅವರಾದರೂ ಏನು ಮಾಡುತ್ತಿದ್ದರು........ ಸುಮಾರಾಗಿ ಎಲ್ಲಾ ಸತ್ತ ನಂತರ ಆತ ಕಂಬದ ಹಿಂದಿದ್ದ ನಮ್ಮನ್ನು ನೋಡಿದ....... ಅದರಲ್ಲೂ ನನ್ನ ಗಂಡ ಎದ್ದು ನಿಂತಿದ್ದರು...... ಆ ಭಯೋತ್ಪಾದಕ ನನ್ನ ಗಂಡನ ಕಡೆ ಬಂದೂಕು ಹಿಡಿದ..... ನನ್ನವರು ಕೂಗಿದರು....." ಬಿಟ್ಟು ಬಿಡು ನಮ್ಮನ್ನು....ನಾವು ಇಲ್ಲಿಯವರಲ್ಲ...ದೂರದಿಂದ ಬಂದಿದ್ದೇವೆ..... ಬಿಟ್ಟುಬಿಡು ನಮ್ಮನ್ನು....ನನ್ನ ಮಗಳ ಹರಕೆ ತೀರಿಸಲು ಬಂದಿದ್ದೇವೆ ಇಲ್ಲಿಗೆ....... " ಆತನ ಮುಖ ಚರ್ಯೆ ಬದಲಾಗಲಿಲ್ಲ.....ಆತ ಬಂದೂಕು ಹಿಡಿದು ಇನ್ನೂ ಮುಂದೆ ಬಂದ..... ನನ್ನವರು ಕೊನೆಯ ಪ್ರಯತ್ನವಾಗಿ..." ನಾನೂ ಮುಸ್ಲಿಂ......ಹಾಜಿ ಅಲಿಗೆ ಬಂದಿದ್ದೆವು....... ನೋಡು ಚಾದರ್ ತಂದಿದ್ದೇವೆ....." ಎನ್ನುತ್ತಾ ತಂದಿದ್ದ ಚಾದರ್ ತೋರಿಸಿದರು....... 

ಊರಿನಲ್ಲಿ ಎಲ್ಲರ ಜೊತೆ ಗಣೇಶೋತ್ಸವ ಆಚರಿಸುವ ನನ್ನ ಗಂಡ , ಜೀವ ಉಳಿಸಿಕೊಳ್ಳಲು ತಮ್ಮ ಧರ್ಮವನ್ನು ಗುರಾಣಿಯಾಗಿ ಉಪಯೋಗಿಸಲು ನೋಡಿದ್ದರು....ಆದರೆ ಆ ಭಯೋತ್ಪಾದಕನಿಗೆ ಜಾತಿಯಿರಲಿಲ್ಲ, ಧರ್ಮವಿರಲಿಲ್ಲ..... ಕನಿಷ್ಟ ಆತನ ಮುಖಚರ್ಯೆಯೂ ಬದಲಾಗಲಿಲ್ಲ.......  ಆತ ದಿಡಿರನೇ ಗುಂಡು ಹಾರಿಸಿದ.... ಗುಂಡು ಬಡಿದ ರಭಸಕ್ಕೆ ನನ್ನ ಗಂಡ ಮಾರು ದೂರಕ್ಕೆ ಹಾರಿ ಬಿದ್ದರು...... ಅವರ ಕೈಯಲ್ಲಿದ್ದ ಚಾದರ್ ನನ್ನ ಮೈ ಮೇಲೆ ಬಿತ್ತು....... ನನ್ನ ಗಂಡನ  ಮೈ ಪೂರಾ ರಕ್ತವಾಗಿತ್ತು...... ಕಣ್ಣು ಅರ್ಧ ತೆರೆದಿತ್ತು..... ಬಿದ್ದ ರೀತಿ ನೋಡಿದರೆ ಆಗಲೇ ಪ್ರಾಣ ಹೋಗಿತ್ತು....... ನನ್ನ ಮುಖದ ಮೇಲೂ ರಕ್ತ ಬಿದ್ದಿತ್ತು...... ಆ ಭಯೋತ್ಪಾದಕ ಬಂದೂಕನ್ನ ನನ್ನ ಕಡೆ ತಿರುಗಿಸಿದ...... ನಾನು ಎಚ್ಚೆತ್ತುಕೊಳ್ಳುವ ಮೊದಲೇ ಗುಂಡು ಹಾರಿಸಿಯೇ ಬಿಟ್ಟ... ಅದು ನನ್ನ ಮಗುವಿನ ಕಣ್ಣಿಗೇ ತಾಗಿತು...... ನನ್ನ ಮಗಳ ಕೂಗು ಇನ್ನೂ ಕಿವಿಯಲ್ಲಿದೆ ನನಗೆ...... ನನಗೆ ಏನೆನಿಸಿತೋ ಗೊತ್ತಿಲ್ಲ.....ಕೈಯಲ್ಲಿದ್ದ ದರ್ಗಾಗೆ ಕೊಡಲು ತಂದಿದ್ದ ಚಾದರದಿಂದ ಬೀಸಿ ಒಗೆದೆ "ಅಲ್ಲಾ ಹೋ ಅಕ್ಬರ್" ಎನ್ನುತ್ತಾ ಆತನ ಕಡೆಗೆ........ ಅದು ಬಿಡಿಸಿಕೊಳ್ಳುತ್ತಾ ಹೋಗಿ ಆತನ ಮುಖದ ಮೇಲೆ ಬಿತ್ತು....... ತುಂಬಾ ಉದ್ದವಾದ ಚಾದರ್ ಆಗಿದ್ದರಿಂದ ಆತ ಅದನ್ನು ಬಿಡಿಸಿಕೊಳ್ಳಲು ಆತನಿಗೆ ಸ್ವಲ್ಪ ಸಮಯ ಹಿಡಿಯಿತು..........ಅಷ್ಟರಲ್ಲಿ ಅಲ್ಲಿದ್ದ ಕೆಲ ಪೋಲೀಸರು ಮತ್ತು ಜನ ಸೇರಿ ಆತನನ್ನು ಹಿಡಿದಿದ್ದರು...... 

ನನ್ನ ಮಗಳ ಅಳು ಹೆಚ್ಚುತ್ತಿತ್ತು.....ಕೂಡಲೇ ಬಂದ ಅಂಬುಲನ್ಸ್ ನನ್ನ ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಯ್ತು....... ಆದರೆ ನನ್ನ ಗಂಡ ಮೇಲೇಳಲೇ ಇಲ್ಲ...... ನಂತರ ಸರಕಾರ ನನ್ನ ಮಗಳ ಉಪಚಾರ ಮತ್ತು ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ...... ಅದಕ್ಕೆ ನಾನು ಆಭಾರಿಯಾಗಿದ್ದೇನೆ.....
ನಾನು ಇಲ್ಲಿ ಹೇಳಬೇಕಾದ ಒಂದೇ ಮಾತಿದೆ.....ಭಯೋತ್ಪಾದನೆಗೆ ಜಾತಿಯಿಲ್ಲ...ಮತವಿಲ್ಲ...... ಅವರಿಗೆ ಬುದ್ಧಿಯೂ ಇಲ್ಲ..... " ಆಕೆ ತನ್ನ ಕಣ್ಣನ್ನ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು......

ನಮ್ಮೆಲ್ಲರ ಕಣ್ಣಲ್ಲೂ ನೀರಿತ್ತು....... ನಮ್ಮ ಕಾಲೇಜ್ ಪರವಾಗಿ ಹಿರಿಯ ಸ್ವಾತಂತ್ಯಗಾರರನ್ನೂ ಶಾಲು ಹೊದೆಸಿ ಸನ್ಮಾನಿಸಿದೆವು...... ಅಲೀಮಾ ಅವರ ಮಗಳು ಕಪ್ಪು ಕನ್ನಡಕ ಧರಿಸಿ ಚೂಟಿಯಾಗಿ ಓಡಾಡಿಕೊಂಡಿದ್ದಳು...... ನಾನು ಕಾರ್ಯಕ್ರಮದ ವಂದನಾರ್ಪಣೆ ಮಾಡಿದೆ....." ಅಲೀಮಾ ಮೇಡಂ ಮಾಡಿದ ಕೆಲಸ ಅವರಿಗೆ ತಿಳಿದೋ, ತಿಳಿಯದೆಯೋ ದೇಶಕ್ಕೆ ಒಳ್ಳೆಯದನ್ನೇ ಮಾಡಿದೆ...... ಹಾಜಿ ಅಲಿಗಾಗಿ ಕೊಂಡೊಯ್ದ ಚಾದರ್ ತುಂಬಾ ಜನರ ಪ್ರಾಣ ಉಳಿಸಿದೆ.... ಅದೂ ಸಹ ದೇವರ ಕೆಲಸವೇ ಆಗಿದೆ....... ನಿಮಗೆ ನಮ್ಮೆಲ್ಲರ ನಮನ......" ಎಂದೆ... ನನ್ನ ಕಣ್ಣು ಹನಿಗೂಡಿತ್ತು.....

ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದೆ......... ಆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಲೀಮಾ ಮೇಡಂ ರಸ್ತೆ ಬದಿಯಲ್ಲಿ ನಿಂತಿದ್ದರು...... ಅವರಿಗಾಗಿ ಕಾಲೇಜು ಮಂಡಳಿ ವಾಹನ ವ್ಯವಸ್ತೆ ಮಾಡಿತ್ತು.... ಅದು ಬರಲು ಸ್ವಲ್ಪ ಲೇಟ್ ಆಗಿತ್ತು ಅನಿಸತ್ತೆ........ ಎಮ್.ಎಲ್.ಎ ಸಾಹೇಬರ ವಾಹನ ಹೊರಡಲು ತಯಾರಾಗಿತ್ತು.... ನಾನು ಹೋಗಿ ಎಮ್.ಎಲ್.ಎ. ಆಪ್ತ ಕಾರ್ಯದರ್ಶಿ ಹತ್ತಿರ ಆ ಇಬ್ಬರನ್ನು ಅವರ ವಾಹನದಲ್ಲಿ ಕರೆದುಕೊಂಡು ಹೋಗಲು ವಿನಂತಿ ಮಾಡಿದೆ...... ಆತ ಹೋಗಿ ಎಮ್.ಎಲ್.ಎ. ಸಾಹೇಬರಿಗೆ ಹಾಗೆ ಹೇಳಿದ..... ನಾನು ಅವರಿಂದ ಸ್ವಲ್ಪವೇ ದೂರವಿದ್ದೆ...... ಅವರ ಮಾತು ನನ್ನ ಕಿವಿಗೆ ಕಾದ ಸೀಸದಂತೆ ಸುರಿದಿತ್ತು..." ಅಲ್ಲಾರೀ...ಇವರೆಲ್ಲಾ ಏನು ಮಹಾನ್ ಕಾರ್ಯ ಮಾಡಿದ್ದಾರೆ ಎಂದು ಸನ್ಮಾನ ಮಾಡಬೇಕ್ರೀ.....?... ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಆ ಸಮಯದಲ್ಲಿ ಏನು ಮಾಡಿದ್ದನೋ ಯಾವನಿಗೆ ಗೊತ್ತು....... ಏನೂ ಕೆಲಸವಿಲ್ಲದೇ ಇದ್ದಾಗ ಸುಮ್ಮನೇ ದೊಂಬಿ ಜಗಳಕ್ಕೆ ಹೋಗಿದ್ದಿರಬೇಕು......ಜೈಲಿಗೆ ಹಾಕಿರುತ್ತಾರೆ...... ಅದು ಈಗ   ಸ್ವಾತಂತ್ರ್ಯ ಹೋರಾಟಗಾರ  ಎಂಬ ಹೆಸರು ಸಿಕ್ಕಿದೆ......ಈಗಿನ ಸರಕಾರದಿಂದ ಪಿಂಚಣಿಯನ್ನೂ ಪಡೆಯುತ್ತಿದ್ದಾನೆ....... ಆಯಮ್ಮನದೂ ಅದೇ ಕಥೆ....... ಸಾವು ತಮ್ಮ ಬುಡಕ್ಕೆ ಬಂದಾಗ ಎಲ್ಲರೂ ಬಡಿದೇಳುತ್ತಾರೆ.... ಅವಳೂ ಮಾಡಿದ್ದೂ ಅದೇ.... ಅದರಲ್ಲೇನು ಮಹಾ ಕೆಲಸವಿದೆ.......!!!"   

Jul 18, 2012

ವಿಪರ್ಯಾಸ.....!!!




   ಮಧ್ಯಾನ್ಹದ ಚುಟುಕು ನಿದ್ದೆಯಲ್ಲಿದ್ದೆ.... ಮೊಬೈಲ್ ಕುಂಯ್ಗುಟ್ಟಿತು...... ನೋಡಿದರೆ ಮೆಸೇಜ್ ಇತ್ತು.... " ನಿಮ್ಮ ಕೆಮೆರಾ ಜೊತೆ ಹೊಟೆಲ್ ಮಾಯಾಕ್ಕೆ ಬನ್ನಿ.... ಸುದ್ದಿ ಇದೆ.." ಎಂದಿತ್ತು...... ಇಪ್ಪತ್ನಾಲ್ಕು ಘಂಟೆಯ ಸುದ್ದಿ ವಾಹಿನಿಗೆ ಕೆಲಸಕ್ಕೆ ಸೇರಿ ಮೂರು ತಿಂಗಳಾಗುತ್ತಾ ಬಂದಿದ್ದರೂ ಒಂದೂ ಬ್ರೇಕಿಂಗ್ ನ್ಯೂಸ್ ಕೊಡಲು ಆಗಿರಲಿಲ್ಲ.... ವರದಿಗಾರನ ಸ್ಟೇಟಸ್ ಈಗೀಗ ಬ್ರೇಕಿಂಗ್ ನ್ಯೂಸ್ ಮೇಲೆಯೇ ಅವಲಂಬಿತವಾಗಿರುತ್ತದೆ..... ಕೂಡಲೇ ಸಂಪಾದಕರಿಗೆ ಫೋನ್ ಮಾಡಿದೆ..... " ನಿಮ್ಮ ವಲಯದ ವರದಿಗಾರರು ಬೇರೆ ಕೆಲಸದ ಮೇಲೆ ಹೋಗಿದ್ದಾರೆ... ನೀವು ಹೋಗಿ ಶೂಟ್ ಮಾಡಿ ಬನ್ನಿ, ಆಡಿಯೋ ನಂತರ ಸೇರಿಸೋಣ" ಎಂದರು.... ಕೆಮೆರಾ ಎತ್ತಿಕೊಂಡವನೇ ಬೈಕ್ ಕಿಕ್ ಹೊಡೆದೆ...... 


ಹೊಟೆಲ್ ಮಾಯಾ ನನ್ನ ರೂಮಿನಿಂದ ಹತ್ತು ನಿಮಿಷದ ಬೈಕ್ ದಾರಿ....  ನಾನು ಹೊಟೆಲ್ ಮುಟ್ಟುತ್ತಲೇ ನಾಲ್ಕೈದು ಜನ ವರದಿಗಾರರೂ ಅಲ್ಲಿದ್ದರು.... ಜೊತೆಗೆ ಎಂಟು ಹತ್ತು ಜನ ಯುವ ವೇದಿಕೆಯ ಕಾರ್ಯಕರ್ತರೂ ಇದ್ದರು...."ಯುವ ವೇದಿಕೆ" ತಾವೇ ಘೋಷಿಸಿಕೊಂಡಂತೆ ಈ ನಾಡಿನ ಸಂಸ್ಕ್ರತಿ, ವಿಚಾರ, ಗೌರವದ ರಕ್ಷಕರೆಂದು ಹೇಳಿಕೊಳ್ಳುತ್ತಿದ್ದರು..... ಅಲ್ಲಿದ್ದ ಒಬ್ಬ ಯುವಕನನ್ನು ಕೇಳಿದೆ...." ಏನು ಸುದ್ದಿ...?"......  ಆತ" ಈ ಹೊಟೆಲ್ ನಲ್ಲಿ ಗಾಂಜಾ , ಚರಸ್ ಗಳ ಸರಬರಾಜಾಗುತ್ತಿದೆ....   ನಾವು ಸ್ತ್ರೀ ಜಾತಿಯನ್ನು ಮಾತೆಯರಂತೆ ಪೂಜಿಸುತ್ತೇವೆ.... ಆದರೆ ಈ ದಾರಿ ತಪ್ಪಿದ ಯುವ ಜನಾಂಗ ದುಡ್ಡಿನ ಮದದಲ್ಲಿ ಯುವತಿಯರ ದಾರಿ ತಪ್ಪಿಸಿ ಅವರನ್ನು ಕೆಟ್ಟದಾಗಿ ನೋಡುತ್ತಿದ್ದಾರೆ.... ಅರೆ ಬರೆ ಬಟ್ಟೆಯಲ್ಲಿ ಅವರನ್ನು ನಿಲ್ಲಿಸಿ, ಅವರನ್ನು ಭೋಗಿಸುತ್ತಿದ್ದಾರೆ...... ಇದೆಲ್ಲಕ್ಕೂ ಅಂತ್ಯ ಹಾಡಲೇ ಬೇಕು.." ಮೈಕ್ ಇಲ್ಲದಿದ್ದರೂ ಆತ ಭಾಷಣ ಹೊಡೆಯುತ್ತಿದ್ದ...... ಅಷ್ಟರಲ್ಲಿ ಒಬ್ಬ" ಹೋಗೋಣ ನಡೆಯಿರಿ, ಕೆಮೆರಾ ಚಾಲು ಇರಲಿ" ಎಂದ......


ನಾನು ಕೆಮೆರಾ ಸೆಟ್ ಮಾಡಿಕೊಂಡೇ ಒಳಗೆ ಓಡಿದೆ..... ಮುಖ್ಯ ಧ್ವಾರದಲ್ಲಿದ್ದ ಸೆಕ್ಯುರಿಟಿಗೆ ಒಬ್ಬ ಯುವ ವೇದಿಕೆಯ ಯುವಕ ಹೊಡೆಯುತ್ತಿದ್ದ..... ನಾನು ಅದನ್ನೂ ಶೂಟ್ ಮಾಡಿದೆ...... ಒಂದು ನಿಮಿಶದ ಶಾಟ್ ನಂತರ ಆ ಯುವಕನನ್ನು ದೂಡಿದೆ..." ನಾವು ಬಂದ ಕೆಲಸದ ಮೇಲೆ ಗಮನ ಇಡು"....ಎಂದೆ...... ಒಳಕ್ಕೆ ಓಡಿದೆ....ಹೊರಗಡೆಯಿಂದ ಸಾಧಾರಣವಾಗಿ ಕಾಣುವ ಈ ಹೊಟೆಲ್ ಒಳಗಡೆಯಿಂದ  ಸ್ವರ್ಗದಂತೆಯೇ ಇತ್ತು..... ಝಗಮಗಿಸುವ ಬಣ್ಣ ಬಣ್ಣದ ದೀಪಗಳು ಸ್ವರ್ಗವನ್ನೂ ನಾಚಿಸುವಂತೆ ಇದ್ದವು...... ನಾಲ್ಕೈದು ಮಾರು ದೂರದಲ್ಲಿ ಒಂದು ಸ್ಟೇಜ್ ಇತ್ತು....ಅಲ್ಲಿ ಇಪ್ಪತ್ತು ಜನರ ಗುಂಪಿತ್ತು.... ಎಚ್ಚರಿಕೆಯಿಂದ ಅವರನ್ನೇ ಫ಼್ಹೋಕಸ್ ಮಾಡಿದೆ..... ಹತ್ತು ಜನ ಹುಡುಗ, ಹತ್ತು ಜನ ಹುಡುಗಿಯರಿದ್ದರು.... ನಾವೆಲ್ಲಾ ಒಳಕ್ಕೆ ಬಂದಿದ್ದರೂ ಅವರಿಗೆ ನಮ್ಮ ಗಮನವೇ ಇರಲಿಲ್ಲ..... ಹುಡುಗಿಯರ ಬಟ್ಟೆಯೂ ಅರೆಬರೆಯಾಗಿತ್ತು...... ಯಾವುದೋ ಗುಂಗಿನಲ್ಲಿ ಇದ್ದ ಹಾಗಿತ್ತು..... ನಾನು ಎಲ್ಲವನ್ನೂ ಕೆಮೆರಾ ಕಣ್ಣಿನಿಂದಲೇ ನೋಡುತ್ತಿದ್ದೆ...... ಯುವ ವೇದಿಕೆಯ ಎಲ್ಲರೂ ಸ್ಟೇಜ್ ಹತ್ತಿ ಅಲ್ಲಿದ್ದ ಹುಡುಗ ,ಹುಡುಗಿಯರಿಗೆ ಹೊಡೆಯಲು ಶುರು ಮಾಡಿದರು....... ನಾನು ಎಲ್ಲವನ್ನೂ ಶೂಟ್ ಮಾಡುತ್ತಿದ್ದೆ...... ಯುವ ವೇದಿಕೆಯ ಒಬ್ಬ ಹುಡುಗ ಅಲ್ಲಿದ್ದ ಒಬ್ಬಳು ಹುಡುಗಿಯನ್ನು ಹೊಡೆಯಲು ಶುರು ಮಾಡಿದ..... ನಾನು ಶೂಟ್ ಮಾಡುತ್ತಲೇ ಇದ್ದೆ.... ಅಲ್ಲಿಗೆ ಟೈ ಕಟ್ಟಿದ್ದ ಒಬ್ಬಾತ ಓಡಿ ಬಂದು ತಾನು ಮೆನೇಜರ್ ಎಂದು ಹೇಳಿಕೊಂಡ...... ಯಾರೂ ಆತನನ್ನು ಕೇಳುತ್ತಲೇ ಇರಲಿಲ್ಲ...... ನಾನು ಕೇವಲ ಕೆಮೆರಾ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದೆ....   ಯುವ ವೇದಿಕೆಯ ಎಲ್ಲರೂ ಹೊಡೆಯುವುದರಲ್ಲಿಯೇ ಇದ್ದರು........ 


    ಕೇವಲ ಹತ್ತು ನಿಮಿಷದ ಹಿಂದೆ ಸ್ತ್ರಿಯರನ್ನು ಮಾತೆಯರಂತೆ ಪೂಜಿಸುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಯುವಕನನ್ನು ಹುಡುಗನನ್ನು ಹುಡುಕುತ್ತಿದ್ದೆ..... ಆತ ಒಬ್ಬಳು ಹುಡುಗಿಯನ್ನು ಮನಬಂದಂತೆ ಹೊಡೆಯುತ್ತಿದ್ದ...... " ನಿಮ್ಮಿಂದಲೇ ಹುಡುಗರೆಲ್ಲಾ ಹಾಳಾಗಿದ್ದೆ..... ಮೈಯನ್ನು ಅರ್ಧಂಭರ್ಧ ತೋರಿಸುತ್ತಾ ತಿರುಗಾಡಿದರೆ ಯಾವ ಹುಡುಗ ನಿಮ್ಮ ಮೇಲೆ ಆಶೆ ಪಡಲ್ಲ..... ಮನೆಯಲ್ಲೇ ಬಿದ್ದಿರಬೇಕು ನೀವು....." ಎಂದೆಲ್ಲಾ ಹೇಳುತ್ತಲೇ ಹೊಡೆಯುತ್ತಿದ್ದ...... ನನ್ನ ಕೆಮೆರಾ ಎಲ್ಲವನ್ನೂ ರೆಕೊರ್ಡ್ ಮಾಡುತ್ತಿತ್ತು....... ಅಲ್ಲಿದ್ದ ಹುಡುಗರಲ್ಲಿ ಕೆಲವರು ಓಡಿ ಹೋಗಿದ್ದರು..... ಕೆಲವು ಹುಡುಗಿಯರೂ ಓಡುತ್ತಿದ್ದರು.....ಯುವ ವೇದಿಕೆಯವರು ಅವರನ್ನೂ ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಿದ್ದರು..... ನನ್ನ ಜೊತೆ ಇದ್ದ ಕೆಮೆರಾಮೆನ್ ಎಲ್ಲರೂ ಅವರ ಹಿಂದೇನೆ ಓಡುತ್ತಾ ಶೂಟ್ ಮಾಡುತ್ತಿದ್ದರು.... ನಾನೂ ಓಡಿದೆ..... ಅವರ ಹಿಂದೆ.........
  
 ಓಡುತ್ತಾ ಶೂಟ್ ಮಾಡುತ್ತಿದ್ದೆ......ನನ್ನ ಮುಂದಕ್ಕೆ ಓಡಿ ಹೋಗುತ್ತಿದ್ದ ಒಬ್ಬಳು ಹುಡುಗಿಯನ್ನು ಯುವ ವೇದಿಕೆಯ ಸದಸ್ಯನೊಬ್ಬ ಜೋರಾಗಿ ದೂಕಿದ...... ಆಕೆ ದೂಕರಿಸಿ ಹೋಗಿ ಒಂದು ಕಂಬಕ್ಕೆ ತಾಗಿ ಕೆಳಗೆ ಬಿದ್ದಳು........ ತಲೆಯಿಂದ ರಕ್ತ ಬರಲು ಶುರು ಆಗಿತ್ತು..... ಎಲ್ಲಾ ಕೆಮೆರಾಮೆನ್ ಗಳೂ ಅವಳ ಸುತ್ತ ನಿಂತು ಶೂಟ್ ಮಾಡುತ್ತಿದ್ದರು...... ನಾನೂ ಅವರಲ್ಲಿ ಒಬ್ಬನಾದೆ...... ತಲೆಯಿಂದ ರಕ್ತ ಒಸರುತ್ತಿತ್ತು....... ಒಂದು ಕೈಯಿಂದ ತಲೆ ಒತ್ತಿ ಹಿಡಿದಿದ್ದಳು ಆಕೆ, ಇನ್ನೊಂದು ಕೈಯಿಂದ ಹರಿದು ಹೋದ ಬಟ್ಟೆ ಸರಿಪಡಿಸಿಕೊಳ್ಳುತ್ತಿದ್ದಳು..... ಅಲ್ಲೇ ಇದ್ದ ಯುವ ವೇದಿಕೆ ಸದಸ್ಯನೊಬ್ಬ ಆಕೆಯನ್ನು ಒದೆಯಲು ಶುರು ಮಾಡಿದ....... ಹೊಟ್ಟೆಯ ಮೇಲೆ ಒದೆಯುತ್ತಿದ್ದ ಆತ...... ಆಕೆ ಕೂಗುತ್ತಿದ್ದಳು...... ಆತ ಒದೆಯುತ್ತಲೇ ಇದ್ದ..... ನನ್ನ ಕೆಮೆರಾ ಕಣ್ಣುಗಳಿಗೆ ಆಕೆ ಪ್ರಜ್ನೆ ತಪ್ಪುವುದು ಕಾಣಿಸುತ್ತಿತ್ತು...... ನನಗೆ ಇದ್ಯಾಕೊ ಅತೀ ಎನಿಸಿತು...... ನಮ್ಮ ಸಂಸ್ಕ್ರತಿ, ಸ್ತ್ರಿ ಗೌರವದ ಬಗ್ಗೆ ಮಾತನಾಡುತ್ತಿದ್ದ ಇವರೇನಾ ಈಗ ಈ ರಿತಿ ಹೊಡೆಯುತ್ತಿರುವುದು?... ತಪ್ಪು ನಡೆಯುತ್ತಿದ್ದರೆ ಅದನ್ನು ನಿಲ್ಲಿಸಬೇಕೋ ಹೊರತು ಹೀಗೆ ಹೊಡೆದರೆ ಸರಿ ಆಗತ್ತಾ..? ಹೀಗೆ.....ಮನದಲ್ಲಿ ನೂರಾರು ಪ್ರಶ್ನೆಗಳು ಮೂಡುತ್ತಿದ್ದವು.......


  ಕೆಳಗೆ ಬಿದ್ದಿದ್ದ ಹುಡುಗಿ ಪ್ರಜ್ನೆ ತಪ್ಪುವ ಹಾಗೆ ಕಾಣುತ್ತಿತ್ತು...... ನನಗೆ ಯಾಕೊ ಸರಿ ಕಾಣಲಿಲ್ಲ...... ದೌರ್ಜನ್ಯ ನಡೆಯುತ್ತಿದ್ದರೂ ಅದನ್ನ ತಡೆಯದೇ , ಅದನ್ನ ವರದಿ ಮಾಡುವುದರಲ್ಲಿ ಯಾವ ಪುರುಶಾರ್ಥ ಇದೆ ಎನಿಸಿತು.... ಕೆಮೆರಾ ಪಕ್ಕಕ್ಕಿಟ್ಟೆ...... ಆ ಹುಡುಗಿಯನ್ನು ಎತ್ತಿಕೊಂಡೆ..... ಹೊರಗಡೆ ಓಡಿದೆ..... ಉಳಿದ ಕೆಮೆರಾಮೆನ್ ಗಳು ನನ್ನನ್ನೂ ಶೂಟ್ ಮಾಡುತ್ತಾ ನನ್ನ ಹಿಂದೆಯೇ ಓಡಿ ಬಂದರು...... ನಾನು ಆಟೊ ಹತ್ತಿ ಹಾಸ್ಪಿಟಲ್ ಕಡೆ ಹೊರಟೆ..... 


  ಆ ಹುಡುಗಿಯನ್ನು ಅಡ್ಮಿಟ್ ಮಾಡಿ ಹೊರಬಂದೆ..... ವರಾಂಡಾದಲ್ಲಿದ್ದ ಟಿ ವಿ ಯಲ್ಲಿ ಇದೇ ಸುದ್ದಿಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು......
" ಪಬ್ ಮೇಲೆ ದಾಳಿ..... ಮಹಿಳೆಯರ ಮೇಲೆ ದೌರ್ಜನ್ಯ"...... 
"ಪಬ್ ಮೇಲೆ ದಾಳಿ..... ಮಹಿಳೆಯನ್ನು ಬಚಾವ್ ಮಾಡಿದ ಮಾಧ್ಯಮ ವರದಿಗಾರ..".....
ತಕ್ಷಣಕ್ಕೆ ನೆನಪಾಗಿದ್ದು... ನಮ್ಮ ಸಂಪಾದಕರು.... ಮೊಬೈಲ್ ತೆಗೆದೆ..... ಸಂಪಾದಕರದೇ ಹದಿನೈದು ಮಿಸ್ ಕಾಲ್ ಇತ್ತು..... ಹೊಟೆಲ್ ಒಳಗಡೆ ಹೊಗುವಾಗ ಮೊಬೈಲ್ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೆ....... ಸಂಪಾದಕರಿಗೆ ಫೋನ್ ಮಾಡಿದೆ........ " ಎಲ್ಲಿದ್ದೀಯಾ..... ? ನಮ್ಮ ವಾಹಿನಿಯ ವರದಿಗಾರರಿದ್ದೂ ನಾನು ವೀಡಿಯೋವನ್ನು ದುಡ್ಡು ಕೊಟ್ಟು ಬೇರೆ ವಾಹಿನಿಯಿಂದ ಕೊಂಡುಕೊಳ್ಳಬೇಕಾ...? ಅದೇ ಸುದ್ದಿ ತರಲು ಹೋಗಿದ್ದಲ್ಲವಾ ನೀನು...? ಮತ್ತೇಕೆ, ನಮಗೆ ವೀಡಿಯೋ ತಲುಪಿಲ್ಲ......? " ಒಂದೇ ಸಮನೆ ಪ್ರಶ್ನೆ ಕೇಳುತ್ತಿದ್ದರು......... ನಾನು ಎಲ್ಲವನ್ನೂ ವಿವರಿಸಿದೆ......." ಬ್ರೇಕಿಂಗ್ ನ್ಯೂಸ್ ನಲ್ಲಿ ಬರುತ್ತಿರುವ ಹಾಗೆ ಮಹಿಳೆಯನ್ನು ಬಚಾವ್ ಮಾಡಿದ ವರದಿಗಾರ ನಾನೆ ಸಾರ್.." ಎಂದೆ.... ಅವರು ಸುಮ್ಮನಾದರು....." ನಾಳೆ ಬಂದು ನನ್ನ ಚೇಂಬರ್ ನಲ್ಲಿ ಭೇಟಿ ಮಾಡು" ಎಂದು ಫೋನ್ ಕಟ್ ಮಾಡಿದರು.......


  ಮಾರನೇ ದಿನ ಎಲ್ಲರಿಗಿಂತ ಮೊದಲೇ ನಾನು ಸ್ಟುಡಿಯೋದಲ್ಲಿದ್ದೆ..... ಎಲ್ಲರೂ ನನ್ನನ್ನು ಅಭಿನಂಧಿಸುತ್ತಿದ್ದರು....... ಅಷ್ಟರಲ್ಲೇ ಸಂಪಾದಕರು ಬಂದರು.... ನಾನು ಅವರ ಹಿಂದೆಯೇ ಹೋದೆ..... ಅವರ ಚೇರ್ ನಲ್ಲಿ ಕುಳಿತು ಒಂದು ಕವರ್ ಕೊಟ್ಟರು......" ಒಂದು ಯುವತಿಯ ಪ್ರಾಣ ಉಳಿಸಿ ಒಳ್ಳೆಯ ಕೆಲಸ ಮಾಡಿದ್ದೀಯಾ... ಆದರೆ ನಮ್ಮ ಕೆಲಸ ಸುದ್ದಿ ತರೋದೆ ಹೊರತು ನಾವೇ ಸುದ್ದಿಯಾಗೋದು ಅಲ್ಲ..... ಯು ಮೆ ಗೋ ನೌ" ಎಂದರು 


ನನಗೆ ಏನೂ ತಿಳಿಯಲಿಲ್ಲ......ಕವರ್ ಓಪನ್ ಮಾಡಿದೆ...... YOU ARE TERMINATED     ಎಂದಿತ್ತು......

Jan 26, 2012

ವಿಷ್ಯ ಏನಪ್ಪಾ ಅಂತಂದ್ರೆ......!!!!

ತುರ್ತಾಗಿ ಏನೋ ಕೆಲಸವಿದ್ದರಿಂದ ಬೇಗನೆ ಆಫೀಸಿಗೆ ಬಂದಿದ್ದೆ...... ಯಾವುದೋ ಫೈಲ್ ನಲ್ಲಿ ತಲೆ ಹೊಕ್ಕಿಸಿ ಕುಳಿತಿದ್ದೆ..... ನನ್ನ ಜೊತೆ ಕೆಲಸ ಮಾಡುತ್ತಿದ್ದ ಸ್ನೇಹಿತನೊಬ್ಬ ಸ್ವಲ್ಪ ಲೇಟ್ ಆಗಿ ಬರುತ್ತಿದ್ದ... ಅವತ್ತು ಇನ್ನೂ ಲೇಟ್ ಆಗಿದ್ದ... ಫೋನ್ ಮಾಡಿ ಕೇಳೋಣ ಎನಿಸಿ ಸೆಲ್ ತೆಗೆದೆ.... ಆಗ ಆಫಿಸ್ ಒಳಗೆ ಬಂದ ಭೂಪ....  ಯಾವುದೋ ಲೋಕದಲ್ಲಿಯೇ ಇದ್ದವನಂತೆ ನಡೆದು ಬರುತ್ತಿದ್ದ.... ಆವತ್ತು ಸ್ವಲ್ಪ ಚೇಂಜ್ ಕಾಣುತ್ತಿದ್ದ.... ಇನ್ ಶರ್ಟ್ ಮಾಡಿದ್ದ..... ಹಾಗಾಗಿ ಚೆನ್ನಾಗಿ ಕಾಣುತ್ತಿದ್ದ....


" ಏನಪ್ಪಾ ರಾಜಾ.... ಏನು ಲೇಟ್.... ಭಾರಿ ಖುಶಿಯಾಗಿ ಇರೋ ಹಾಗಿದೆ... ಏನು ವಿಶ್ಯ...?" ಎಂದೆ..... ಆತ ಇನ್ನೂ ಯಾವುದೋ ಲೋಕದಲ್ಲಿಯೇ ಇದ್ದ..... " ಹೇಯ್ ನಾನು ಹೇಗೆ ಕಾಣ್ತಾ ಇದ್ದೇನೆ ಹೇಳೋ.... ?" ಅಂದ.... ನಾನು ಅವನನ್ನೇ ನೋಡಿದೆ.... ಸಾಧಾರಣ ಬಣ್ಣದ , ಸ್ವಲ್ಪ ಕೋಲು ಮುಖದ, ತಲೆಯ ಎರಡೂ ಕಡೆ ಅಲ್ಪ ಸ್ವಲ್ಪ ತಲೆಕೂದಲು ಉದುರಿತ್ತು.... ಆದರೂ ಹುಡುಗ ಚೆನ್ನಾಗಿ ಕಾಣುತ್ತಿದ್ದ..... " ಯಾಕಪ್ಪ ಏನಾಯ್ತು...? ಯಾರಾದ್ರು ಏನಾದ್ರೂ ಅಂದ್ರಾ...? " ಎಂದೆ.... "ಯಾಕೋ ಮನಸ್ಸು ಖುಶಿಯಾಗಿದೆ ಕಣೋ.... " ಎಂದ... "ಏನಾಯ್ತು .... ಅದನ್ನಾದ್ರೂ ಹೇಳು...." ಎಂದೆ....ಆತನ ಕಥೆಯನ್ನು ಆತನ ಬಾಯಲ್ಲೇ ಕೇಳಿ.... 


          " ಇವತ್ತು ಎಂದಿನಂತೆ ಲೇಟ್ ಆಗಿ ಎದ್ದೆ.... ಏಳೋ ಹೊತ್ತಿಗೇ ಎಂಟಾಗಿತ್ತು..... ಸ್ನಾನಕ್ಕೆ ಹೋಗೋವಾಗ ಮ್ಯಾಗ್ಗಿ ಸ್ಟೋವ್ ಮೇಲೆ ಇಟ್ಟು ಹೋಗಿದ್ದೆ..... ಸ್ನಾನಮುಗಿಸಿ ಬಂದಾಗ ಮ್ಯಾಗಿ ಬ್ರೆಡ್ ಆಗಿತ್ತು... ಬೇಕಾದಷ್ಟು ನೀರು ಹಾಕೋದನ್ನು ಮರೆತಿದ್ದೆ... ಸಂಜೆ ಬಂದು ತೊಳೆದರಾಯಿತು ಎಂದುಕೊಂಡು ತೆಗೆದು ಪಕ್ಕದಲ್ಲಿಟ್ಟೆ...  ಬೇಗ ಬೇಗನೆ ರೆಡಿಯಾಗಿ ಹೊರ  ಬಂದೆ..... ಹೊರ ಬಂದು ರೂಮ್ ಬಾಗಿಲಿಗೆ ಲಾಕ್ ಮಾಡುತ್ತಿದ್ದೆ.... ಪಕ್ಕದ ಮನೆಯ ಹುಡುಗಿ ಅಲ್ಲೇ ನಿಂತಿದ್ದಳು.... ಅವರ ಮನೆಯಲ್ಲಿಯೇ ನಾನು ಕೀ ಕೊಟ್ಟು ಹೋಗುತ್ತಿದ್ದೆ.... ಊರಿನಿಂದ ಅಪ್ಪ ಬರುವವರಿದ್ದರು.... ಕೀ ಕೊಡಲು ಹೋದಾಗ ಅವಳು ನನ್ನ ನೋಡಿ ನಕ್ಕಳು......ಅವಳೇನೂ ಚಿಕ್ಕ ಹುಡುಗಿಯಲ್ಲ.... ಡಿಗ್ರಿ ಮುಗಿಸಿ ಮನೆಯಲ್ಲೇ ಇದ್ದಳು...  ನನಗೆ ಒಂಥರಾ ಆಯಿತು.... ಈ ಮೊದಳು ಅವಳಲ್ಲಿ ಮಾತನಾಡಿರಲಿಲ್ಲ..... ಕೀ ಅವಳ ಕೈಯಲ್ಲಿಟ್ಟೆ.... ಅವಳು ಕೈಯನ್ನು ಬಾಯಿಗೆ ಅಡ್ಡವಾಗಿಟ್ಟು ನಗುತ್ತಿದ್ದಳು... ಕೈ ಅಡ್ಡವಾಗಿಟ್ಟರೂ ಅವಳ ತುಟಿ ಸೇಳೆಯುತ್ತಿತ್ತು... ನನ್ನನ್ನು ನೋಡಿ ನಕ್ಕಿದ್ದಕ್ಕೆ ನನಗೆ ಖುಶಿಯಾಗಿತ್ತು..... ನನ್ನ ಮುಖದಲ್ಲೂ ನಗು ಮೂಡಿತ್ತು....
       
     ಬಸ್ ಗಾಗಿ ಕಾಯುತ್ತಿದ್ದೆ ... ಪಕ್ಕದಲ್ಲೇ ಒಬ್ಬ ಹುಡುಗ ಬಂದು ನಿಂತ...... ಆತನ ಪಕ್ಕದಲ್ಲಿ ಒಬ್ಬಳು ಹುಡುಗಿಯೂ ಇದ್ದಳು.... ಆಕೆ ನನ್ನ ಕಡೆ ನೋಡಿ ನಕ್ಕಳು... ಅಯ್ಯೋ... ಇದೇನು ಎಲ್ಲರೂ ನನಗೆ ಸ್ಮೈಲ್ ಕೊಡ್ತಾ ಇದ್ದಾರಲ್ಲಾ ಎನಿಸಿತು.....ಖುಶಿಯೂ ಆಯಿತು... ಆ ಹುಡುಗಿ ತನ್ನ ಹುಡುಗನಿಗೆ ನನ್ನ ಕಡೆ ತೋರಿಸುತ್ತಿದ್ದಳು.... ಅಮ್ಮಾ.... ಇದೇನಪ್ಪಾ.... ನಾನೇನಾದರೂ ತಪ್ಪು ಮಾಡಿದೆನಾ....? ಆ ಹುಡುಗಿಯನ್ನು ಎಲ್ಲೂ ನೋಡಿದ ಹಾಗಿಲ್ಲ...ಮತ್ಯಾಕೆ...? ಈಗ ಆ ಹುಡುಗನೂ ನನ್ನ ಕಡೆ ನೋಡಿ ನಗುತ್ತಿದ್ದ..... ನಾನು ಕೈಯಲ್ಲೇ ವೇವ್ ಮಾಡಿದೆ.... ಆತನೂ ನಗಲು ಶುರು ಮಾಡಿದ.... ನನಗೋ ಅಯೋಮಯ.... ನಾನೂ ನಕ್ಕೆ... ಅಷ್ಟರಲ್ಲೇ ಬಸ್ ಬಂತು.... ಈ ನಗೆಯಾಟದಿಂದ ನನಗೆ ಬಚಾವ್ ಆಗಬೇಕಿತ್ತು.... ಬೇಗನೆ ಬಸ್ ಹತ್ತಿದೆ......


   ಕುಳಿತುಕೊಳ್ಳಲು ಸೀಟ್ ಇರಲಿಲ್ಲ.... ಮುಂದಿನಿಂದ ನಾಲ್ಕನೇ ಸೀಟಿನ ಪಕ್ಕ ನಿಂತೆ..... ನಾನು ನಿಂತ ಮುಂದಿನ  ಸೀಟ್ ನಲ್ಲಿ ಪುಟ್ಟ ಮಗುವೊಂದು ನಿಂತುಕೊಂಡಿದ್ದಳು..... ಸೀಟ್ ಮೇಲೆ ನಿಂತು ಹಿಂದಕ್ಕೆ ನೋಡುತ್ತಿದ್ದಳು... ಶಾಲೆಯ ಸಮವಸ್ತ್ರ ಧರಿಸಿದ್ದ ಹುಡುಗಿ ನನ್ನ ನೋಡಿ ನಕ್ಕಳು..... ನಾನು ನಕ್ಕೆ... ನನಗೆ ಮಕ್ಕಳೆಂದರೆ ತುಂಬಾ ಖುಶಿ.... ಆ ಮಗು ತನ್ನ ಅಮ್ಮನಿಗೆ ನನ್ನನ್ನು ತೋರಿಸಿದಳು..... ಅವರು ನನ್ನ ಕಡೆ ನೋಡಿ ಮಗಳಿಗೆ ” ವ್ಹಾಟ್ " ಎಂದು ಕೇಳಿದರು....ಆ ಪುಟ್ಟಮ್ಮ ತನ್ನ ಮುದ್ದಾದ ಕೈಯಿಂದ ನನ್ನ ಕಡೆ ತೋರಿಸುತ್ತಿದ್ದಳು....... ಆ ಪುಟ್ಟ ಬೆರಳು ನನ್ನ ಹೊಟ್ಟೆ ಕಡೆ ತೋರಿಸುತ್ತಿತ್ತು...... ನನಗೆ ನನ್ನ ಮೇಲೆ ಸಿಟ್ಟು ಬಂತು.... ಎಂದಿನ ಹಾಗೆ ’ನಾಳೆಯಿಂದಲೇ ವಾಕಿಂಗ್ ಶುರು ಮಾಡಬೇಕು’ ಎಂದುಕೊಂಡು ಉಸಿರು ಹಿಂದಕ್ಕೆ ಎಳೆದುಕೊಂಡು ಹೊಟ್ಟೆ ಚಿಕ್ಕದು ಮಾಡುವ ವಿಫಲ ಪ್ರಯತ್ನ ಮಾಡಿದೆ... ನನ್ನ ಹೊಟ್ಟೆಯ ಕಡೆ ನೋಡಿ ಆ ಹುಡುಗಿಯ ಅಮ್ಮ ಅವಳನ್ನು ತಿರುಗಿಸಿ ಕುಳ್ಳಿಸಿಕೊಂಡರು .... ಆ ಹುಡುಗಿಯೋ, ನನ್ನ ಹೊಟ್ಟೆಯನ್ನು ನೋಡಿದ್ರೆ, ಅವಳ ಅಮ್ಮ ಅವಳ ತಲೆಯ ಮೇಲೆ ಮೊಟಕಿ ಕುತ್ತಿಗೆ ತಿರುಗಿಸುತ್ತಿದ್ದರು... ನನಗಂತೂ ಏನೂ ಅರ್ಥವಾಗುತ್ತಿರಲಿಲ್ಲ.... ಅಷ್ಟರಲ್ಲೇ ಆಫಿಸು ಬಂದಿದ್ದಕ್ಕೆ ಬಚಾವಾದೆ...... ಕೂಡಲೇ ಇಳಿದು ಬಂದೆ...... " ಎಂದು ತನ್ನ ಕಥೆ ಮುಗಿಸಿದ.....


  " ಹೇಳು, ಏನು ಸ್ಪೆಷಲ್ ಕಾಣಿಸ್ತಾ ಇದೀನಿ ಇವತ್ತು ..? " ಎಂದ.... ನಾನು ಇನ್ನೂ ಅವನನ್ನೇ ಗಮನಿಸಿದೆ... ಗುಲಾಬಿ ಬಣ್ಣದ ಶರ್ಟ್ ನ ಮೇಲೆ ನೀಲಿ ಬಣ್ಣದ ಟೈ ಕಟ್ಟಿದ್ದ.... ನೀಟ್ ಆಗಿ ಶೇವ್ ಮಾಡಿದ್ದ.... " ಎದ್ದು ನಿಂತ್ಕೋ ಒಮ್ಮೆ" ಎಂದೆ....  ಆತ ಎದ್ದು ನಿಂತ.....ಶಾಕ್!!!!!!!! ನನಗೆ..... ಕೂಡಲೇ ನಗು ಬಂತು....... ಜೋರಾಗಿ ನಕ್ಕೆ........  ಆತನಿಗೆ ಇನ್ನೂ ಮುಜುಗರವಾಯಿತು ಎನಿಸುತ್ತದೆ..... " ಹೇಯ್... ಏನಾಯ್ತೋ....?" ಎಂದ..... " ಎಲ್ಲಾ ಹುಡುಗಿಯರು, ಅಮ್ಮಂದಿರು, ಮಕ್ಕಳು ನಿನ್ನನ್ನು ನೋಡಿ ನಕ್ಕಿದ್ದು ಯಾಕೆ ಅಂತ ಈಗ ಗೊತ್ತಾಯ್ತು" ಎಂದೆ...... ಆತನಿಗೆ ಕುತೂಹಲ..." ಯಾಕೆ ಹೇಳು...? " ಎಂದ......
  ನಾನು " ರಾಜಾ..... ಪ್ಯಾಂಟ್ ಹಾಕಿಕೊಂಡ ಮೇಲೆ ಅದಕ್ಕೆ ಜಿಪ್ ಹಾಕದೇ ಹಾಗೆ ಬಿಟ್ಟರೆ ಎಲ್ಲರೂ ನಿನ್ನನ್ನು ನೋಡದೆ ಎನು ಮಾಡ್ತಾರೆ ಹೇಳು...." ಎಂದೆ.... ಆಗ ಆತನ ಸ್ಥಿತಿ ನೋಡುವ ಹಾಗಿತ್ತು..... 


  ಅಷ್ಟರಲ್ಲೇ ನಮ್ ಬಾಸ್ ಬಂದಿದ್ದರಿಂದ ನಮ್ಮ ನಗು ಬಂದ್ ಆಯ್ತು..... ಅವರು ಬಂದವರೇ ನನ್ನ ಎದುರಿನ ಸೀಟ್ ನಲ್ಲೇ ಕುಳಿತುಕೊಂಡರು.... ನನ್ನ ಬಳಿ ಪ್ರೊಜೆಕ್ಟ್ ಬಗ್ಗೆ ಮಾತನಾಡತೊಡಗಿದರು..... ನನ್ನ ಸ್ನೇಹಿತ.. ಅದೇ ಜಿಪ್ ಸ್ನೇಹಿತ.... ಮಧ್ಯದಲ್ಲೇ ಬಾಯಿ ಹಾಕಿ....." ಸರ್, ನಿಮ್ಮನ್ನು ನೋಡಿ ಯಾರಾದರೂ ಸೈಲ್ ಕೊಟ್ರಾ...? " ಎಂದ..... ನಾನು ಅವನ ಕಡೆ ನೋಡಿದೆ.. ಆತ ನಗುತ್ತಿದ್ದ.... ಅವರು " ಇಲ್ಲ, ನನಗೆ ಯಾರೂ ಸಿಗಲಿಲ್ಲ... ನಾನು ನನ್ನ ಕಾರಿನಲ್ಲಿ ಬಂದೆ..... ಯಾಕೆ...?" ಎಂದರು.... ನನಗೆ ಇದ್ಯಾಕೆ ಇವ ಹೀಗೆ ಕೇಳ್ತಾ ಇದ್ದಾನೆ ಎನಿಸಿತು....." ಸರ್ ನೀವು ಬಸ್ ನಲ್ಲಿ ಬಂದಿದ್ದರೆ ನಿಮಗೆ ಅರ್ಥವಾಗುತ್ತಿತ್ತು" ಎಂದ ನನ್ನ ಸ್ನೇಹಿತ.... ನನಗೆ ಅರ್ಥವಾಗತೊಡಗಿತು..... ನಾನು ಬಾಸ್ ಫ್ಯಾಂಟ್ ಜಿಪ್ ಕಡೆ ನೋಡಿದೆ.... ಅದು ಓಪನ್ ಆಗಿತ್ತು......